7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ

Published:
Updated:

ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿ ಇಲ್ಲಿನ ನಗರ ಪೊಲೀಸ್‌ ಆಯುಕ್ತರ ಕಚೇರಿ ಎದುರು ರಸ್ತೆಯಲ್ಲಿ ಶುಕ್ರವಾರ ಧರಣಿ ನಡೆಸುತ್ತಿದ್ದ ಬಿಜೆಪಿಯ ನೂರಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಧರಣಿಯಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು. ಸ್ಥಳಕ್ಕೆ ಡಿಸಿಪಿ ಬಂದು ಮನವೊಲಿಕೆಗೆ ಪ್ರಯತ್ನಿಸಿದರೂ ಅವರು ಜಗ್ಗಲಿಲ್ಲ. ‘ಐಜಿಪಿ ಬರಬೇಕು. ಶಾಂತಿ ಸಭೆ ನಡೆಸಬೇಕು. ಒಂದು ಧರ್ಮದವರ ಪರ ಮಾತನಾಡುತ್ತಿರುವ, ಪೊಲೀಸರಿಗೆ ಧಮಕಿ ಹಾಕುತ್ತಿರುವ ಶಾಸಕ ಫಿರೋಜ್‌ ಸೇಠ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ ಧರಣಿ ಕೈಬಿಡುವುದಿಲ್ಲ’ ಎಂದು ಪಟ್ಟುಹಿಡಿದರು.

ಶಾಸಕ ಸಂಜಯ ಪಾಟೀಲ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಮುಖಂಡರಾದ ಅಭಯ ಪಾಟೀಲ, ರಾಜಕುಮಾರ ಟೋಪಣ್ಣವರ, ಪಾಂಡುರಂಗ ಧೋತ್ರೆ, ಕಿರಣ ಜಾಧವ, ಲೀಲಾ ಟೋಪಣ್ಣವರ, ಈರಣ್ಣ ಕಡಾಡಿ, ಸದಾನಂದ, ಉಜ್ವಲಾ ಬಡವನಾಚೆ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದರು.

ಅಂದೇ ಆಫ್ ಆಗುತ್ತದೆ ಏಕೆ?: ಶಾಸಕ ಸಂಜಯ ಪಾಟೀಲ ಮಾತನಾಡಿ, ‘ಹಲವು ತಿಂಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ನಡೆದ ದಿನದಂದು ಸಿಸಿ ಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುವುದಿಲ್ಲ. ಇದರ ಹಿಂದಿನ ಕರಾಮತ್ತೇನು’ ಎಂದು ಕೇಳಿದರು. ‘ಖಡಕ್‌ ಗಲ್ಲಿಯಲ್ಲಿ ಬಿಜೆಪಿ ಮುಖಂಡರಾರೂ ಗಲಾಟೆ ಮಾಡಿಲ್ಲ. ಸಂಪ್ರದಾಯದ ಪ್ರಕಾರ ಅವರು ಆಚರಿಸುವ ಕಾರ್ಯಕ್ರಮಗಳಿಗೂ ಅಡ್ಡಿಪಡಿಸಲಾಗುತ್ತಿದೆ’ ಎಂದು ದೂರಿದರು.

‘ಹಿಂದೂ ದೇವಾಲಯ ನಾಶಪಡಿಸುವ ಕೆಲಸ ನಡೆಯುತ್ತಿದೆ. ಮಸೀದಿಯಲ್ಲಿ ಪಾಕಿಸ್ತಾನದ ಪರ ಮೆಚ್ಚುಗೆ ಮಾತನಾಡಲಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿಲ್ಲ. ಬಂಧಿತರ ಬಿಡುಗಡೆಗೆ ಶಾಸಕ ಫಿರೋಜ್‌ಸೇಠ್ ವಕಾಲತ್ತು ವಹಿಸುತ್ತಾರೆ. ಮುಸ್ಲಿಂ ಮುಖಂಡರ ಸಭೆಯನ್ನು ಮಾತ್ರವೇ ಪೊಲೀಸರು ನಡೆಸಿದ್ದಾರೆ. ಆದರೆ, ಹಿಂದೂ ಮುಖಂಡರ ಸಭೆಯನ್ನೇಕೆ ಕರೆದಿಲ್ಲ. ಪೊಲೀಸ್ ಇಲಾಖೆ ಒಂದು ಧರ್ಮದವರ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಯಾರ ಒತ್ತಡಕ್ಕೂ ಮಣಿದಿಲ್ಲ. ಕಾನೂನು ಪ್ರಕಾರ ಕೆಲಸ ನಿರ್ವಹಿಸಿದ್ದೇವೆ. ಆರೋಪಿಗಳನ್ನು ಕಲಬುರ್ಗಿ, ವಿಜಯಪುರ ಜೈಲಿಗೆ ಕಳುಹಿಸಿದ್ದೇವೆ. ಎರಡೂ ಧರ್ಮೀಯರೂ ಗಲಭೆಯಲ್ಲಿ ಭಾಗಿಯಾಗಿರುವ ವಿಡಿಯೊ ನಮ್ಮ ಬಳಿ ಇದೆ. ಆ ಪ್ರಕಾರ ಆರೋಪಿಗಳನ್ನು ಬಂಧಿಸುತ್ತಿದ್ದೇವೆ. ಗಲಭೆ ನಡೆಸಿದವರ ಸಂಪೂರ್ಣ ವಿವರ ನಮ್ಮಲ್ಲಿದೆ. ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಬಂಧಿಸಲಾಗುವುದು. 2–3 ದಿನಗಳಲ್ಲಿ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲೂ  ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಡಿಸಿಪಿ ಅಮರನಾಥರೆಡ್ಡಿ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry