6
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಅಡಿಕೆಗೆ ಅಣಬೆ ರೋಗ: ಬೆಳೆಗಾರರು ತತ್ತರ

Published:
Updated:
ಅಡಿಕೆಗೆ ಅಣಬೆ ರೋಗ: ಬೆಳೆಗಾರರು ತತ್ತರ

ದಾವಣಗೆರೆ: ಜಿಲ್ಲೆಯಲ್ಲಿ ಅಡಿಕೆಗೆ ಅಣಬೆ ರೋಗ ಬಂದಿದ್ದು, ಮರಗಳು ಒಂದೊಂದಾಗಿ ಸಾಯುತ್ತಿರುವುದರಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲ್ಲೂಕುಗಳಲ್ಲಿ ಅಣಬೆ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಬೆಳೆ ನಷ್ಟದ ಜತೆಗೆ ಮರಗಳನ್ನೂ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ.

ಹಳದಿ ಬಣ್ಣಕ್ಕೆ ತಿರುಗಿದ ಎಲೆ, ಕಳಚಿ ಬಿದ್ದ ಗರಿ, ಸಪೂರವಾದ ಸುಳಿ, ಮರದ ಬುಡದಲ್ಲಿ ಬೆಳೆದ ಅಣಬೆಯ ಶಿಲೀಂದ್ರ, ಈಗ ರೈತರ ಅಡಿಕೆ ತೋಟಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳಾಗಿವೆ. ಚಿಂತಾಕ್ರಾಂತರಾದ ರೈತರು ತೋಟಗಾರಿಕೆ ತಜ್ಞರನ್ನು ಸಂಪರ್ಕಿಸುತ್ತಿದ್ದು, ಅವರು ತೋಟಗಳಿಗೆ ಭೇಟಿ ನೀಡಿ, ಸಲಹೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್‌ ಅಡಿಕೆ ತೋಟಕ್ಕೆ ಈ ರೋಗ ಹಬ್ಬಿದ್ದು, ಹೊನ್ನಾಳಿಯ ರಾಮೇಶ್ವರ, ಚೀಲೂರು, ಬಿದರಗಡ್ಡೆ ಗ್ರಾಮಗಳಲ್ಲಿ ವ್ಯಾಪಕವಾಗಿದೆ.

ಅಣಬೆ ರೋಗ ಮುಖ್ಯವಾಗಿ ಮಣ್ಣು ಮತ್ತು ನೀರಿನ ಮುಖಾಂತರ ಬೇರುಗಳಿಗೆ ಅಂಟಿಕೊಳ್ಳುತ್ತದೆ. ಆರಂಭದಲ್ಲಿ ಅಡಿಕೆ ಮರದ ಎಲೆಗಳು ಹಳದಿಯಾಗುತ್ತವೆ. ನಂತರ ಒಳಭಾಗದ ಎಲೆಗಳ ಮೇಲೂ ಹರಡಿ, ಅದು ಸೊರಗಿ ಮರದ ಸುತ್ತಾ ಜೋತು ಬಿದ್ದು ಒಂದೊಂದೇ ಗರಿಗಳು ಕಳಚಿ ಬೀಳುತ್ತವೆ. ಕೆಲವು ಸಂದರ್ಭದಲ್ಲಿ ಹೂವು ಮತ್ತು ಕಾಯಿಗಳು ಉದುರುತ್ತವೆ ಎಂದು ರೋಗ ಲಕ್ಷಣಗಳನ್ನು ಹೇಳುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ಕೊನೆಯ ಹಂತದಲ್ಲಿ ಸುಳಿ ಸಣ್ಣದಾಗಿ ಗರಿಗಳಿಲ್ಲದೆ ಮರ ಬೋಳಾಗಿ ಕಾಣುತ್ತದೆ. ಮರದ ಬುಡದಿಂದ 3ರಿಂದ 4 ಅಡಿ ಎತ್ತರದವರೆಗೆ ಕಂದು ಬಣ್ಣದ ಅಂಟು ದ್ರವ ಸೋರಲು ಶುರುವಾಗಿ ಬುಡದಲ್ಲಿ ಅಣಬೆಯ ಶಿಲೀಂದ್ರ ಬೆಳವಣಿಗೆಯಾಗಿರುವುದು ಕಂಡು ಬರುತ್ತದೆ. ಅಂತಹ ಮರವನ್ನು ಕತ್ತರಿಸಿ ನೋಡಿದಾಗ ಒಳಭಾಗದ ಅಂಗಾಂಶ ಕಂದು ಬಣ್ಣದಿಂದ ಕೂಡಿರುವುದು ಗೋಚರಿಸುತ್ತದೆ. ಕೊನೆಗೆ ಸಂಪೂರ್ಣ ಮರವೇ ಸಾಯುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ರೋಗಕ್ಕೆ ತುತ್ತಾದ ಮರಗಳನ್ನು ಬೇರು ಸಹಿತ ತೆಗೆದು ಸುಡಬೇಕು. ರೋಗವು ಮರದಿಂದ ಮರಕ್ಕೆ ಬೇರುಗಳ ಸಂಪರ್ಕದಿಂದ ಹರಡುವುದರಿಂದ ರೋಗ ತಗುಲಿದ ಮರದ ಸುತ್ತಲೂ ಸುಮಾರು ಒಂದು ಅಡಿ ಅಗಲ ಮತ್ತು ಅರ್ಧ ಅಡಿ ಆಳದ ಕಂದಕ ತೆಗೆದು 75 ರಿಂದ 100 ಗ್ರಾಂ ಕ್ಯಾಪ್ರಾನ್‌ ಅಥವಾ ಥೈರಾಮ್‌ ಅಥವಾ ಮ್ಯಾಂಕೋಜೆಬ್‌ ಅನ್ನು 25 ಲೀಟರ್‌ ನೀರಿನಲ್ಲಿ ಕರಗಿಸಿ ಕಂದಕಗಳಲ್ಲಿ ಸುರಿಯಬೇಕು ಎಂದು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ತೋಟಗಳಿಗೆ ಭೇಟಿ ನೀಡಿದ ಐಸಿಎಆರ್‌–ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ, ‘ಅಡಿಕೆಯನ್ನು ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದ ಜಾಗದಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಂಡಿದೆ. ಅಲ್ಲದೇ, ಈ ಹಿಂದೆ ಇದ್ದ ತೆಂಗಿನ ತೋಟದಲ್ಲಿ ಹೊಸದಾಗಿ ಅಡಿಕೆ ಬೆಳೆ ಹಾಕಿದಾಗಲೂ ಅಣಬೆ ರೋಗ ಕಂಡುಬಂದಿದೆ. ತೇವಾಂಶ ಜಾಸ್ತಿ ಇರುವ ತೋಟಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟಗಳಲ್ಲಿ ತೇವಾಂಶ ನಿಯಂತ್ರಣಕ್ಕೆ ಬಸಿಗಾಲುವೆ ನಿರ್ಮಿಸಬೇಕು. ಸಾವಯವ ಗೊಬ್ಬರದ ಜತೆ ಜೈವಿಕ ಗೊಬ್ಬರಗಳನ್ನು ಮರಗಳಿಗೆ ನೀಡಬೇಕು. ಹಾಯ್‌ ಪದ್ಧತಿಯನ್ನು ಕೈಬಿಟ್ಟು, ಹನಿ ನೀರಾವರಿ ‍ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಐಸಿಎಆರ್‌–ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ಸಲಹೆ ನೀಡಿದ್ದಾರೆ.

ಪ್ರತಿ ಒಂದು ಲೀಟರ್‌ ನೀರಿಗೆ 2 ಮಿ.ಲೀ ಪ್ರೊಪಿಕೊನೋಜೋಲ್‌ ಜತೆಗೆ 2 ಮಿ.ಲೀ. ಕ್ಲೊರೊಫೈರಿಸ್‌ ಹಾಕಿ ಪ್ರತಿ ಗಿಡಕ್ಕೆ 5 ಲೀಟರ್‌ ದ್ರಾವಣಹಾಕಬೇಕು. ಇದನ್ನು ಭೂಮಿ ಒಣಗಿದಾಗ ಬಳಕೆ ಮಾಡಬೇಕು. ಒಂದು ತಿಂಗಳು ಬಿಟ್ಟು ಟ್ರೈಕೋಡರ್ಮ, ಸುಡೊಮೊನಸ್‌ ಜತೆ 2 ಕೆ.ಜಿ. ಬೆಲ್ಲ ಮತ್ತು 2 ಕೆ.ಜಿ. ಕಡ್ಲೆಹಿಟ್ಟು ಸೇರಿಸಿ ಪ್ರತಿ ಗಿಡಕ್ಕೆ ಅರ್ಧ ಲೀಟರ್‌ನಂತೆ ದ್ರಾವಣ ಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.

* * 

ವಿವಿಧ ರೋಗಗಳಿಂದ ಬೆಳೆ ನಷ್ಟ ಅನುಭವಿಸಿದ ಅಡಿಕೆ ಬೆಳೆಗಾರರಿಗೆ ಈಗ ಅಣಬೆ ರೋಗ ಬರಸಿಡಿಲಿನಂತೆ ಎರಗಿದೆ.

ಫಾಲಾಕ್ಷ‍ಪ್ಪ ಬಿದರಗಡ್ಡೆ,

ಹೊನ್ನಾಳಿ ತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry