7

ನಗರದಲ್ಲಿ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

Published:
Updated:

ಹಾವೇರಿ: ಮನೆ ಮುಂದೆ ಗೋದಲಿ (ಕುರಿಗಳ ಹಟ್ಟಿ), ಪಕ್ಕದಲ್ಲೇ ಕ್ರಿಸ್‌ಮಸ್‌ ಮರ, ಗೋದಲಿಯಲ್ಲಿ ಕುರಿಮರಿ, ದನಕರುಗಳು, ಸುತ್ತ ನಕ್ಷತ್ರ, ನೇತಾಡುವ ಆಕಾಶಬುಟ್ಟಿ, ವಿದ್ಯುತ್ ದೀಪಾಲಂಕಾರ, ಕ್ಯಾಂಡಲ್‌ ದೀಪಗಳು, ಎಲ್ಲೆಡೆ ಕಣ್ಮನ ಸೆಳೆಯುವ ಬಣ್ಣ–ಬೆಳಕು. ಆ ಗೋದಲಿಯಲ್ಲಿ ಕುಳಿತ ಮೇರಿಯಮ್ಮ. ಮೇರಿಯಮ್ಮ ಮಡಿಲಲ್ಲಿ ಬಾಲಯೇಸು. ಯೇಸುಕ್ರಿಸ್ತರ ಜನನ ದಿನವಾದ ‘ಕ್ರಿಸ್‌ಮಸ್’ ಅನ್ನು ಭಾನುವಾರ ರಾತ್ರಿ ಕ್ರೈಸ್ತ ಅನುಯಾಯಿಗಳು ಭಕ್ತಿ, ಶ್ರದ್ಧೆಯಿಂದ  ಜಿಲ್ಲೆಯಾದ್ಯಂತ ಆಚರಿಸಿದರು.

‘ದೇವವಾಣಿ ನುಡಿದಂತೆ ನಿಮ್ಮ ಉದರದಲ್ಲಿ ದೇವಮಾನವ ಜನಿಸಲಿದ್ದಾನೆ’ ಎಂಬ ಏಂಜೆಲ್‌್ ಗ್ಯಾಬ್ರಿಯಲ್‌ ಸಂದೇಶದ ಪಾಲನೆಯನ್ನು ಮಾಡಿದ ಮೇರಿಯಮ್ಮ ಬಾಲಯೇಸುವಿಗೆ ಜನ್ಮ ನೀಡಿದರು. ಈ ನಂಬಿಕೆಯ ಘಳಿಗೆಯನ್ನು ಭಕ್ತಿ, ಶ್ರದ್ಧೆ, ಸಡಗರದಿಂದ ‘ಕ್ರಿಸ್‌ಮಸ್’ ಆಚರಿಸಿದರು.

‘ತಂದೆಯೇ ಅವರನ್ನು ಕ್ಷಮಿಸಿ ಬಿಡು. ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವರೇ ಅರಿಯರು’ ಎಂದು ತಮ್ಮನ್ನು ವಿರೋಧಿಸಿದವರ ಕ್ಷಮೆಗೆ ಶಿಲುಬೆಗೇರಿಸಲಾದ ಕೊನೆ ಕ್ಷಣದಲ್ಲೂ ಪ್ರಾರ್ಥಿಸಿದ ಕರುಣಾಮಯಿ ಯೇಸುಕ್ರಿಸ್ತರ ಹುಟ್ಟುಹಬ್ಬದಲ್ಲಿ ವಿವಿಧ ಧರ್ಮದವರು ಪಾಲ್ಗೊಂಡರು.

ಕ್ರೈಸ್ತರಲ್ಲಿ ರೋಮನ್‌ ಕ್ಯಾಥೊ ಲಿಕ್‌, ಪ್ರೊಟೆಸ್ಟೆಂಟ್‌, ಮೆಥೋಡಿಸ್ಟ್‌, ಯಹೋವನನ ಸಾಕ್ಷಿಗಳು, ನ್ಯೂ ಲೈಫ್‌ ಮತ್ತಿತರ ಪಂಥಗಳಿದ್ದು, ಆರಾಧನಾ ವೈವಿಧ್ಯತೆ ನಡುವೆಯ ಕ್ರಿಸ್‌ಮಸ್‌ ಸಂಭ್ರಮಿಸಿತು.

ಗೋದಲಿ–ಜನನ: ಭಾನುವಾರ ಮಧ್ಯ ರಾತ್ರಿಯಲ್ಲಿ 12 ಗಂಟೆಯಾದ ತಕ್ಷಣವೇ ‘ಕ್ರಿಸ್‌ಮಸ್‌’ ಆಚರಿಸಲಾಯಿತು. ಸಿಂಗರಿ ಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು, ದೇವರ ಸ್ತುತಿ, ಜೋಗುಳ ಮೂಲಕ ಆರಾಧಿಸಿದರು. ಮೇಣದಬತ್ತಿ ಬೆಳಗಿದರು. ಹೂವು, ಸುಗಂಧ ಅರ್ಪಿಸಿದರು.

ಡಿ.24ರ ಸಂಜೆಯಿಂದಲೇ ಚರ್ಚ್‌ ಗಳಲ್ಲಿ ಪ್ರಾರ್ಥನೆ– ಪೂಜೆಗಳು, ಧರ್ಮ ಗುರುಗಳ (ಫಾದರ್‌) ನೇತೃತ್ವದಲ್ಲಿ ನಡೆದವು. ಜಿಲ್ಲೆಯ ಹಾವೇರಿ, ಗುತ್ತಲ, ರಾಣೆಬೆನ್ನೂರು, ಹಾನಗಲ್‌ ಮತ್ತಿ ತರೆಡೆಗಳಲ್ಲಿ ‘ಕ್ರಿಸ್‌ಮಸ್‌’ ಆಚರಿಸಲಾಯಿತು.

ಕ್ರಿಸ್‌ಮಸ್‌ ಪೂರ್ವದಲ್ಲಿ: ಒಂಬತ್ತು ದಿನ ಮಾತೆ ಮೇರಿಯಮ್ಮ ಅವರನ್ನು ಪ್ರಾರ್ಥಿಸುವ ‘ನೊವೆನಾ’ ನಡೆಯಿತು. ಆಗ ಉಪವಾಸ, ದಾನ ಧರ್ಮ ಮಾಡುತ್ತಾರೆ. ಆ ಒಂಬತ್ತು ದಿನಗಳೂ ಚರ್ಚ್‌, ಮನೆಗಳಲ್ಲಿ ಆರಾಧನೆಗಳು ನಡೆದವು. ಇದಕ್ಕೂ ಹಿಂದಿನ ನವೆಂಬರ್ ತಿಂಗಳನ್ನು ‘ಹಿರಿಯರ ತಿಂಗಳು’ ಎಂದು ಆಚರಿಸಲಾಗಿತ್ತು.

‘ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ಪ್ರೀತಿ, ಕ್ಷಮೆ, ದಾನ, ವಿಶ್ವಾಸ ಸೇರಿದಂತೆ ಎಲ್ಲ ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಉತ್ತಮ ಜೀವನ ನಡೆಸಿದರೆ, ಯೇಸುಸ್ವಾಮಿ ನಮ್ಮನ್ನೆಲ್ಲ ಹರಸುತ್ತಾರೆ’ ಎನ್ನುತ್ತಾರೆ ಹಾವೇರಿಯ ಶೆರ್ಲಿನ್‌ ಥಾಮಸ್‌.

ಸಂತ ಕ್ಲಾಸಾ: 4ನೇ ಶತಮಾನದಲ್ಲಿ ಟರ್ಕಿಯಲ್ಲಿದ್ದ ಬಿಷಪ್‌ ಸಂತ ನಿಕೋಲಸ್‌ ದಾನಿಯಾಗಿದ್ದರು. ಅವರ ನೆನಪಿನಲ್ಲಿ ಕೆಂಪು ಬಟ್ಟೆ, ಟೊಪ್ಪಿ ಧರಿಸಿ, ಗಡ್ಡ ಧರಿಸಿಕೊಂಡು ಚಾಕ್ಲೋಟ್ ಹಿಡಿದುಕೊಂಡ ಬಂದ, ಸಂತ ಕ್ಲಾಸಾ ವೇಷಧಾರಿಯು ಮಕ್ಕಳಿಗೆ ಖುಷಿ ನೀಡಿತು. ಕ್ಯಾರೋಲ್ ಹಾಡು ಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry