7

22 ಸಾವಿರ ಕನ್ನಡ ಶಾಲೆ ಮುಚ್ಚುವ ಆತಂಕ

Published:
Updated:
22 ಸಾವಿರ ಕನ್ನಡ ಶಾಲೆ ಮುಚ್ಚುವ ಆತಂಕ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ 22 ಸಾವಿರ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿ ಸಂಗತಿ. ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಬೇಕು. ಆಡಳಿತದಲ್ಲಿ ಕನ್ನಡ ಜಾರಿಯಾಗಲಿ. ಆಗ ಮಾತ್ರ ರಾಜ್ಯೋತ್ಸವವು ಅರ್ಥಪೂರ್ಣವಾಗುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ನಗರದ ರೋಜಿಪುರದ ಶ್ರೀರಾಜರಾಜೇಶ್ವರಿ ಕನ್ನಡ ಯುವಕ ಸಂಘದ 19ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಶ್ರೀಮುತ್ಯಾಲಮ್ಮ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿಗೂ ಗಡಿನಾಡಿನಲ್ಲಿ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ. ಕರ್ನಾಟಕಕ್ಕೆ ಸೇರಬೇಕಾಗಿರುವ ಪ್ರದೇಶಗಳು ಬೇರೆ ರಾಜ್ಯಗಳಿಗೆ ಸೇರಿವೆ. ಸರ್ಕಾರಿ ಆದೇಶಗಳು ಬಹುಪಾಲು ಆಂಗ್ಲ ಭಾಷೆಯಲ್ಲಿವೆ. ಆಂಗ್ಲಭಾಷೆ ಕಲಿತರೆ ಮಾತ್ರ ಬದುಕು ಎನ್ನವು ಭ್ರಮೆ ಇಂದು ಭಾಷೆಯ ಬಗೆಗಿನ ಅಸಡ್ಡೆಗೆ ಕಾರಣ. ಕನ್ನಡಗಿರ ಬದುಕು ಹಸನಾದಾಗ ಮಾತ್ರ ಕನ್ನಡಪರ ಹೋರಾಟಗಾರರ ಶ್ರಮ ಸಾರ್ಥಕ ಎಂದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ನಾಡು ನುಡಿಯ ಏಳಿಗೆಗಾಗಿ ಶ್ರಮಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ರಾಷ್ಟ್ರೀಯ ಪಕ್ಷಗಳಿಂದ ಕನ್ನಡಕ್ಕೆ ಮಾರಕ. ಪ್ರಾದೇಶಿಕ ಪಕ್ಷಗಳು ಬಲಗೊಳ್ಳಬೇಕಿದೆ. ಕನ್ನಡ ನಾಡು ನುಡಿ ಹೋರಾಟಗಳಲ್ಲಿ ಕನ್ನಡ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಕನ್ನಡ ಸಂಘಟನೆಗಳು ಇರದಿದ್ದರೆ ಕನ್ನಡದ ಪರಿಸ್ಥಿತಿ ಅಧೋಗತಿ ಆಗುತ್ತದೆ ಎಂದರು.

ನಗರಸಭಾ ಸದಸ್ಯ ಹಾಗೂ ಸಂಘದ ಅಧ್ಯಕ್ಷ ಆರ್.ಕೆಂಪರಾಜು ಮಾತನಾಡಿ, ಅನ್ಯ ಭಾಷೆಗಳಿಗೆ ಮನ್ನಣೆ ನೀಡುತ್ತಾ ಕನ್ನಡಿಗರಿಂದಲೇ ಕನ್ನಡ ಭಾಷೆಗೆ ಕುತ್ತು ಬಂದಿರುವುದು ವಿಷಾದನೀಯ. ನಾಡು ನುಡಿಯ ಏಳಿಗೆಗಾಗಿ ಶ್ರಮಿಸಿರುವ ಹಲವಾರು ಮಹನೀಯರನ್ನು ನಾವು ಇಂದು ಸ್ಮರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜರಾಜೇಶ್ವರಿ ಕನ್ನಡ ಯುವಕ ಸಂಘ ಹಲವಾರು ಕನ್ನಡ ಹೋರಾಟಗಳಲ್ಲಿ ತೊಡಗಿಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯೋತ್ಸವ ಸಮಾರಂಭಗಳಿಗೆ ನಾಡಿನ ವಿವಿಧ ಗಣ್ಯರನ್ನು ಕರೆಸಿ ಗೌರವಿಸಿದೆ ಎಂದರು.

ಸಮಾರಂಭದಲ್ಲಿ ರಾಜರಾಜೇಶ್ವರಿ ಕನ್ನಡ ಯುವಕ ಸಂಘದಿಂದ ಹೊರತಂದಿರುವ 2018ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕ್ರೀಡಾಪಟು ಪೂರ್ವಿಕ ಗೌಡ ಹಾಗೂ ಗ್ಯಾಸ್ ಮಂಜುನಾಥ್ ಕುಟುಂಬದವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ಎಂ.ಎ.ಬಿ.ಎಲ್ ಶಾಲೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್, ಪರಿಸರವಾದಿ ಕೆ.ಗುರುದೇವ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್‌ಕುಮಾರ್, ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲ್ಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ರಾಜ ರಾಜೇಶ್ವರಿ ಕನ್ನಡ ಯುವಕ ಸಂಘದ ಗೌರವ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಮುಖಂಡರಾದ ಮಧುಸೂಧನ್, ರಮೇಶ್, ರಾಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry