7

‘ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸಿ’

Published:
Updated:
‘ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸಿ’

ಬಸವನಬಾಗೇವಾಡಿ: ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿದ ಕಾರ್ಯಕರ್ತರು ತಹಶೀಲ್ದಾರ್ ಎಂ.ಎನ್‌.ಚೋರಗಸ್ತಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ಪ್ರಸಕ್ತ ವರ್ಷ ರೈತರು ಹೆಚ್ಚಿನ ಪ್ರಮಾಣದ ತೊಗರಿ ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದಾಗಿ ಶೇ 75 ರಷ್ಟು ತೊಗರಿ ಬೆಳೆ ನಂಜಾಣು ರೋಗದಿಂದ ಹಾನಿಯಾಗಿದೆ. ಅಲ್ಪಸ್ವಲ್ಪ ಉಳಿದ ತೊಗರಿಯನ್ನು ರಾಶಿ ಮಾಡುತ್ತಿದ್ದಾರೆ. ರೈತರು ಪಟ್ಟ ಶ್ರಮಕ್ಕೆ ತಕ್ಕ ವೈಜ್ಞಾನಿಕ ಬೆಲೆ ಮಾರುಕಟ್ಟೆಯಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ವರ್ಷ ಸರ್ಕಾರ ತೊಗರಿಗೆ ₹ 5,500 ಬೆಂಬಲ ಬೆಲೆ ನಿಗದಿ ಪಡಿಸಿತ್ತು. ಈ ಸಲ ರೈತರು ಹೆಚ್ಚಿನ ಹಾನಿಗೆ ಒಳಗಾಗಿದ್ದರಿಂದ ಪ್ರತಿ ಕ್ವಿಂಟಲ್‌ ತೊಗರಿಗೆ ₹ 8 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಜಿಪಿಎಸ್‌ ಮಾಡಿಸಿದೆ. ಹಾಳಾದ ತೊಗರಿಯ ನಿಜ ಸ್ಥಿತಿಯನ್ನು ಸರ್ಕಾರ ಗಮನಿಸಿ ಸೂಕ್ತ ಪರಿಹಾರ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದು ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ರೈತನಿಂದ ₹ 20 ಕ್ವಿಂಟಲ್‌ ತೊಗರಿ ಖರೀದಿಗೆ ನಿಗದಿಪಡಿಸಿದ ನಿರ್ಬಂಧವನ್ನು ಕೈಬಿಟ್ಟು ರೈತರು ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು’ ಎಂದು ಒತ್ತಾಯಿಸಿದರು.

ಬಸವನಬಾಗೇವಾಡಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಹಲವು ಸಲ ಪ್ರತಿಭಟನೆ ನಡೆಸಲಾಗಿದೆ. ರೈತ ಸಂಘದ ಮನವಿಗೆ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ರಾಠೋಡ, ಡಾ.ಎಂ.ರಾಮಚಂದ್ರ ಬಮ್ಮನಜೋಗಿ, ದೊಂಡಿಬಾ ಪವಾರ, ಭೀಮಶಿ ಚಲವಾದಿ, ಸಿದ್ರಾಮ ಅಂಗಡಗೇರಿ, ಪರಮಾನಂದ ಮಾಳೂರ, ಪರಮಣ್ಣ ಚೌಧರಿ, ಶೋಭಾ ನಾಡಗೌಡ, ಗುರುಬಾಯಿ ಮಠಪತಿ, ಗುರುಬಾಯಿ ಹಾದಿಮನಿ, ಶಾರದಾ ರಾಠೋಡ, ಕಮಲವ್ವ ಹಳ್ಳದಕೇರಿ, ನಿಂಬೆವ್ವ ತೋಟದ, ರೇಣುಕಾ ತಳವಾರ, ಸಿದ್ರಾಮ ವಜ್ಜಲ ಇತರರು ಇದ್ದರು.

* * 

ರೈತರ ಜಮೀನುಗಳಿಗೆ ತೆರಳಲು ದಾರಿ ಮಾಡಿ ಕೊಡುವ ಅಧಿಕಾರವನ್ನು ಮೊದಲಿನಂತೆ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ನೀಡಬೇಕು

ಅರವಿಂದ ಕುಲಕರ್ಣಿ

ಪ್ರಧಾನ ಕಾರ್ಯದರ್ಶಿ

ರೈತ ಸಂಘದ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry