3

ವಿಜ್ಞಾನ–ತಂತ್ರಜ್ಞಾನ@2017

Published:
Updated:
ವಿಜ್ಞಾನ–ತಂತ್ರಜ್ಞಾನ@2017

ಇಸ್ರೊ ಹಾರಿಬಿಟ್ಟ ರಾಕೆಟ್‌ನಿಂದ ಕಕ್ಷೆ ಸೇರುವ ಉಪಗ್ರಹದ ಮುಂದಿನ ಕಾರ್ಯವೇನು? ಡಿಜಿಟಲ್‌ ಕ್ರಾಂತಿಗೆ ಯಾವೆಲ್ಲ ಆ್ಯಪ್‌ಗಳು ಸಹಕಾರಿಯಾದವು? ನಿತ್ಯದ ಕೆಲಸಗಳನ್ನು ಸುಲಭಗೊಳಿಸುವ ತಂತ್ರಜ್ಞಾನ ಏನೇನು ಬಂತು?

ಹೆಗ್ಗುರುತು ಮೂಡಿಸಿದ ಐಫೋನ್‌– 10

ಐಫೋನ್ ಎನ್ನುವ ಮಾಂತ್ರಿಕ ಕಣ್ಬಿಟ್ಟು ಭರ್ತಿ ಹತ್ತು ವಸಂತಗಳನ್ನು ಕಂಡ ವರ್ಷ 2017. ಮಾರುಕಟ್ಟೆಯಲ್ಲಿ ತನ್ನ ಎಲ್ಲ ಪ್ರಬಲ ಎದುರಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಐಫೋನ್, 10 ವರ್ಷಗಳ ಈ ಅವಧಿಯಲ್ಲಿ ದೈತ್ಯನಾಗಿ ಬೆಳೆದು ನಿಂತಿದೆ. ಆ್ಯಪಲ್‌ ಕಂಪನಿ 8, 8 ಪ್ಲಸ್‌, 10 ಹೀಗೆ ಮೂರು ಆವೃತ್ತಿಗಳನ್ನು ಒಟ್ಟಿಗೆ ಬಿಡುಗಡೆ ಮಾಡಿ ಮೊಬೈಲ್‌ ಪ್ರಿಯರ ಮನಸ್ಸಿಗೆ ಲಗ್ಗೆ ಇಟ್ಟಿತು.

ಹತ್ತು ವರ್ಷಗಳ ಹಿಂದೆ ಮೊದಲ ಐಫೋನ್ ಮಾರುಕಟ್ಟೆಯಲ್ಲಿ ಎಂತಹ ಜಾದೂ ಮಾಡಿತ್ತು ಎನ್ನುವುದು ಇನ್ನೂ ನೆನಪಿನಲ್ಲಿರುವಾಗಲೇ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಅಂಥದ್ದೇ ಸಂಭ್ರಮ ಮೂಡಿತು.

ಓಎಲ್ಇಡಿ ತಂತ್ರಜ್ಞಾನದ ಡಿಸ್‌ಪ್ಲೇ ಹೊಂದಿದ್ದು, 5.8 ಇಂಚಿನ ಪರದೆಯಲ್ಲಿ 2 ಮಿಲಿಯನ್ ಪಿಕ್ಸೆಲ್‌ಗಳಿರುವುದು ಹಾಗೂ ಎಡ್ಜ್ ಟು ಎಡ್ಜ್ ತಂತ್ರಜ್ಞಾನ ಹೊಂದಿರುವುದು ಈ ಮೊಬೈಲ್‌ನ ವಿಶೇಷ. ಟಚ್ ಐಡಿಯ ಬದಲಾಗಿ ಫೇಸ್ ಐಡಿಯನ್ನು ಪರಿಚಯಿಸಿದ್ದರಿಂದ ಐ–10 ಮೊಬೈಲ್‌ಗೆ ಮುಖವೇ ಪಾಸ್‌ವರ್ಡ್.

ಐಫೋನ್‌ ಕೊಳ್ಳಲು ಕಿಡ್ನಿ ಮಾರಿದ, ಮನೆ ಮಾರಿದ, ಕಾರು ಮಾರಿದ ತಮಾಷೆ ವಿಡಿಯೊಗಳು, ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಿಕೊಂಡಿದ್ದವು. ‘ಐಫೋನ್ 7 ಕೊಳ್ಳಲು ಕಿಡ್ನಿ ಮಾರಿದ್ದೆ, ಈಗ ಕಣ್ಣಿನ ಸರದಿ’, ‘ನನ್ನ ಹೆಂಡತಿ ಐಫೋನ್ 10 ಬಳಸಲಾರಳು, ಮೇಕಪ್ ಇಲ್ಲದೆ ನಾನೇ ಅವಳನ್ನು ಗುರುತಿಸಲಾರೆ ಇನ್ನು ಫೋನ್ ಹೇಗೆ ಗುರುತಿಸುತ್ತದೆ’... ಇಂತಹ ಅಸಂಖ್ಯ ಜೋಕುಗಳು ಹರಿದಾಡಿದ್ದವು.

* ‘ಸ್ಯಾಮ್‌’ ಜಗತ್ತಿನ ಮೊದಲ ಎಐ ರಾಜಕಾರಣಿ: ನ್ಯೂಜಿಲೆಂಡ್‌ನ ಉದ್ಯಮಿ ನಿಕ್‌ ಗೆರಿಟ್ಸನ್‌ ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆ (ಎಐ) ರಾಜಕಾರಣಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಯಾಮ್‌ ಹೆಸರಿನ ಈ ರಾಜಕಾರಣಿ ಸ್ಥಳೀಯ ವಿಚಾರಗಳು, ವಸತಿ, ಶಿಕ್ಷಣ ಹಾಗೂ ವಲಸೆಗೆ ಸಂಬಂಧಿಸಿದ ನೀತಿಗಳ ಕುರಿತು ಜನರ ಯಾವುದೇ ಪ್ರಶ್ನೆಗೆ ಉತ್ತರ ನೀಡುತ್ತಾನೆ.

* ತೇಜ್ ಪಾವತಿ ಆ್ಯಪ್‌: ಸರಳ ಹಾಗೂ ಸುಲಭವಾಗಿ ಹಣ ಪಾವತಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು, ಸ್ಪೀಕರ್ ಮತ್ತು ಮೈಕ್ ಮೂಲಕ ಶಬ್ದ ರವಾನಿಸಿ ಹಣ ವರ್ಗಾವಣೆ ನಡೆಸುವ ತಂತ್ರಜ್ಞಾನ ಗಮನ ಸೆಳೆಯುತ್ತಿದೆ. ಸಮೀಪದಲ್ಲಿರುವ ಎರಡು ಸ್ಮಾರ್ಟ್ ಫೋನ್‌ಗಳ ನಡುವೆ ಶ್ರವಣಾತೀತ ಶಬ್ದದ ಮೂಲಕ ಸಂಪರ್ಕ ಏರ್ಪಟ್ಟು, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯಂತಹ ಖಾಸಗಿ ವಿವರ ನೀಡದೆಯೇ ಮಾಹಿತಿ ರವಾನಿಸುವುದನ್ನು (ಹಣ ವರ್ಗಾವಣೆ) ಆಡಿಯೊ ಕ್ಯುಆರ್ ಸಾಧ್ಯವಾಗಿಸಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಗೂಗಲ್‌ನ ಪೇಮೆಂಟ್ ಆ್ಯಪ್ ‘ತೇಜ್’ನಲ್ಲಿ ಬಳಕೆಯಾಗಿರುವುದು ಇದೇ ತಂತ್ರಜ್ಞಾನ.

* ‘ಉಮಂಗ್’ ಆ್ಯಪ್‌: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಉಮಂಗ್ (UMANG- Unified Mobi*e App*ication for New-age Governance) ಒಂದೇ ಆ್ಯಪ್‌ನಲ್ಲಿ ಪಡೆಯಬಹುದು.

* ಮೊಬೈಲ್‌ ಇಂಟರ್‌ನೆಟ್‌: ಜಾಗತಿಕ ಇಂಟರ್‌ನೆಟ್‌ ವೇಗ ಪರೀಕ್ಷೆ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸರಾಸರಿ ವೇಗ 8.80 ಎಂಬಿಪಿಎಸ್‌. 122 ರಾಷ್ಟ್ರಗಳ ಪೈಕಿ 109ನೇ ಸ್ಥಾನ. 62.66 ಎಂಬಿಪಿಎಸ್‌ ವೇಗ ಹೊಂದಿರುವ ನಾರ್ವೆ ಮೊದಲ ಸ್ಥಾನದಲ್ಲಿದೆ. 31ನೇ ಸ್ಥಾನದಲ್ಲಿ ಚೀನಾ (31.22 ಎಂಬಿಪಿಎಸ್‌); 89ನೇ ಸ್ಥಾನದಲ್ಲಿ ಪಾಕಿಸ್ತಾನ(13.08 ಎಂಬಿಪಿಎಸ್‌); 99ರಲ್ಲಿ ನೇಪಾಳ (10.97 ಎಂಬಿಪಿಎಸ್‌); ಶ್ರೀಲಂಕಾ(9.32 ಎಂಬಿಪಿಎಸ್‌) 107ನೇ ಸ್ಥಾನ ಹೊಂದಿದೆ.

ಏಕಕಾಲಕ್ಕೆ 104 ಉಪಗ್ರಹ ಉಡಾವಣೆ

ಏಕಕಾಲಕ್ಕೆ ಯಶಸ್ವಿಯಾಗಿ 104 ಉಪಗ್ರಹಗಳನ್ನು ಈ ವರ್ಷ ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಶ್ವ ದಾಖಲೆ ಮಾಡಿತು.

ಇಸ್ರೊದ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ) ಸಿ–37 ಅಮೆರಿಕ, ಜರ್ಮನಿ, ಇಸ್ರೇಲ್‌, ಯುಎಇ, ನೆದರ್ಲೆಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಮಾಡಿತು.

* ಮೂರು ವರ್ಷ ಪೂರೈಸಿದ ‘ಮಾಮ್‌’: ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿರುವ ಇಸ್ರೊ ಬಾಹ್ಯಾಕಾಶ ನೌಕೆ ಮಾಮ್‌ (ಮಾರ್ಸ್ ಆರ್ಬಿಟರ್ ಮಿಷನ್) ಮೂರು ವರ್ಷ ಪೂರೈಸಿತು. 2013ರ ನವೆಂಬರ್‌ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್‌ ಮೂಲಕ ಮಂಗಳಯಾನ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಗಿತ್ತು. ಭೂಕಕ್ಷೆ, ಸೂರ್ಯಕಕ್ಷೆಯಲ್ಲಿ 300ಕ್ಕೂ ಹೆಚ್ಚು ದಿನ ಕ್ರಮಿಸಿ ಮಂಗಳಯಾನ 2014ರ ಸೆಪ್ಟೆಂಬರ್‌ 5ರಂದು ಯಶಸ್ವಿಯಾಗಿ ಮಂಗಳಕಕ್ಷೆ ಪ್ರವೇಶಿಸಿತ್ತು.

₹ 450 ಕೋಟಿ ವೆಚ್ಚದಲ್ಲಿ ಈ ಮಂಗಳಯಾನ ಕೈಗೊಳ್ಳಲಾಗಿದ್ದು, ಅಂತರ್‌ಗ್ರಹೀಯ ಯೋಜನೆಗಳ ಪೈಕಿ ಅತ್ಯಂತ ಅಗ್ಗವಾದುದಾಗಿದೆ.

* ಚಂದ್ರನ ಮೇಲೆ ನೀರಿನ ನಕ್ಷೆ: ಚಂದ್ರನತ್ತ ಭಾರತ ಕಳುಹಿಸಿದ್ದ ಮೊದಲ ಉಪಗ್ರಹ ‘ಚಂದ್ರಯಾನ -1 ಸಹಾಯದಿಂದ ನಾಸಾ ವಿಜ್ಞಾನಿಗಳು ಚಂದ್ರನ ಮೇಲೆ ನೀರಿನ ಅಂಶಗಳಿರುವ ಮೊದಲ ನಕ್ಷೆ ರಚಿಸಿದ್ದಾರೆ. 2008ರಲ್ಲಿ ಇಸ್ರೊ ಉಡಾವಣೆ ಮಾಡಿದ್ದ ಚಂದ್ರಯಾನ-1ರಲ್ಲಿ ಚಂದ್ರನ ಖನಿಜ ಮಾಪಕ (M3) ಅಳವಡಿಸಲಾಗಿತ್ತು. ಕೆಲ ವರ್ಷಗಳಲ್ಲಿ ಇಸ್ರೊದಿಂದ ಚಂದ್ರಯಾನ 1 ಸಂಪರ್ಕ ಕಳೆದುಕೊಂಡಿತ್ತು. ಇದಾಗಿ ಸುಮಾರು ಒಂಬತ್ತು ವರ್ಷಗಳ ಬಳಿಕ ನಾಸಾ ಸಂಪರ್ಕಕ್ಕೆ ಚಂದ್ರಯಾನ ದೊರಕಿತ್ತು. ಸದ್ಯ ಇದರಲ್ಲಿ ದಾಖಲಾದ ಮಾಹಿತಿಗಳ ಆಧಾರದ ಮೇಲೆ ಅಧ್ಯಯನ ನಡೆಯುತ್ತಿವೆ.

* ಇಸ್ರೊ ಜಿಸ್ಟಾಟ್‌–17 ಉಡಾವಣೆ: ಜಿಸ್ಯಾಟ್‌–17 ಉಪಗ್ರಹವನ್ನು ಏರಿಯಾನ್‌–5 ವಿಎ238 ಮೂಲಕ, ಫ್ರೆಂಚ್ ಗಯಾನಾದ ಕೌರೌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಇಸ್ರೊದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸುತ್ತಿದೆ.

* ಸೌರಮಂಡಲ ಕೆಪ್ಲರ್‌–90: ಭೂಮಿಯಿಂದ 2545 ಜ್ಯೋತಿರ್ವರ್ಷ ದೂರದಲ್ಲಿರುವ ಸೂರ್ಯನಂತಹ ನಕ್ಷತ್ರ ಕೆಪ್ಲರ್‌–90 ಸುತ್ತ ಸುತ್ತುತ್ತಿರುವ 8ನೇ ಗ್ರಹವನ್ನು ನಾಸಾ ಸಂಶೋಧಕರು ಡಿಸೆಂಬರ್‌ನಲ್ಲಿ ಪತ್ತೆ ಮಾಡಿದ್ದಾರೆ. ಕೆಪ್ಲರ್‌ ಬಾಹ್ಯಾಕಾಶ ದೂರದರ್ಶಕದ ಮಾಹಿತಿಯನ್ನು ಕೃತಕ ಬುದ್ಧಿಮತ್ತೆ (ಎಐ) ಅಭಿವೃದ್ಧಿಯ ಭಾಗವಾಗಿರುವ ಗೂಗಲ್‌ ಮೆಷಿನ್‌ ಲರ್ನಿಂಗ್‌ ಟೆಕ್ನಾಲಜಿಯೊಂದಿಗೆ ಅನ್ವಯಿಸಿದ್ದಾರೆ. ಸಂಕೀರ್ಣ ಲೆಕ್ಕಾಚಾರವನ್ನು ಸುಲಭದಲ್ಲಿ ಮಾಡಬಲ್ಲ ಈ ತಂತ್ರಜ್ಞಾನದ ಮೂಲಕ ದೂರದ ಹೊಸ ಗ್ರಹವನ್ನು ಕಂಡುಕೊಳ್ಳಲಾಗಿದೆ.

* ಪ್ಯಾರಾಚುಟ್‌ ಪರೀಕ್ಷೆ: 2020ಕ್ಕೆ ಮಂಗಳ ಗ್ರಹಕ್ಕೆ ರೋವರ್‌ ಕಳುಹಿಸುವ ಯೋಜನೆ ರೂಪಿಸಿರುವ ನಾಸಾ, ಮಂಗಳನ ಅಂಗಳದಲ್ಲಿ ಗಗನನೌಕೆಯನ್ನು ಸುರಕ್ಷಿತವಾಗಿ ಇಳಿಸಬಹುದಾದ ಸೂಪರ್‌ಸಾನಿಕ್‌ ಪ್ಯಾರಾಚುಟ್‌ ಪರೀಕ್ಷೆ ನಡೆಸಿದೆ. ಸೆಕೆಂಡ್‌ಗೆ 5.4 ಕಿ.ಮೀ. ವೇಗದಲ್ಲಿ ಮಂಗಳನೌಕೆ ಅಲ್ಲಿನ ವಾತಾವರಣ ಪ್ರವೇಶಿಸುತ್ತದೆ. ಈ ವಿಶೇಷ ಪ್ಯಾರಾಚುಟ್‌ ಮಂಗಳನೌಕೆಯ ವೇಗವನ್ನು ತಗ್ಗಿಸಲಿದೆ.

* ‘ಸುರುಳಿ ನಕ್ಷತ್ರ ಪುಂಜ: A1689B11 ಹೆಸರಿನ ಜಗತ್ತಿನ ಅತಿ ಹಳೆಯ ಸುರುಳಿ ನಕ್ಷತ್ರ ಪುಂಜವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು 1100 ಕೋಟಿ ವರ್ಷಗಳ ಹಿಂದೆ ಜನಿಸಿದ ನಕ್ಷತ್ರ ಪುಂಜವಾಗಿದೆ.

ಹವಾಮಾನ ಮುನ್ಸೂಚನೆಗೆ ಉಪಗ್ರಹ

ಜಾಗತಿಕ ಹವಾಮಾನದ ಮೇಲೆ ನಿಗಾವಹಿಸಲು ಮತ್ತು ಮುನ್ಸೂಚನೆ ಕುರಿತು ನಿಖರ ಮಾಹಿತಿ ಪಡೆಯಲು ನಾಸಾ ಜಾಯಿಂಟ್‌ ಪೋಲಾರ್‌ ಸ್ಯಾಟಲೈಟ್‌ ಸಿಸ್ಟಂ–1 (ಜೆಪಿಎಸ್‌ಎಸ್‌–1) ಅತ್ಯಾಧುನಿಕ ಉಪಗ್ರಹವನ್ನು ಉಡಾವಣೆ ಮಾಡಿದೆ. ಪ್ರತಿ ದಿನ ಎರಡು ಬಾರಿ ವಿಜ್ಞಾನಿಗಳಿಗೆ ಜಾಗತಿಕ ಹವಾಮಾನದ ಸ್ಥಿತಿಗತಿ ಬಗ್ಗೆ ಈ ಮಾಹಿತಿ ನೀಡುವ ಉಪಗ್ರಹವನ್ನು ‘ನಾಸಾ’ ಮತ್ತು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (ಎನ್‌ಒಎಎ) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

* ಚೀನಾ ದಿಕ್ಸೂಚಿ ವ್ಯವಸ್ಥೆಗೆ ಎರಡು ಹೊಸ ಉಪಗ್ರಹ: ಅಮೆರಿಕದ ಜಿಪಿಎಸ್ ವ್ಯವಸ್ಥೆಗೆ ಪರ್ಯಾಯವಾಗಿ ‘ಬಿಗ್ ಡಿಪ್ಪರ್’ ಎಂಬ ತನ್ನದೇ ಉಪಗ್ರಹ ಆಧಾರಿತ ದಿಕ್ಸೂಚಿ (ನ್ಯಾವಿಗೇಶನ್) ವ್ಯವಸ್ಥೆಯನ್ನು ರೂಪಿಸುತ್ತಿರುವ ಚೀನಾ, ‘ಬೆಯಿಡೌ–3’ ಹೆಸರಿನ ಎರಡು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇದು ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆಯ ಮೂರನೇ ಹಂತವಾಗಿದೆ. ಪರ್ಯಾಯ ದಿಕ್ಸೂಚಿ ವ್ಯವಸ್ಥೆ ರೂಪಿಸುವ ಕಾರ್ಯವು 2020ರ ವೇಳೆಗೆ ಪೂರ್ಣಗೊಳ್ಳಲಿದೆ. ಅದಕ್ಕಾಗಿ 30ಕ್ಕೂ ಅಧಿಕ ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯನ್ನು ಚೀನಾ ಹಾಕಿಕೊಂಡಿದೆ.

ಶಸ್ತ್ರಚಿಕಿತ್ಸೆಗೆ ಪುಟಾಣಿ ರೋಬೊ

ಇಂಗ್ಲೆಂಡ್‌ನ ವಿಜ್ಞಾನಿಗಳು ಶಸ್ತ್ರ ಚಿಕಿತ್ಸೆಯಲ್ಲಿ ಬಳಸಬಹುದಾದ ಚಿಕ್ಕ ರೋಬೊ ಅಭಿವೃದ್ಧಿ ಪಡಿಸಿದ್ದಾರೆ. ಮೊಬೈಲ್‌ ಫೋನ್‌ಗಳಲ್ಲಿ ಬಳಕೆಯಾಗಿರುವ ಕಡಿಮೆ ಬೆಲೆಯ ತಂತ್ರಜ್ಞಾನವನ್ನು ವರ್ಸಿಯಸ್‌ ಹೆಸರಿನ ರೋಬೊ ಹೊಂದಿದೆ. ಮನುಷ್ಯರ ಕೈಗಳಂತೆ ವರ್ತಿಸುವ ಈ ರೋಬೊವನ್ನು ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ನಿಯಂತ್ರಿಸುತ್ತಾರೆ.

*‘ಕಲಾಂ ಸ್ಯಾಟ್‌’ ಉಪಗ್ರಹ

ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌ ಹಾಗೂ ಆತನ ತಂಡ ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದ 64 ಗ್ರಾಂ ತೂಕದ ಪುಟ್ಟ ಉಪಗ್ರಹವನ್ನು ನಾಸಾ ತನ್ನ ಇತರೆ ಉಪಗ್ರಹಗಳೊಂದಿಗೆ ಜೂನ್‌ 22ರಂದು ಉಡಾವಣೆ ಮಾಡಿತ್ತು. 3.8 ಸೆಂ.ಮೀ. ಘನಾಕೃತಿಯ ‘ಕಲಾಂಸ್ಯಾಟ್‌’ ಉಡಾವಣೆಗೊಂಡಿರುವ ಜಗತ್ತಿನ ಅತಿ ಹಗುರ ಉಪಗ್ರಹವೆನಿಸಿದೆ.

*

ನೊಕ್ಸೆನೊ ಸಾಧನ

ಮಕ್ಕಳ ಮೂಗಿನಲ್ಲಿ ಸಿಲುಕುವ ವಸ್ತುಗಳನ್ನು ಸುಲಭದಲ್ಲಿ ಹೊರ ತೆಗೆಯಲು ನೊಕ್ಸೆನೊ ಸಾಧನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಮರು ಬಳಕೆ ಹಾಗೂ ಕಡಿಮೆ ವೆಚ್ಚದ ಈ ಸಾಧನವನ್ನು ಬೆಂಗಳೂರಿನ ಸ್ಟಾರ್ಟ್‌ಅಪ್‌ ಸಂಸ್ಥೆ ಇನ್‌ಆಸೆಲ್‌ ಟೆಕ್ನಾಲಜಿ ಪ್ರೈ.ಲಿ., ರೂಪಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮೂಹ ಆರೋಗ್ಯ ಕೇಂದ್ರ ಹಾಗೂ ಎಲ್ಲ ಆಸ್ಪತ್ರೆಗಳಲ್ಲಿ 2020ರ ವೇಳೆಗೆ ಈ ಸಾಧನ ಲಭ್ಯವಿರಲಿದೆ. 2–10 ವರ್ಷದ ಮಕ್ಕಳು ಮೂಗಿನ ಕೊಳವೆಯಲ್ಲಿ ಹಾಕಿಕೊಳ್ಳುವ ಸಣ್ಣ ಸಣ್ಣ ವಸ್ತುಗಳನ್ನು ಅಪಾಯವಿಲ್ಲದೆ ತೆಗೆಯಲು ಇದು ಸಹಕಾರಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry