7

ಸಿ.ಎಂ.ಗೆ ಮನವಿಗಳ ಮಹಾಪೂರ

Published:
Updated:

ಲಕ್ಷ್ಮೇಶ್ವರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ವಿನಂತಿಸಿ ಮನವಿಪತ್ರಗಳನ್ನು ಸಲ್ಲಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಬಡಿಗೇರ ಹಾಗೂ ಎಸ್‌.ವಿ. ಕಮ್ಮಾರ ಶಿರಹಟ್ಟಿ ತಾಲ್ಲೂಕಿನ ವರವಿ ಮೌನೇಶ್ವರ, ತಿಂತಣಿ ಮೌನೇಶ್ವರ ಹಾಗೂ ಸವದತ್ತಿ ತಾಲ್ಲೂಕು ಶಿರಸಂಗಿಯ ಕಾಳಿಕಾ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಜಿ. ಹರ್ಲಾಪುರ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಪಾಟೀಲ ಮನವಿ ಸಲ್ಲಿಸಿದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಅಂಬೇಡ್ಕರ್‌ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಗಡದವರ, ಪ್ರಧಾನ ಕಾರ್ಯದರ್ಶಿ ಜಗದೀಶ ಹುಲಿಗೆಮ್ಮನವರ ಮನವಿ ಮಾಡಿದರು.

ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಕೇಂದ್ರ ಸರ್ಕಾರದ ಎಲ್ಲ ಉದ್ಯಮಗಳಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ಇಲಾಖೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ಯಮಗಳಲ್ಲಿ ಕನಿಷ್ಠ ಹತ್ತನೇ ತರಗತಿವರೆಗೆ ಕನ್ನಡ ಭಾಷೆಯಲ್ಲಿ ಕಲಿತಿರುವವರನ್ನು ನೇಮಕ ಮಾಡಿಕೊಳ್ಳಬೇಕು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇದ್ದು ಉತ್ತರವನ್ನು ಕನ್ನಡದಲ್ಲಿಯೇ ಬರೆಯುವ ವ್ಯವಸ್ಥೆ ಮಾಡಬೇಕು. ಡಾ.ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಗೋಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಕುಂಬಾರ, ಲಕ್ಷ್ಮೇಶ್ವರ ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಮನವಿ ಸಲ್ಲಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡಬಾರದೆಂದು ಭೋವಿ ಸಮಾಜದ ಜಯಕ್ಕ ಕಳ್ಳಿ, ಲಂಬಾಣಿ ಸಮಾಜದ ಟೋಪಣ್ಣ ಲಮಾಣಿ, ಮಾನು ಲಮಾಣಿ, ದೀಪಕ ಲಮಾಣಿ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಎಲ್ಲರ ಮನವಿಗಳನ್ನು ಸ್ವೀಕರಿಸಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry