5

ಬೋಗಸ್‌ ಕಾರ್ಡ್‌ ಹುಡುಕಿಕೊಟ್ಟರೆ ಬಹುಮಾನ

Published:
Updated:
ಬೋಗಸ್‌ ಕಾರ್ಡ್‌ ಹುಡುಕಿಕೊಟ್ಟರೆ ಬಹುಮಾನ

ಮಡಿಕೇರಿ: ಬೋಗಸ್‌ ಕಾರ್ಡ್‌ ಹುಡುಕಿಕೊಟ್ಟವರಿಗೆ ₨ 400 ನಗದು ನೀಡಲಾಗುತ್ತಿದ್ದು, ತಪ್ಪು ಮಾಹಿತಿ ನೀಡಿ ಕಾರ್ಡ್‌ ಪಡೆದವರನ್ನು ಪತ್ತೆಹಚ್ಚಲು ಸುಲಭವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ 10.50 ಲಕ್ಷ ಬೋಗಸ್‌ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದುಪಡಿಸಲಾಗಿದೆ. ಇನ್ಮುಂದೆ ಬೋಗಸ್ ಕಾರ್ಡ್‌ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಮಾಹಿತಿ ನೀಡಿದವರ ಹೆಸರು ಗೋಪ್ಯವಾಗಿ ಇಟ್ಟು ನಗದು ಬಹುಮಾನ ಸಹ ನೀಡಲಾಗುತ್ತಿದೆ. ನಿರುದ್ಯೋಗ ಯುವಕರು ಈ ಯೋಜನೆಯ ಸದ್ಬಳಕೆ ಮಾಡಿಕೊಂಡು ಹಣ ಪಡೆದುಕೊಳ್ಳಬಹುದು. ಪ್ರತಿ ತಿಂಗಳು 10 ಮಂದಿಯ ಮಾಹಿತಿ ನೀಡಿದರೆ ನಾಲ್ಕು ಸಾವಿರ ರೂಪಾಯಿ ಸಿಗಲಿದೆ ಎಂದು ತಿಳಿಸಿದರು.

‘ದಾಸೋಹ’ ಯೋಜನೆ: ವೃದ್ಧಾಶ್ರಮ, ಅನಾಥ ಆಶ್ರಮ ಸೇರಿದಂತೆ ನಿರ್ಗತಿಕರಿಕೆ ಉಚಿತವಾಗಿ ಊಟ, ವಸತಿ ನೀಡುವ ಸಂಘ– ಸಂಸ್ಥೆಗಳು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಿದರೆ ತಲಾ 15 ಕೆ.ಜಿಯಂತೆ ಅಕ್ಕಿ ವಿತರಣೆ ಮಾಡಲಾಗುವುದು. ನಾಲ್ಕು ತಿಂಗಳಿಗೆ ಆಗುವಷ್ಟು ಪಡಿತರವನ್ನು ಒಮ್ಮೆಲೇ ನೀಡುವ ‘ದಾಸೋಹ’ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಧಾರಣೆ ಮಾಡಲಾಗುತ್ತಿದೆ. ಆರು ತಿಂಗಳಿಂದ ಹೊಸ ಹೊಸ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಎಲ್ಲವೂ ಪರಿಪೂರ್ಣವಾಗಲಿದೆ. ಆನ್‌ಲೈನ್‌ ಮೂಲಕ ಪಡಿತರ ಕಾರ್ಡ್‌ಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದವರಿಗೆ ‘ಸ್ಪೀಡ್‌ಪೋಸ್ಟ್‌’ ಮೂಲಕ ಮನೆ ಬಾಗಿಲಿಗೆ ಕಾರ್ಡ್‌ ತಲುಪಲಿವೆ. ಕಾರ್ಡ್‌ ತಲುಪದಿದ್ದರೆ ವೆಬ್‌ಸೈಟ್‌ನಲ್ಲಿ ಮುದ್ರಣಕ್ಕೆ ಹೋಗಿರುವ ಮಾಹಿತಿಯಿದ್ದರೆ ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಪಡಿತರ ಪಡೆದುಕೊಳ್ಳಬಹುದು ಎಂದು ಖಾದರ್‌ ಮಾಹಿತಿ ನೀಡಿದರು.

ಪಡಿತರ ಕಾರ್ಡ್‌ ಪಡೆಯಲು ಹಿಂದಿದ್ದ 14 ರೀತಿಯ ಮಾನದಂಡಗಳನ್ನು ರದ್ದುಪಡಿಸಿ, ₨ 1.20 ಲಕ್ಷದ ಒಳಗೆ ವಾರ್ಷಿಕ ಆದಾಯವಿರುವ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ‘ಬಿಪಿಎಲ್‌’ ಹಾಗೂ ‘ಎಪಿಎಲ್‌’ ಎನ್ನುವ ಬದಲಿಗೆ ಆದ್ಯತೆ ಹಾಗೂ ಆದ್ಯತೆ ರಹಿತ ಕುಟುಂಬವೆಂದು ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪುನರ್‌ ಪರಿಶೀಲನೆ: ‘ಹೊಸದಾಗಿ ಕಾರ್ಡ್‌ ಪಡೆಯಲು ರಾಜ್ಯದಲ್ಲಿ 15.25 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ತಪ್ಪು ವಿಳಾಸ ನೀಡಿದವರ 1.25 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ 14 ಲಕ್ಷ ಅರ್ಜಿಗಳ ಪೈಕಿ 11 ಲಕ್ಷ ಮಂದಿಗೆ ಸ್ಪೀಡ್‌ಪೋಸ್ಟ್‌ ಮೂಲಕವೇ ಕಾರ್ಡ್‌ಗಳು ತಲುಪಿದ್ದು ಉಳಿದ ಕಾರ್ಡ್‌ಗಳು ಮುದ್ರಣ ಹಂತದಲ್ಲಿವೆ. ತಿರಸ್ಕೃತಗೊಂಡ 1.25 ಅರ್ಜಿಗಳನ್ನು ಪುನರ್‌ ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 7,172 ಅರ್ಜಿಗಳಲ್ಲಿ 5,374 ಮಂದಿಗೆ ಕಾರ್ಡ್‌ ತಲುಪಿವೆ’ ಎಂದು ಸಚಿವರು ಮಾಹಿತಿ ನೀಡಿದರು.

ಬಯೋಮೆಟ್ರಿಕ್‌ ವ್ಯವಸ್ಥೆ: ಜಿಲ್ಲಾಮಟ್ಟದ ಗೋದಾಮುಗಳಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದಲ್ಲದೇ 70,300 ನ್ಯಾಯಬೆಲೆ ಅಂಗಡಿಗಳಲ್ಲಿ ಶೇ 70ರಷ್ಟು ಅಂಗಡಿಗಳಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಕಡ್ಡಾಯಗೊಳಿಸಲಾಗಿದೆ. ನೆಟ್‌ವರ್ಕ್‌ ವ್ಯವಸ್ಥೆ ಇಲ್ಲದ ಕಡೆ ಬ್ರಾಡ್‌ಬ್ಯಾಂಡ್‌ ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಅರ್ಹರಿಗೆ ಪಡಿತರ ವಿತರಣೆ ಸುಲಭವಾಗಲಿದೆ ಎಂದು ವಿವರಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕರು ಕಮಿಷನ್‌ ಕಡಿಮೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಬ್ರಾಡ್‌ಬ್ಯಾಂಡ್‌ ಅಳವಡಿಸಿಕೊಂಡರೆ ಕಮಿಷನ್‌ ಹೆಚ್ಚಳ ಮಾಡಲಾಗುವುದು. ಜತೆಗೆ, ಸೀಮೆಎಣ್ಣೆ ಮುಕ್ತರಾಜ್ಯ ಮಾಡಲು ಹೆಜ್ಜೆ ಇಡಲಾಗಿದೆ. ಕಾರ್ಡ್‌ಗೆ 1 ಲೀಟರ್‌ ಮಾತ್ರ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ. ಅದನ್ನೂ ವಾಪಸ್‌ ನೀಡಿದರೆ ಎಲ್‌ಇಡಿ ಬಲ್ಬ್‌ ನೀಡಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಜರಿದ್ದರು.

ಅಕ್ರಮ ಎಸಗಿದರೆ ಪರವಾನಗಿ ರದ್ದು

ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಸಿದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಮೂವರ ಸಮಿತಿ ನೇಮಕ ಮಾಡಲಾಗಿದ್ದು, ಇಬ್ಬರು ಸದಸ್ಯರು ನಿರ್ಧಾರ ತೆಗೆದುಕೊಂಡರೆ ಅಂತಹ ಅಂಗಡಿಯ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಖಾದರ್ ಮಾಹಿತಿ ನೀಡಿದರು.

ಅಂಕಿಅಂಶಗಳು

* 10.50 ಲಕ್ಷ ರಾಜ್ಯದಲ್ಲಿ ಬೋಗಸ್‌ ಪಡಿತರ ಕಾರ್ಡ್‌ ಪತ್ತೆ

* 15.25 ಲಕ್ಷ ಹೊಸದಾಗಿ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದವರ ವಿವರ

* 1.25 ಲಕ್ಷ ತಿರಸ್ಕೃತ ಅರ್ಜಿಗಳು

* 11 ಲಕ್ಷ ನೂತನ ಪಡಿತರ ಕಾರ್ಡ್‌ ವಿತರಣೆ

* 7,172 ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದವರು

* 5,374 ಜಿಲ್ಲೆಯಲ್ಲಿ ಕಾರ್ಡ್‌ ವಿತರಣೆ

* * 

ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷ ನಾಯಕರು ಕನ್ನಭಾಗ್ಯವೆಂದು ವ್ಯಂಗ್ಯವಾಡುತ್ತಿದ್ದರು. ಈಗ ನಮ್ಮಭಾಗ್ಯವೆಂದು ಅಪ್ಪಿಕೊಳ್ಳುತ್ತಿದ್ದಾರೆ.

ಯು.ಟಿ. ಖಾದರ್‌, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry