7

ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್‌

Published:
Updated:

ಮಂಗಳೂರು: ಪ್ರಭು ಯೇಸು ಕ್ರಿಸ್ತರ ಜನನವನ್ನು ಸಂಭ್ರಮಿಸುವ ಕ್ರಿಸ್ಮಸ್‌ ಹಬ್ಬವನ್ನು ಸೋಮವಾರ ಕರಾವಳಿಯಲ್ಲಿ ಆಚರಿಸಲಾಯಿತು. ಈ ಭಾಗದಲ್ಲಿ ಕ್ರಿಸ್ಮಸ್‌ ಹಬ್ಬದ ಸಂಭ್ರಮ ತುಸು ಹೆಚ್ಚಾಗಿದ್ದು, ಕ್ರಿಸ್ಮಸ್‌ ಪ್ರಯುಕ್ತ ಚರ್ಚ್‌ಗಳಲ್ಲಿ ಬಲಿಪೂಜೆ, ವಿಶೇಷ ಪ್ರಾರ್ಥನೆಗಳು ನಡೆದವು.

ಕ್ರಿಸ್ಮಸ್‌ ಹಬ್ಬ ಅಂಗವಾಗಿ ನಗರದ ರೊಸಾರಿಯೊ ಕೆಥಡ್ರಲ್ ಚರ್ಚ್‌ನಲ್ಲಿ ಭಾನುವಾರ ರಾತ್ರಿ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಅಲೋಶಿಯಸ್ ಪಾವ್ಲ್‌ ಡಿಸೋಜ ಲೋಕ ಬಲಿಪೂಜೆ ನೆರವೇರಿಸಿದರು.

ಚರ್ಚ್‌ಗಳಲ್ಲಿ ಯೇಸುವಿನ ಜನ್ಮವನ್ನು ಸ್ಮರಿಸುವ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು. ಕ್ರೈಸ್ತರು, ತಮ್ಮ ಮನೆಗಳಲ್ಲೂ ಗೋದಲಿಗಳನ್ನು ನಿರ್ಮಿಸಿ ಅಲಂಕರಿಸಿದ್ದರು. ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಹಬ್ಬಕ್ಕೆ ವಿಶೇಷ ಕಳೆ ತಂದಿತ್ತು.

ನಗರದ ಲೇಡಿಹಿಲ್, ಕೋಡಿಕಲ್, ಮಿಲಾಗ್ರಿಸ್ ಚರ್ಚ್, ಬೆಂದೂರ್‌ವೆಲ್, ಬಿಜೈ, ಕೂಳೂರು, ಬೋಂದೆಲ್, ದೇರೆಬೈಲ್, ಕುಲಶೇಖರ, ಉರ್ವ, ಪಾಲ್ದನೆ, ವಾಮಂಜೂರು, ಪೆರ್ಮ ನ್ನೂರು, ಕುತ್ತಾರುಪದವು, ಕೋಡಿಕಲ್, ಪಕ್ಷಿಕೆರೆ, ಕಿನ್ನಿಗೋಳಿ ಮುಂತಾದ ಚರ್ಚ್‌ಗಳಲ್ಲಿ ಸಹಸ್ರಾರು ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭಾನುವಾರ ರಾತ್ರಿ ಚರ್ಚ್‌ಗಳಲ್ಲಿ ಯೇಸುಕ್ರಿಸ್ತನ ಜನ್ಮ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಸಂಭ್ರಮಾಚರಣೆ ಅಂಗವಾಗಿ ವಿಶೇಷ ಬಲಿ ಪೂಜೆ, ಕ್ರಿಸ್ಮಸ್‌ ಗೀತೆಗಳ ಗಾಯನ, ಸಾಂತಾಕ್ಲಾಸ್ ಆಗಮನ, ಕೇಕ್ ಡ್ರಾ ಕಾರ್ಯಕ್ರಮಗಳು ನಡೆದವು. ಬಳಿಕ ಮನೆಗೆ ತೆರಳಿ ಕ್ರಿಸ್ಮಸ್‌ ಪ್ರಯುಕ್ತ ತಯಾರಿಸಿದ ಕ್ರಿಸ್ಮಸ್‌ ತಿಂಡಿಗಳನ್ನು ನೆರೆಮನೆಯವರಿಗೆ ಹಂಚಿ ಸಂಭ್ರಮಿಸಿದರು. ಸೋಮವಾರ ಬೆಳಿಗ್ಗೆಯಿಂದಲೇ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಕ್ರಿಸ್ಮಸ್‌ ಶುಭಾಶಯ ವಿನಿಮಯ ಮಾಡಿಕೊಂಡರು.

ಮಾಲ್‌ಗಳಲ್ಲೂ ಸಂಭ್ರಮ: ನಗರದ ನಾನಾ ಮಳಿಗೆಗಳು, ಮಾಲ್‌ಗಳಲ್ಲಿ ಕೇಕ್ ಮತ್ತು ಕ್ರಿಸ್ಮಸ್‌ ತಿಂಡಿಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಸಾಂತಾಕ್ಲಾಸ್ ದಿರಿಸು ತೊಟ್ಟು ವ್ಯಕ್ತಿ ಎಲ್ಲರನ್ನೂ ಸ್ವಾಗತಿಸುತ್ತಿದ್ದುದು ಆಕರ್ಷಕವಾಗಿತ್ತು.ಕ್ರಿಸ್ಮಸ್‌ ಟ್ರೀಗಳು, ಟ್ಯಾಬ್ಲೊಗಳು ಮಳಿಗೆ, ಮಾಲ್‌ಗಳಿಗೆ ವಿಶೇಷ ಕಳೆ ನೀಡಿದ್ದವು.

ನಗರದ ನಾನಾ ಮಾಲ್‌ಗಳು, ವಿದ್ಯಾ ಸಂಸ್ಥೆಗಳು, ಸಂಘಟನೆಗಳು ಕ್ರಿಸ್ಮಸ್‌ ಹಬ್ಬ ಆಚರಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದವು. ಸಾರ್ವಜನಿಕರಿಗಾಗಿ ನಾನಾ ಮಾದರಿಯ ಸ್ಪರ್ಧೆಗಳನ್ನು ನಡೆಸಲಾಯಿತು. ಅಲ್ಲಲ್ಲಿ ಏರ್ಪಡಿಸಲಾದ ಸಂಗೀತ ರಸಮಂಜರಿಯಲ್ಲಿ ಭಾಗವಹಿಸಿ ಸಂಭ್ರಮ ಆಚರಿಸಿದರು. ಒಟ್ಟಾರೆ ಇಡೀ ಕರಾವಳಿಯೇ ಸಂಭ್ರಮದಲ್ಲಿ ತೇಲಿತು.

ರಂಜಿಸಿದ ಮೇಯರ್‌ ಹಾಡು

ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್‌ ಡಿಸೋಜ ನಿವಾಸದಲ್ಲಿ ಸೋಮವಾರ ನಡೆದ ಸಂಭ್ರಮ ಕೂಟದಲ್ಲಿ ಮೇಯರ್‌ ಕವಿತಾ ಸನಿಲ್‌ ಅವರ ಹಾಡು ಗಮನ ಸೆಳೆಯಿತು.

ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌ ಅವರು, ‘ತೇರೆ ಮೇರೆ ಬೀಚ್‌ ಮೆ...’ ಹಿಂದಿ ಹಾಡು ಹಾಡಿದರು. ಸಭಿಕರ ಒತ್ತಾಯದ ಮೇಲೆ ’ಏ ಮೇರಾ ದಿಲ್‌...’ ಹಾಡು ಹಾಡುವ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯ ಅಬ್ದುಲ್‌ ಲತೀಫ್‌ ಕೂಡ ‘ಪಲ್‌ ಪಲ್‌ ದಿಲ್‌ ಕೆ ಪಾಸ್‌...’ ಹಾಡನ್ನು ಹಾಡಿದರು. ಐವನ್‌ ಡಿಸೋಜ ಕೂಡ ಹಾಡಿಗೆ ಧ್ವನಿಗೂಡಿಸುವ ಮೂಕ ಕ್ರಿಸ್ಮಸ್‌ ಸಂಭ್ರಮವನ್ನು ಹಂಚಿಕೊಂಡರು.

* * 

ಜೀಸಸ್ ಅವರ ಜೀವನ ಬಡವರ ಮೇಲಿನ ಪ್ರೀತಿ, ಅನುಕಂಪದ್ದಾಗಿದೆ. ಮಾನವ ಜನ್ಮ ಪಾವನವಾಗಬೇಕಾದರೆ ಪ್ರತಿಯೊಬ್ಬರೂ ತ್ಯಾಗ ಮನೋಭಾವ ಹೊಂದಬೇಕು.

ಅಲೋಶಿಯಸ್ ಪಾವ್ಲ್‌ ಡಿಸೋಜ

ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry