7

‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣೆ ಗಿಮಿಕ್’

Published:
Updated:
‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣೆ ಗಿಮಿಕ್’

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಈಗ ಖಾಸಗಿ ಶಾಲೆಗಳಿಗೂ ಅಂಕುಶ ಹಾಕಲು ಹೊರಟಿದೆ. ಶಿಕ್ಷಣದ ನೆಪದಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವಂತೆ ಕರ್ನಾಟಕ ಶಿಕ್ಷಣ ಕಾಯ್ದೆಗೆ ನಿಯಮಗಳನ್ನು ರೂಪಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ವಿವರಗಳನ್ನು ಶಾಲಾ ಫಲಕಗಳಲ್ಲಿ ಪ್ರಕಟಿಸಬೇಕು. ಶಾಲೆಯಲ್ಲಿ ಪ್ರತಿ ಮಗುವಿಗೆ ಒಂದು ಚದರಡಿ ಜಾಗ ಹಾಗೂ ಶಾಲೆಗೊಂದು ಆಟದ ಮೈದಾನ ಕಡ್ಡಾಯವಾಗಿರಬೇಕೆಂದು ತಾಕೀತು ಮಾಡುತ್ತಿದೆ. ಕನ್ನಡ ಕಲಿಕೆ, ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಮತ್ತು ಖಾಸಗಿ ಶಾಲೆಗಳ ಮಧ್ಯೆ ಭಿನ್ನಾಭಿಪ್ರಾಯ ಇದೆ. ಈ ಎಲ್ಲ ಬೆಳವಣಿಗೆ ಕುರಿತು ಕರ್ನಾಟಕ ಅನುದಾನ ರಹಿತ ಶಾಲೆಗಳ ಸಂಘದ (ಕುಸ್ಮಾ) ಕಾರ್ಯದರ್ಶಿ ಎ. ಮರಿಯಪ್ಪ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಖಾಸಗಿ ಶಾಲೆಗಳು ಶುಲ್ಕ ವಿವರಗಳನ್ನು ಬಹಿರಂಗವಾಗಿ ಪ್ರಕಟಿಸಲು ಸಿದ್ಧವಾಗಿವೆಯೇ?

ಖಂಡಿತ ಇಲ್ಲ. ನಿಮಗೊಂದು ಉದಾಹರಣೆ ಕೊಡುತ್ತೇನೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಹೋಟೆಲ್‌ಗಳಲ್ಲಿ ಏಕ ರೂಪದ ದರದಲ್ಲಿ ಉಪಾಹಾರ, ಊಟ ಕೊಡಬೇಕು ಎಂದು ಆದೇಶ ಮಾಡಿದರು. ಆಗ, ದೋಸೆಗೆ ಎಂಟಿಆರ್, ವಿದ್ಯಾರ್ಥಿ ಭವನ ಮತ್ತು ಬೇರೆ ಹೋಟೆಲ್‌ಗಳಲ್ಲಿ ಏಕರೂಪದ ದರ ನಿಗದಿಪಡಿಸಬೇಕಾದ ಪರಿಸ್ಥಿತಿ ಬಂತು. ಕಡಿಮೆ ದರಕ್ಕೆ ಆಹಾರ ನೀಡಲು ಸಾಧ್ಯವಾಗದೆ ಪ್ರತಿಷ್ಠಿತ ಹೋಟೆಲ್‌ಗಳು ಬಾಗಿಲು ಮುಚ್ಚಿದವು. ಸದ್ಯ, ಶಾಲೆಗಳಿಗೂ ಅದೇ ಪರಿಸ್ಥಿತಿ ತರಲು ಶಿಕ್ಷಣ ಸಚಿವರು ಹೊರಟಿದ್ದಾರೆ. ಈಗ ನಮ್ಮ ಶಾಲೆಗಳು ಬೋಧನೆಗೆ ಮಾತ್ರ ಸೀಮಿತವಾಗಿಲ್ಲ. ಪಾಠ– ಪ್ರವಚನಗಳ ಆಚೆಗೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬೇಕಾದ ಸೌಲಭ್ಯಗಳು ಇರುತ್ತವೆ. ಈಜುಕೊಳ, ಹೋಮ್ ಥಿಯೇಟರ್, ಐಷಾರಾಮಿ ಆಸನಗಳು, ವ್ಯವಸ್ಥಿತ ಡೆಸ್ಕ್‌ಗಳಿರುತ್ತವೆ. ಐದು ವರ್ಷದ ಮಕ್ಕಳಿಗೂ ವಿಮಾನ ಹಾರಾಟ, ರಾಕೆಟ್ ಉಡಾವಣೆ ಬಗ್ಗೆ ತೋರಿಸಲಾಗುತ್ತದೆ. ಇಂತಹ ಸೌಲಭ್ಯಗಳಿಗಾಗಿ ಕೊಟ್ಯಂತರ ರೂಪಾಯಿ ಬಂಡವಾಳ ತೊಡಗಿಸಬೇಕಾಗುತ್ತದೆ. ಹೀಗಿರುವಾಗ ಸರ್ಕಾರ ಯಾವ ಮಾನದಂಡದ ಮೇಲೆ ಶುಲ್ಕ ನಿಗದಿ ಮಾಡುತ್ತದೆ. ಇಷ್ಟಕ್ಕೂ ಶಾಲಾ ಶುಲ್ಕ ನಿಗದಿ ಮಾಡುವ ಸಮಿತಿಯಲ್ಲಿ ಕೆಲ ನಿವೃತ್ತ ಅಧಿಕಾರಿಗಳು ಮಾತ್ರ ಇದ್ದಾರೆ. ಶಾಲೆಗಳನ್ನು ನಡೆಸಿದ ಅನುಭವ ಅವರಿಗಿಲ್ಲ. ಶಾಲೆ ನಡೆಸುವವರನ್ನು ಸಮಿತಿಯಲ್ಲಿ ಸೇರಿಸಿಲ್ಲ. ಮತ್ತೊಂದು ಕುತೂಹಲದ ಸಂಗತಿ ಎಂದರೆ, ಈ ಸಮಿತಿಯು ಯಾವ ಶಾಲೆ ಎಷ್ಟು ಶುಲ್ಕ ಪಡೆಯಬೇಕು ಎಂದು ನಿಗದಿಪಡಿಸಿ ಈಗಾಗಲೇ ವರದಿ ನೀಡಿದೆ. ಅದರ ಬಗ್ಗೆಯೇ ಈಗ ಶಿಕ್ಷಣ ಸಚಿವರು ಮಾತನಾಡುತ್ತಿದ್ದಾರೆ. ಇದನ್ನು ಖಾಸಗಿ ಶಾಲೆಗಳು ಯಾವ ಕಾರಣಕ್ಕೂ ಒಪ್ಪುವುದಿಲ್ಲ.

* ಖಾಸಗಿ ಶಾಲೆಗಳನ್ನು ಸರ್ಕಾರ ನಿಯಂತ್ರಿಸಿದರೆ ತಪ್ಪೇನು?

ಪರವಾನಗಿ ಎಂಬ ಪತ್ರ ಬಿಟ್ಟರೆ ಸರ್ಕಾರ ನಮಗೇನು ಕೊಟ್ಟಿದೆ. ಅದೊಂದನ್ನೇ ಅಸ್ತ್ರವಾಗಿಸಿಕೊಂಡು ಅನಗತ್ಯ ವಿಷಯಗಳನ್ನೆಲ್ಲಾ ನಮ್ಮ ಮೇಲೆ ಹೇರುತ್ತಾ ಹೋದರೆ ಸಹಿಸಿಕೊಳ್ಳುವುದು ಹೇಗೆ. ಮಕ್ಕಳಿಗೆ ವಿದ್ಯೆ ಕೊಡಲು ಯಾರ ಪರವಾನಗಿಯೂ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಿಂದೆ ತೀರ್ಪು ಕೊಟ್ಟಿದೆ. ಆದರೆ, ಶಿಕ್ಷಣ ಸಚಿವರು ಶಾಲೆಗಳ ಪರವಾನಗಿ ರದ್ದು ಮಾಡುತ್ತೇವೆ ಎಂದು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಚುನಾವಣೆ ಗಿಮಿಕ್ ಅಷ್ಟೇ. ಇದಕ್ಕೆ ಖಾಸಗಿ ಶಾಲೆಗಳ ಮಾಲೀಕರು ಜಗ್ಗುವುದಿಲ್ಲ.

* ನೀವು ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದೀರಿ ಎಂಬ ಭಾವನೆ ಜನರಲ್ಲಿದೆ?

ಇದನ್ನೂ ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ಸುಮಾರು 17,000 ಖಾಸಗಿ ಶಾಲೆಗಳಿವೆ. ಇದರಲ್ಲಿ ರಾಜ್ಯ ಪಠ್ಯಕ್ರಮ ಬೋಧಿಸುವ 12 ರಿಂದ 15 ಮತ್ತು ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುವ ಸುಮಾರು 20 ಶಾಲೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ.  ಸರ್ಕಾರಕ್ಕೆ ಇಂತಹ ಬೆರಳೆಣಿಕೆ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಬಿಟ್ಟು ಉಳಿದ ಶಾಲೆಗಳ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ. ಆಟೊ ಚಾಲಕರು, ತರಕಾರಿ ಮಾರುವವರು, ಹಮಾಲಿಗಳೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಖಾಸಗಿ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಒಬ್ಬ ಮಗುವಿಗೆ ವರ್ಷಕ್ಕೆ ₹12,000ದಿಂದ ₹15,000ದೊಳಗೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುವ ಸಾವಿರಾರು ಶಾಲೆಗಳಿವೆ. ಅವುಗಳನ್ನು ವ್ಯಾಪಾರಿ ಸಂಸ್ಥೆಗಳೆಂದು ಕರೆಯಲು ಸಾಧ್ಯವಿಲ್ಲ.

* ಸಣ್ಣ ಸಣ್ಣ ಗೂಡುಗಳಲ್ಲಿ, ಪಾರ್ಕಿಂಗ್ ಜಾಗದಲ್ಲಿ, ಮನೆಗಳಲ್ಲಿ ಶಾಲೆಗಳು ನಡೆಯುತ್ತಿವೆ ಅವುಗಳನ್ನು ನಿಯಂತ್ರಿಸುವುದು ತಪ್ಪೇ?

ಅಂತಹ ಸ್ಥಿತಿ ನಿರ್ಮಾಣಕ್ಕೆ ಕಾರಣ ಯಾರು. ಅನೇಕ ಕಡೆ ಸರ್ಕಾರಿ ಶಾಲೆಗಳ ಪರಿಸ್ಥಿತಿಯೂ ಇದೇ ರೀತಿ ಇದೆ. ಒಂದೇ ಕೊಠಡಿಯಲ್ಲಿ 1ರಿಂದ 5ನೇ ತರಗತಿವರೆಗೆ ನಡೆಯುತ್ತಿವೆ. ಮಗುವಿಗೆ ತಾನು ಯಾವ ತರಗತಿಯಲ್ಲಿ ಓದುತ್ತಿದ್ದೇನೆ ಎನ್ನುವುದೇ ಗೊತ್ತಿರುವುದಿಲ್ಲ. ಏಕೋಪಾಧ್ಯಾಯ ಶಾಲೆಗಳು ಹೆಚ್ಚಾಗುತ್ತಿವೆ. ಇದರಿಂದ ಗುಣಮಟ್ಟದ ಶಿಕ್ಷಣ ಸಿಗದೆ ಅವರು ಖಾಸಗಿ ಶಾಲೆಗಳತ್ತ ಬರುತ್ತಾರೆ. ಈ ವರ್ಷ ಸುಮಾರು 400 ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಅನೇಕ ಖಾಸಗಿ ಶಾಲೆಗಳಲ್ಲಿ ಹಿಂದಿನ ವರ್ಷವೇ ಸೀಟು ಭರ್ತಿಯಾಗುತ್ತಿವೆ. ಇದರಿಂದ ಹೆಚ್ಚಿನ ಸಂಖ್ಯೆಯ ಖಾಸಗಿ ಶಾಲೆಗಳು ಹುಟ್ಟಿಕೊಳ್ಳುತ್ತವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳು ಸಿಕ್ಕರೆ ಖಾಸಗಿಯವರು ಶಾಲೆಗಳನ್ನು ತೆರೆಯುವ ಅಗತ್ಯವೇ ಬೀಳುವುದಿಲ್ಲ.‌

* ಇಷ್ಟು ವರ್ಷ ಸುಮ್ಮನಿದ್ದ ಸರ್ಕಾರ ಈಗೇಕೆ ಎಚ್ಚೆತ್ತುಕೊಂಡಿದೆ?

ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಲೆಗಳನ್ನು ಆರಂಭಿಸಲು ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ  ಅಧಿಕಾರಿಗಳು ಲಂಚ ಪಡೆದು ಪರವಾನಗಿ ನೀಡಿದ್ದಾರೆ. ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸುತ್ತಾರೆ. ಆದರೆ, ಅನೇಕ ಶಾಲೆಗಳು ಈ ಸೂಚನೆಯನ್ನು ಪಾಲಿಸುವುದಿಲ್ಲ. ಆದರೂ ಇಂಥ ಶಾಲೆಗಳು ಇಲಾಖೆ ಕಣ್ಣಿಗೆ ಬೀಳುವುದಿಲ್ಲ. ಸಚಿವರು ಮೊದಲು ಇದನ್ನು ಸರಿಪಡಿಸುವತ್ತ ಗಮನ ಹರಿಸಬೇಕು

* ಮಕ್ಕಳಿಗೆ ಕನ್ನಡ ಕಲಿಸುವುದಕ್ಕೂ ಶಾಲೆಗಳು ತಕರಾರು ಮಾಡುವುದು ಎಷ್ಟು ಸರಿ?

ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ನಮ್ಮ ತಕರಾರು ಇಲ್ಲ. ಕನ್ನಡವನ್ನು ಕಡ್ಡಾಯ ಮಾಡಿ 1994ರಲ್ಲಿ ಸರ್ಕಾರ ಕಾನೂನು ಜಾರಿ ಮಾಡಿತು. ಅದನ್ನು ವಿರೋಧಿಸಿ ಖಾಸಗಿ ಶಾಲೆಗಳು ನ್ಯಾಯಾಲಯದ ಮೊರೆ ಹೋದವು. ಸುಮಾರು 19 ವರ್ಷಗಳ ಹೋರಾಟದ ಬಳಿಕ ಭಾಷಾ ಮಾಧ್ಯಮ ಆಯ್ಕೆ ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಳಕ್ಕೆ ಇದೂ ಒಂದು ಕಾರಣ. ಈಗ ಅದೆಲ್ಲವೂ ಮುಗಿದ ಕತೆ. 17,000 ಖಾಸಗಿ ಶಾಲೆಗಳ ಪೈಕಿ ಶೇ 80ರಷ್ಟು ಶಾಲೆಗಳಲ್ಲಿ ಈಗಾಗಲೇ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೇಳುತ್ತಿದ್ದಾರೆ. ಈ ಬಗ್ಗೆ ಸದ್ಯ ನಾವು ಏನೂ ಹೇಳುವುದಿಲ್ಲ.

* ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಬರುವ ಹಣದಿಂದಲೇ ಅನೇಕ ಶಾಲೆಗಳು ಉಸಿರಾಡುತ್ತಿವೆ. ಅದರಲ್ಲೂ ಸುಳ್ಳು ಲೆಕ್ಕ ತೋರಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆಯಲ್ಲಾ?

ಅನೇಕ ಶಾಲೆಗಳು ಸುಳ್ಳು ಲೆಕ್ಕ ತೋರಿಸಿ ಸಿಕ್ಕಿಬಿದ್ದು ಸಹಾಯಕ್ಕಾಗಿ ನಮ್ಮ ಬಳಿಗೆ ಬಂದಿವೆ. ತಪ್ಪು ಮಾಡಿರುವ ಶಾಲೆಗಳನ್ನು ನಾವು ಸಮರ್ಥಿಸುವುದಿಲ್ಲ. ಅನೇಕ ಕಡೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಬಂದು ಸುಳ್ಳು ಲೆಕ್ಕ ಕೊಡಿ ಎಂದು ಶಾಲೆಗಳಿಗೆ ಸೂಚಿಸಿ, ತಾವೂ ಲಾಭ ಪಡೆಯುತ್ತಾರೆ. ಅಕ್ಕಪಕ್ಕದಲ್ಲಿಯೇ ಇರುವ ಶಾಲೆಗಳಲ್ಲಿ ಒಂದಕ್ಕೆ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಯೋಜನೆಯಡಿ ಭರ್ತಿ ಮಾಡಿದರೆ, ಮತ್ತೊಂದರಲ್ಲಿ ಒಬ್ಬ ವಿದ್ಯಾರ್ಥಿಗೂ ಪ್ರವೇಶಾವಕಾಶ ನೀಡುವುದಿಲ್ಲ. ಆಡಳಿತ ಮಂಡಳಿ ಇದನ್ನು ಪ್ರಶ್ನೆ ಮಾಡಿದರೆ, ನಿಮ್ಮ ಶಾಲೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಉತ್ತರಿಸುತ್ತಾರೆ. ಇದರಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಪಾತ್ರ ದೊಡ್ಡದಿದೆ.

* ಖಾಸಗಿ ಶಾಲೆಗಳು ದುಬಾರಿ ಶುಲ್ಕ ಸಂಗ್ರಹಿಸಿದರೂ ಶಿಕ್ಷಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ ಎಂದು ದೂರುಗಳಿವೆ?

ಶಿಕ್ಷಕರಿಗೆ ಕನಿಷ್ಠ ವೇತನ ನೀಡುವುದಕ್ಕೆ ಆಗುತ್ತಿಲ್ಲ ನಿಜ. ಸರ್ಕಾರ ನಮಗೆ ಪರವಾನಗಿ ಕೊಡುತ್ತದೆ ಹೊರತು ಯಾವುದೇ ರೀತಿಯಲ್ಲೂ ಅನುದಾನ ಅಥವಾ ಸೌಲಭ್ಯಗಳ ನೆರವು ಕೊಡುವುದಿಲ್ಲ. ಪ್ರತಿಯೊಂದು ರೂಪಾಯಿಯನ್ನೂ ಪೋಷಕರಿಂದಲೇ ಪಡೆಯಬೇಕು. ಸಂಗ್ರಹಿಸುವ ಶುಲ್ಕದಲ್ಲಿ ಶೇ ಅರ್ಧದಷ್ಟು ಭಾಗವನ್ನು ಶಿಕ್ಷಕರ ವೇತನಕ್ಕೆಂದು ಮೀಸಲಿಡಲು ಸಾಧ್ಯ. ಹೀಗಾಗಿ ಅನೇಕರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ.

* ಮೂಲ ಸೌಲಭ್ಯಗಳೇ ಇಲ್ಲದ ಶಾಲೆಗಳ ಬಗ್ಗೆ ಏಕೆ ನೀವು ಮಾತನಾಡುವುದಿಲ್ಲ?

ಹೊಸದಾಗಿ ಶಾಲೆ ಆರಂಭಿಸಿದರೆ ಆಟದ ಮೈದಾನಕ್ಕಾಗಿ ಒಂದು ಎಕರೆ ಜಾಗ ಇರಬೇಕೆಂದು 2014ರ ನವೆಂಬರ್‌ನಲ್ಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು. ಈ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾದ ಬಳಿಕ ಅದನ್ನು ಅರ್ಧ ಎಕರೆಗೆ ಇಳಿಸಿತು. ಆ ಸಂದರ್ಭದಲ್ಲಿ ಹೊಸ ಶಾಲೆಗಳ ಆರಂಭಕ್ಕೆ ಪರವಾನಗಿಯನ್ನೂ ನೀಡಿತು. ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆದು ಓದುತ್ತಿದ್ದಾರೆ. ಸುಮಾರು ಎರಡೂವರೆ ವರ್ಷ ಸುಮ್ಮನಿದ್ದ ಸರ್ಕಾರ ಎರಡು ತಿಂಗಳಿಂದೀಚೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. 2014ರ ಬಳಿಕ ಆರಂಭವಾದ ಶಾಲೆಗಳ ಪರವಾನಗಿ ರದ್ದು ಮಾಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಅವರ ಪೋಷಕರು ಕಂಗಾಲಾಗಿದ್ದಾರೆ. ಇದನ್ನು ಪ್ರಶ್ನಿಸಿ ನಾವು ನ್ಯಾಯಾಲಯಕ್ಕೆ ಹೋದೆವು. ಸಮಸ್ಯೆಯನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳುತ್ತೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣ ಇತ್ಯರ್ಥ ಆಗಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ. ಅಧಿಕಾರಿಗಳು ಮಾಡುವ ಯಡವಟ್ಟುಗಳಿಗೆ ನಾವು ಬೆಲೆ ತೆರಬೇಕಾಗಿದೆ. ಅನುಮತಿ ಕೊಡುವ ಸಮಯದಲ್ಲೇ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry