7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಶಾಲೆಗಳಿಗೆ ಭೇಟಿ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಲು ಸಲಹೆ

Published:
Updated:

ಶ್ರವಣಬೆಳಗೊಳ: ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪರಿಸರದ ಪ್ರಜ್ಞೆ ಮೂಡಿಸಬೇಕು ಎಂದು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಬೆಳಗೊಳದ ಸುತ್ತಮುತ್ತಲ ಗ್ರಾಮಗಳ ಶಾಲೆಗಳು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ, ಸ್ವಚ್ಛತೆ ಹಾಗೂ ಪರಿಸರ ಉಳಿಸುವ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಇಂದು ಕಾಲ ಬದಲಾಗಿದ್ದು, ಪ್ರಗತಿ ಸಾಧಿಸಿದಂತೆ ಅಂತರ್ಜಲ ಬತ್ತುತ್ತಿದೆ. ಒಂದು ಸಾವಿರ ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಇದು ಎಲ್ಲ ದೇಶಗಳ ಸಮಸ್ಯೆಯಾಗುತ್ತಿದೆ. ಕೆರೆಯ ಸ್ವರೂಪ ಬದಲಾಗಬಾರದು. ಒಂದು ಕೆರೆ ತುಂಬಿ ಬೇರೆ ಕೆರೆಗೆ ನೀರು ಹರಿಯಬೇಕು. ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಸಭೆ, ಸಮಾರಂಭಗಳಲ್ಲಿ ನೀಡುವ ಬಾಟಲಿ ನೀರನ್ನು ಪೂರ್ತಿಯಾಗಿ ಕುಡಿಯುವುದಿಲ್ಲ. ನೀರು ಪೋಲು ಮಾಡಬಾರದು. ಮಹಾಮಜ್ಜನ ಅಂದರೆ ಗ್ರಾಮ್ಯ ಭಾಷೆಯಲ್ಲಿ ಮಂಡೆ ಪೂಜೆಗೆ ಎಲ್ಲರೂ ಬನ್ನಿ, ಎಲ್ಲರ ಮಸ್ತಕ ಮನಸ್ಸಿನಲ್ಲಿರುವ ಕಲ್ಮಶಗಳು ದೂರವಾಗಲಿ ಎಂದರು.

ಜುಟ್ಟನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೆ ದೇವಸ್ಥಾನ ಇರುವ ಗ್ರಾಮ ಚೆನ್ನಾಗಿದೆ ಎಂಬ ಭಾವನೆ ಇತ್ತು. ಇಂದು ಯಾವ ಊರಿನಲ್ಲಿ ಶಾಲೆ ಚೆನ್ನಾಗಿರುತ್ತದೆಯೋ ಆ ಗ್ರಾಮದಲ್ಲಿ ಉತ್ತಮ ವಾತಾವರಣವಿರುತ್ತದೆ ಎಂದರು.

ಕುಡಿಯವ ನೀರಿನ ಸಮಸ್ಯೆ ಬಗ್ಗೆ ಮೂರು ಗ್ರಾಮಗಳ ಗ್ರಾಮಸ್ಥರು ಶ್ರೀಗಳ ಗಮನಕ್ಕೆ ತಂದರು. ಹೊಸಹಳ್ಳಿಯಲ್ಲಿ ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಶ್ರೀಗಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಸುಂಡಹಳ್ಳಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಹೊಸ ಕಟ್ಟಡದ ನೆರವಿಗೆ ಹಣ ಒದಗಿಸುವ ಹಾಗೂ ಜುಟ್ಟನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ವಿಶ್ವ ಭೂಪಟಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪುಷ್ಪಲತಾ, ಹೊಸಹಳ್ಳಿ ಗ್ರಾಮದ ಗುತ್ತಿಗೆದಾರ ರಾಮಣ್ಣ, ಗ್ರಾಮಸ್ಥರು ಇದ್ದರು. ಜುಟ್ಟನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಾಜಶೇಖರ್, ಸದಸ್ಯ ದೀಪು, ಕೇಶವ್, ಮುಖ್ಯ ಶಿಕ್ಷಕ ಸೋಮನಾಥ್ ಹಾಜರಿದ್ದರು.

ಬಿಆರ್ ಸಿ ನಾಗರಾಜ್ ಸ್ವಾಗತಿಸಿ, ನಿರೂಪಿಸಿದರು.

ಭೋಜನಾಲಯ ಕಾಮಗಾರಿ ಚುರುಕು

ಶ್ರವಣಬೆಳಗೊಳ : ಬಾಹುಬಲಿ ಮಹಾ ಮಸ್ತಕಾಭಿಷೇಕದ ನಿಮಿತ್ತ ಭೋಜನಾಲಯಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಭೋಜನಾಲಯಗಳು ಎಪಿಎಂಸಿ ಮಾರ್ಕೆಟ್‌ ಯಾರ್ಡ್‌ ಪಕ್ಕದ ಕೆ.ಬೊಮ್ಮೇನಹಳ್ಳಿ ಮಾರ್ಗದ ರಸ್ತೆ ಬದಿಯಲ್ಲಿ ನಿರ್ಮಾಣವಾಗುತ್ತಿದೆ. ವಿದ್ಯುತ್‌ ಕಂಬ ಮತ್ತು ನೀರು ಸರಬರಾಜು ಪೈಪುಗಳ ಅಳವಡಿಕೆ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ನಿಗಮದ ಶಾಖಾಧಿಕಾರಿ ಶ್ರೀಧರ್‌ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಚ್‌.ಎಂ.ಜಗದೀಶ್‌ ಹೇಳಿದರು.

ಕರ್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣದ ವಿಸ್ತರಣಾ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ₹ 2.71 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಗೋಡೆ ನಿರ್ಮಾಣ ಮುಗಿದಿದೆ. ಈಗ ಚಾವಣಿ ಕೆಲಸ ಭರದಿಂದ ಸಾಗಿದೆ. ನಿಲ್ದಾಣದ ಸುತ್ತಮುತ್ತ ಕಾಂಕ್ರೀಟ್‌ ಕೆಲಸ ಅಂತಿಮ ಹಂತಕ್ಕೆ ಬಂದಿದೆ ಎಂದು ಗುತ್ತಿಗೆದಾರ ಲೋಕೇಶ್‌ ಹೇಳಿದರು.

ಧನ್ವಂತರಿ ಯಾಗ

ಶ್ರವಣಬೆಳಗೊಳ: ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್, ಗುರುಹಿರಿಯರ ಧನ್ವಂತರಿ ವನ ಮತ್ತು ಆಯುರ್ ಹೋಮ್ ಆಶ್ರಯದಲ್ಲಿ ಬೆಕ್ಕದಲ್ಲಿ ವೇದಮಾತೆ ಗಾಯತ್ರಿ, ರುದ್ರಮಹಾಕಾಳಿ, ಮಹಾವಿಷ್ಣು ಧನ್ವಂತರಿ ಮಹಾಯಾಗ ನಡೆಯಿತು.

ನಂತರ ಧನ್ವಂತರಿ ವನದಲ್ಲಿ ಎಲ್ಲರೂ ವನಸ್ಪತಿ ಗಿಡ ನೆಟ್ಟರು. ರಾಮಕೃಷ್ಣ ಐಯ್ಯರ್ ಆರ್ಶೀವಚನ ಮತ್ತು ಯಾಗದ ವಿವರಣೆ ನೀಡಿದರು. ನಂದಿನಿ ಪ್ರಸಾದ್ ಅವರು ಧ್ಯಾನ, ಯೋಗ, ಮುದ್ರಾ ವಿಜ್ಞಾನ ಬಗ್ಗೆ ನಾಟಿ ವೈದ್ಯರಿಗೆ ತರಬೇತಿ ನೀಡಿದರು. ಮಹಾಮಸ್ತಕಾಭಿಷೇಕ ವಿಶೇಷಾಧಿಕಾರಿ ಬಿ.ಎಸ್.ವರಪ್ರಸಾದ್ ರೆಡ್ಡಿ ಮಾತನಾಡಿದರು. ಗಾಯಕ ಪರ್ವತೇಶ್ ಸಂಗೀತ ಕಛೇರಿ ನಡೆಸಿಕೊಟ್ಟರು. ಮಕ್ಕಳು ಯೋಗಾಸನ ಪ್ರದರ್ಶಿಸಿದರು. ನಂತರ ನಾಟಿ ವೈದ್ಯರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಲಾಯಿತು. ಹಾಸನ ಪರಂಪರಾ ವೈದ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ, ಅಧ್ಯಕ್ಷ ವಿಶ್ವನಾಥ್, ವೈದ್ಯ ಯೋಗೇಶ್, ಪ್ರತಾಪ್, ಯೋಗ ಶಿಕ್ಷಕ ಶೇಖರ್, ಪ್ರತೀಕ್, ವಕೀಲ ಶಶಿಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry