ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯ ಪದ ಬಳಕೆ ನಿಲ್ಲಿಸಬೇಕು

Last Updated 24 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಕೋಲಾರ: ‘ನ್ಯಾಯಾಲಯದ ಆದೇಶವಿದ್ದರೂ ಕೆಲ ಇಲಾಖಾ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುವುದನ್ನು, ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ಮತ್ತು ನಕಲಿ ವೈದ್ಯರೆಂಬ ಪದ ಬಳಸುವುದನ್ನು ನಿಲ್ಲಿಸಬೇಕು’ ಎಂದು ಅನುಭವಿ ಮತ್ತು ವಂಶ ಪಾರಂಪರಿಕ ವೈದ್ಯರ ಸಂಘದ ಪ್ರಧಾನ ಸಂಯೋಜಕ ಬಿ.ಎಸ್.ಚಂದ್ರು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 4 ಸಾವಿರ ಮಂದಿ ಅನುಭವಿ ಮತ್ತು ವಂಶ ಪಾರಂಪರಿಕ ವೈದ್ಯರಿದ್ದಾರೆ. ಸೂಕ್ತ ತರಬೇತಿ, ಅನುಭವ, ವಿದ್ಯಾರ್ಹತೆ ಆಧಾರದಲ್ಲಿ ಇವರ ಸೇವೆಯ ಮುಂದುವರಿಕೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ರಾಜ್ಯ ಹೈಕೋರ್ಟ್‌ 2017ರ ಜೂ.23ರಂದು ತೀರ್ಪು ನೀಡಿ ಎರಡು ತಿಂಗಳೊಳಗೆ ಈ ವೈದ್ಯರ ಸೇವೆ ಮುಂದುವರಿಕೆಗೆ ಅವಕಾಶ ಕಲ್ಪಿಸುವಂತೆ ಆದೇಶಿಸಿದೆ. ಇದರಿಂದ ನಕಲಿ ವೈದ್ಯರೆಂಬ ಹಣೆಪಟ್ಟಿಯಿಂದ ಮುಕ್ತಿ ಪಡೆದಂತಾಗಿದ್ದು, ವೈದ್ಯರಲ್ಲಿ ಸಂತಸ ಮೂಡಿದೆ. ಆದರೆ, ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ 2007 ಮತ್ತು 2009ರ ಅನ್ವಯ ನಿಗದಿಪಡಿಸಲಾದ ವಿದ್ಯಾರ್ಹತೆ ಇಲ್ಲದ ಕಾರಣ ರಾಜ್ಯದಲ್ಲಿ ಅನುಭವಿ ಮತ್ತು ವಂಶ ಪಾರಂಪರಿಕ ವೈದ್ಯರು ಸಂಕಷ್ಟಕ್ಕೆ ಸಿಲುಕಿದರು. ಈಗ ನಾಟಿ, ಪಾರಂಪರಿಕ, ರಿಜಿಸ್ಟರ್ ಮೆಡಿಕಲ್ ಪ್ರಾಕ್ಟೀಶನರ್‌್ಸ (ಆರ್‌ಎಂಪಿ), ಪ್ರೈವೇಟ್‌ ಮೆಡಿಕಲ್‌ ಪ್ರಾಕ್ಟೀಶನರ್‌್ಸ (ಪಿಎಂಪಿ) ಹಾಗೂ ಇತರೆ ವೈದ್ಯರ ಸೇವೆಯ ಮುಂದುವರಿಕೆಗೆ ಇದ್ದ ಅಡಚಣೆ ದೂರವಾಗಿದೆ ಎಂದರು.

ಹೈಕೋರ್ಟ್‌ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿ ಸಂಘದ ಬೇಡಿಕೆಯನ್ನು ತುರ್ತಾಗಿ ಈಡೇರಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಂಘವು ನ್ಯಾಯಾಲಯದ ಆದೇಶ ಪಾಲಿಸುವಂತೆ ಎಲ್ಲಾ ಜಿಲ್ಲೆಗಳ ನೋಂದಣಿ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಿದೆ ಎಂದು ವಿವರಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿ, ಕಾರ್ಯದರ್ಶಿ ರಾಜ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT