7

ಬೆಲೆ ನಿಗದಿಪಡಿಸಿ, ಭೂಸ್ವಾಧೀನ ಮಾಡಿ

Published:
Updated:
ಬೆಲೆ ನಿಗದಿಪಡಿಸಿ, ಭೂಸ್ವಾಧೀನ ಮಾಡಿ

ಬೀಳಗಿ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಹೊಲ–ಮನೆಗಳನ್ನು ಕಳೆದುಕೊಳ್ಳುವ ಸಂತ್ರಸ್ತರ ಜಮೀನುಗಳಿಗೆ ಮೊದಲು ಬೆಲೆ ನಿಗದಿ ಮಾಡಬೇಕು. ನಂತರ ಭೂಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಇಲ್ಲಿಯ ಕೊರ್ತಿ ಸಮುದಾಯ ಭವನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ತಾಲ್ಲೂಕಿನಲ್ಲಿ ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ರಚಿಸಿದ ಉಪ ಸಮಿತಿಗೆ ಅಧಿಕಾರಿಗಳು ಸಲ್ಲಿಸುವ ವರದಿ ಸಂತ್ರಸ್ತರಿಗೆ ಅನುಕೂಲವಾಗಬೇಕು. ಇಲ್ಲದಿದ್ದರೆ ಈ ಯೋಜನೆ ವಿಳಂಬವಾಗುತ್ತದೆ. ಮುಳುಗಡೆ ಹೋರಾಟ ಸಮಿತಿ ಕೈಗೊಂಡ 33 ನಿರ್ಣಯಗಳು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದರು.

ಸಂತ್ರಸ್ತರ ನೀರಾವರಿ ಭೂಮಿಗೆ ₹ 40 ಲಕ್ಷ ಹಾಗೂ ಒಣಬೇಸಾಯ ಭೂಮಿಗೆ ₹ 30 ಲಕ್ಷ ಹಣ ನಿಗದಿ ಮಾಡಬೇಕು. ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗಾಗಿ ₨ 600 ಕೋಟಿ ಅಗತ್ಯವಿದೆ. ಕೂಡಲೇ ಸರ್ಕಾರ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಉದ್ಯೋಗ ಶಿಕ್ಷಣದಲ್ಲಿ ಆದ್ಯತೆ ನೀಡಬೇಕು. ಗಿರಿಸಾಗರ, ಚಿಕ್ಕಾಲಗುಂಡಿ, ಲಿಂಗಾಪುರ ಎಸ್ ಕೆ ಗ್ರಾಮಗಳನ್ನು ಸರಿಯಾಗಿ ಸರ್ವೇ ಮಾಡಬೇಕು. ಗಲಗಲಿಯಲ್ಲಿ 15 ವರ್ಷಗಳ ಹಿಂದಿನ ಕಟ್ಟಡಗಳ ಸರ್ವೇ ಮಾಡಿ ಇನ್ನೂ ಪರಿಹಾರ ಕೊಟ್ಟಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಬಡ್ಡಿಯೊಂದಿಗೆ ಪರಿಹಾರ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್ ನಿರಾಣಿ ಮಾತನಾಡಿ, ‘ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಈಗಾಗಲೇ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿ, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಮಖಂಡಿಯ ಉಪ ವಿಭಾಗಾಧಿಕಾರಿ ರವಿ ಕರಲಿಂಗಣ್ಣವರ, ಪ್ರಕಾಶ ರಜಪೂತ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಖೋತ, ತಹಶೀಲ್ದಾರ್ ಉದಯ ಕುಂಬಾರ ಇದ್ದರು. ಸಭೆಯಲ್ಲಿ ಸಂತಸ್ತರ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry