ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ತನ ಅನುಕರಣೆ

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೈಬಲನ್ನು ಬಿಟ್ಟರೆ ಕ್ರೈಸ್ತರಲ್ಲಿ ಅತ್ಯಂತ ಜನಪ್ರಿಯವೂ ಪ್ರಭಾವಶಾಲಿಯೂ ಆದ ಕೃತಿ ಎಂದರೆ ಥಾಮಸ್‌ ಎ ಕೆಂಪಿಸ್‌ ರಚಿಸಿರುವ ‘ಕ್ರಿಸ್ತನ ಅನುಕರಣೆ (The Imitation of Christ). ಜಗತ್ತಿನ ಶ್ರೇಷ್ಠ ಸಾಹಿತ್ಯಕೃತಿಗಳಲ್ಲೂ ಇದು ಸ್ಥಾನವನ್ನು ಪಡೆದಿದೆ.

ಥಾಮಸ್‌ ಹುಟ್ಟಿದ್ದು 1380ರಲ್ಲಿ, ಕೋಲೇನ್‌ ಎಂಬಲ್ಲಿ (ಈಗಿನ ಜರ್ಮನಿಯಲ್ಲಿದೆ). ಅವನ ತಂದೆ ಜಾನ್‌; ಕಮ್ಮಾರನಾಗಿದ್ದ. ತಾಯಿ ಗರ್ಟ್ರೂಡ್‌; ಹಳ್ಳಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಳು.

‘ಕ್ರಿಸ್ತನ ಅನುಕರಣೆ’ ಪ್ರಕಟವಾದದ್ದು 1418ರಲ್ಲಿ, ಲ್ಯಾಟಿನ್‌ಭಾಷೆಯಲ್ಲಿ. ಜಗತ್ತಿನ ಹಲವು ಭಾಷೆಗಳಿಗೆ ಇದು ಅನುವಾದಗೊಂಡಿದೆ. ಕನ್ನಡದಲ್ಲೂ ಈ ಕೃತಿಯ ಅನುವಾದಕಾರ್ಯ ನಡೆದಿದೆ. ಪ್ರಶಾಂತ್‌ ವಲೇರಿಯನ್‌ ಮಾಡ್ತ 1979ರಲ್ಲಿ ಈ ಕೃತಿಯ ಪೂರ್ಣ ಅನುವಾದವನ್ನು ಮಾಡಿದ್ದಾರೆ. ವಿ.ಕೃ. ಗೋಕಾಕ್‌ ಅವರ ಹರಕೆ ಅದಕ್ಕೆ ಸಂದಿದೆ.

‘ಕ್ರಿಸ್ತನ ಅನುಕರಣೆ’ಯ ಬಗ್ಗೆ ‘ಎನ್‌ಸೈಕ್ಲೊಪಿಡಿಯಾ ಬ್ರಿಟಾನಿಕಾ’ದಲ್ಲಿರುವ ಮಾತುಗಳನ್ನು ಈ ಅನುವಾದಕೃತಿಯಲ್ಲಿ ಉಲ್ಲೇಖಿಸಲಾಗಿದೆ:

‘‘ ‘ಕ್ರಿಸ್ತನ ಅನುಕರಣೆ’ ಅನನ್ಯವಾದುದು, ವಿಶಿಷ್ಟವಾದುದು. ಉಳಿದ ಅನುಭಾವಿ ಬರವಣಿಗೆಯೊಂದಿಗೆ ಹೋಲಿಸಿ ನೋಡಿದಾಗ ಈ ಕೃತಿಯ ಸರಳತೆ ಹಾಗೂ ಸ್ಪಷ್ಟತೆ ಎದ್ದುಕಾಣುತ್ತದೆ. ಆಧ್ಯಾತ್ಮಿಕ ಪ್ರಜ್ಞೆ ಸ್ವಲ್ಪಮಟ್ಟಿಗಾದರೂ ಜಾಗೃತವಾಗಿರುವ ಯಾರಿಗಾದರೂ ಇಲ್ಲಿನ ಪ್ರತಿಯೊಂದು ವಾಕ್ಯವೂ ಅರ್ಥಪೂರ್ಣವಾಗಿರುತ್ತದೆ. ವಿಶ್ವವ್ಯಾಪಿಯಾದ ಈ ಕೃತಿಯ ಕೀರ್ತಿಗೆ ಕಾರಣ, ಅದು ಅತಿ ಬೌದ್ಧಿಕತೆಯಿಂದ ದೂರವಿರುವುದು, ಧಾರ್ಮಿಕಮತಿಗೆ ನೇರವಾಗಿ ತಲುಪುವುದು ಹಾಗೂ ಅದರ ಲೇಖಕನ ಅಸಾಧಾರಣ ಪ್ರತಿಭೆ.’’

‘ಕ್ರಿಸ್ತನ ಅನುಕರಣೆ’ಯಲ್ಲಿನ ಮಾತೊಂದು ಹೀಗಿದೆ: ‘ಜ್ಞಾನಕ್ಕಾಗಿ ಪ್ರತಿಯೊಬ್ಬನೂ ಹಾತೊರೆಯುವುದು ಸ್ವಾಭಾವಿಕ. ಆದರೆ ದೈವಭಯಪೂರಿತವಲ್ಲದ ಒಣಜ್ಞಾನದಿಂದ ಸಿಗುವ ಪ್ರಯೋಜನವಾದರೂ ಏನು? ನಕ್ಷತ್ರಗಳ ಚಲನವಲನಗಳ ಬಗ್ಗೆ ಜಿಜ್ಞಾಸೆ ನಡೆಸಿ, ತನ್ನನ್ನೇ ಹತೋಟಿಯಲ್ಲಿರಿಸಿದ ವ್ಯಕ್ತಿಗಿಂತಲೂ ಬಡಒಕ್ಕಲಿಗನೊಬ್ಬನು ನಿಸ್ಸಂದೇಹವಾಗಿ ಹೆಚ್ಚು ಯೋಗ್ಯನಲ್ಲವೇ? ತನ್ನನ್ನು ತಾನು ಅರ್ಥ ಮಾಡಿಕೊಂಡವನು, ತನ್ನ ಅಂಕುಡೊಂಕುಗಳನ್ನು ಅರಿತವನು ಹೊಗಳಿಕೆಗೆ ಉಬ್ಬಿಕೊಳ್ಳಲಾರ. ಜಗತ್ತಿನ ಬಗ್ಗೆ ನಾನು ಎಲ್ಲವನ್ನೂ ತಿಳಿದುಕೊಂಡಿದ್ದರೂ, ಪ್ರೀತಿಯ ಲೇಶಾಂಶವೂ ನನ್ನಲ್ಲಿ ಇಲ್ಲದಿದ್ದರೆ, ನನ್ನ ಕೃತ್ಯಗಳ ಯೋಗ್ಯಾಯೋಗ್ಯತೆಗಳನ್ನು ತೀರ್ಮಾನಿಸುವ ದೈವಸಮ್ಮುಖದಲ್ಲಿ, ಈ ಅರಿವು ಹೇಗೆ ಸಹಕರಿಸಬಹುದು?’

(ಅನುವಾದ: ಪ್ರಶಾಂತ್‌ ವಲೇರಿಯನ್‌ ಮಾಡ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT