3

ಇಎಸ್‌ಐಸಿ ಆಸ್ಪತ್ರೆ: ಎಲ್ಲರಿಗೂ ಚಿಕಿತ್ಸೆ ಲಭ್ಯ

Published:
Updated:

ಕಲಬುರ್ಗಿ: ‘ನಗರದ ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆಯಲ್ಲಿ ವಿಮಾ ಕಾರ್ಮಿಕರು ಮತ್ತು ಅವರ ಕುಟುಂಬದವರು ಅಲ್ಲದೆ ಇತರೆ ರೋಗಿಗಳು ಸಹ ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ಆಸ್ಪತ್ರೆ ಡೀನ್‌ ಡಾ. ಪ್ರಶಾಂತ ಪೌನಿಪಗರ ತಿಳಿಸಿದರು.

‘ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿಗದಿಪಡಿಸಲಾದ ದರಕ್ಕೆ ಸಮಾನವಾಗಿ ಇಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಬಿಪಿಎಲ್‌ ಕಾರ್ಡು ಹೊಂದಿದ್ದಲ್ಲಿ, ಅವರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಟ್ಟು 470 ಹಾಸಿಗೆಗಳ ಸಾಮರ್ಥ್ಯದ ಇಎಸ್ಐಸಿ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ದಿನದ 24 ಗಂಟೆಯು ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು ಹವಾನಿಯಂತ್ರಕ ಸೌಲಭ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ರೋಗಿಗಳಿಗೆ ಇನ್ನೂ ಉತ್ತಮ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದ ಅವರು ವಿವರಿಸಿದರು.

‘ಪ್ರತಿ ದಿನ 400ಕ್ಕೂ ಹೆಚ್ಚು ಹೊರರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೌಕರ್ಯ ಲಭ್ಯವಿದೆ ಎಂದು ತಿಳಿಪಡಿಸಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಗುರಿಯಿದೆ. ಮುಂದಿನ ದಿನಗಳಲ್ಲಿ ವಿವಿಧೆಡೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ನವದೆಹಲಿಯ ಎಐಐಎಂಎಸ್‌ ಆಸ್ಪತ್ರೆಗೆ ಸಮಾನವಾಗಿ ಇಎಸ್‌ಐಸಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ, ಅಭಿವೃದ್ಧಿಪಡಿಸುವ ಉದ್ದೇಶವಿದೆ. ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಸಿ.ಟಿ. ಸ್ಕ್ಯಾನ್‌ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಸಹ ಆರಂಭಿಸಲಾಗುವುದು’ ಎಂದು ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ಸರ್ಜನ್ ಡಾ. ರಾಜೇಶ ಸಂಗ್ರಾಮ ಮತ್ತು ರಿಜಿಸ್ಟ್ರಾರ್ ಡಾ. ಎಚ್.ಎಸ್‌.ಕಡ್ಲಿಮಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry