7

ಕೆಜಿಎಫ್‌ ತಾಲ್ಲೂಕು ಕಚೇರಿಗೆ ಬಿಇಒ ಕಚೇರಿ ಆಯ್ಕೆ

Published:
Updated:

ಕೃಷ್ಣಮೂರ್ತಿ

ಕೆಜಿಎಫ್‌: ಹೊಸದಾಗಿ ರಚನೆಯಾಗುತ್ತಿರುವ ಕೆಜಿಎಫ್‌ ತಾಲ್ಲೂಕು ಕಚೇರಿಯನ್ನಾಗಿ ರಾಬರ್ಟಸನ್‌ ಪೇಟೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯ್ಕೆ ಮಾಡಲಾಗಿದೆ. ಕೇವಲ ಹದಿನೈದು ದಿನಗಳ ಹಿಂದೆ ಹೊಸದಾಗಿ ₹ 50 ಲಕ್ಷ ವೆಚ್ಚದಲ್ಲಿ ಶಿಕ್ಷಣ ಇಲಾಖೆ ನಿರ್ಮಿಸಿದ್ದ ಕಚೇರಿ ಕಟ್ಟಡಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗಿತ್ತು. ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ತಾಲ್ಲೂಕು ಕಚೇರಿಗೆ ಬಿಟ್ಟುಕೊಡಲು ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚಿಸಿದರು ಎನ್ನಲಾಗಿದೆ.

ಕಚೇರಿ ಕಟ್ಟಡವನ್ನು ಶಿಕ್ಷಣ ಇಲಾಖೆಯ ಅನುದಾನದಿಂದ ನಿರ್ಮಿಸಲಾಗಿದೆ. ಈ ಹಿಂದೆ ಶಾಲೆಯ ಕಟ್ಟಡವನ್ನೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ಅಲ್ಲಿ ಮೂಲ ಸೌಕರ್ಯಗಳು ಇಲ್ಲ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಿಟ್ಟು ಬೇರೆ ಸ್ಥಳ ನೋಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಿದ ಮನವಿಗೆ ಜಿಲ್ಲಾಧಿಕಾರಿಗಳು ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ.

ಹೊಸ ಕಟ್ಟಡದಲ್ಲಿ ಇದ್ದ ನ್ಯೂನತೆಗಳನ್ನು ಸರಿಪಡಿಸಲು ಕಚೇರಿಯ ಸಿಬ್ಬಂದಿ ತಲಾ ₹ 5 ಸಾವಿರ ಹಾಕಿ ಹಲವಾರು ಮಾರ್ಪಾಟು ಮಾಡಿದ್ದರು. ಈಗ ಏಕಾಏಕಿ ಬಿಡುವುದಕ್ಕೆ ಸೂಚನೆ ನೀಡಿರುವುದು ಅಧಿಕಾರಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಹೊಸ ತಾಲ್ಲೂಕು ರಚನೆ ಸಂಬಂಧವಾಗಿ ಡಿ.27 ರಂದು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಸಂಬಂಧವಾಗಿ ತಕರಾರು ಇದ್ದಲ್ಲಿ ಒಂದು ತಿಂಗಳ ಒಳಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.

ರಾಜ್ಯ ಪತ್ರದ ಪ್ರಕಾರ ಬಂಗಾರಪೇಟೆ ತಾಲ್ಲೂಕಿಗೆ ಬಂಗಾರಪೇಟೆ ಪಟ್ಟಣ ಸೇರಿ 218 ಗ್ರಾಮಗಳು ಬರಲಿದ್ದು, ಕೆಜಿಎಫ್‌ ತಾಲ್ಲೂಕಿಗೆ ರಾಬರ್ಟಸನ್‌ಪೇಟೆಯ ನಗರಸಭೆಯ 35 ವಾರ್ಡ್‌ ಸೇರಿ 182 ಗ್ರಾಮಗಳು ಬರಲಿದೆ.

ತಕರಾರು ಇದ್ದ ರಾಬರ್ಟಸನ್‌ಪೇಟೆ ಹೋಬಳಿಯನ್ನು ವಿಭಜಿಸಲಾಗಿದೆ. ರಾಬರ್ಟಸನ್‌ಪೇಟೆಯ ಘಟ್ಟಕಾಮಧೇನಹಳ್ಳಿ ಕಂದಾಯ ವೃತ್ತದ ಘಟ್ಟಕಾಮಧೇನಹಳ್ಳಿ, ಕೃಷ್ಣಾಪುರ, ಪೆದ್ದಪಲ್ಲಿ, ಘಟ್ಟರಾಗಡಹಳ್ಳಿ, ರಾಮಾಪುರ, ಯರ್ರನಾಗನಹಳ್ಳಿ, ಚೆನ್ನಪಲ್ಲಿ, ಗುಲವಹಳ್ಳಿ, ಮಲ್ಲಂಪಲ್ಲಿ, ಸ್ವರ್ಣಕುಪ್ಪಂ, ಮಸ್ಕಂ ಮತ್ತು ಊರಿಗಾಂ ಹೊಸ ಕೆಜಿಎಫ್ ತಾಲ್ಲೂಕಿಗೆ ಸೇರಲಿದೆ.

ಮಾರಿಕುಪ್ಪಂ ಕಂದಾಯ ವೃತ್ತದ ಮಾರಿಕುಪ್ಪಂ, ನಕ್ಕನಹಳ್ಳಿ, ಕೆಂಪತಿಮ್ಮನಹಳ್ಳಿ, ತೊಂಗಲ್‌, ಕಲ್ಲಿಕುಪ್ಪ, ಎಂ.ಕೊತ್ತೂರು, ಸೂರಪಲ್ಲಿ, ತೂಮಲಹಳ್ಳಿ, ಬಲಿಗಾನಹಳ್ಳಿ, ಗಿಡ್ಡೇಗೌಡನಹಳ್ಳಿ, ಗಂಗದೊಡ್ಡಿ, ಗೋಣಮಾಕನಹಳ್ಳಿ ಮತ್ತು ದೊಡ್ಡಕಂಬಳಿ ಕಂದಾಯ ವೃತ್ತದ ದೊಡ್ಡಕಂಬಳಿ, ಚಿನ್ನಾಗನಹಳ್ಳಿ, ಬೈನೇಪಲ್ಲಿ, ಕೀಲುಗಂಬಳಿ, ಲಕ್ಷ್ಮೀಸಾಗರ ಮತ್ತು ಘಟ್ಟಮಾದಮಂಗಲ ಗ್ರಾಮಗಳನ್ನು ಕೆಜಿಎಫ್ ತಾಲ್ಲೂಕಿಗೆ ಸೇರಿಸಲಾಗಿದೆ.

ಕೆಜಿಎಫ್ ತಾಲ್ಲೂಕಿಗೆ ಪೂರ್ವದಲ್ಲಿ ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕು, ಪಶ್ಚಿಮದಲ್ಲಿ ಬಂಗಾರಪೇಟೆ ತಾಲ್ಲೂಕು, ಉತ್ತರದಲ್ಲಿ ಮುಳಬಾಗಿಲು ಮತ್ತು ಕೋಲಾರ ತಾಲ್ಲೂಕು ಮತ್ತು ದಕ್ಷಿಣದಲ್ಲಿ ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕು ಗಡಿ ಎಂದು ಗುರುತಿಸಲಾಗಿದೆ.

ರಾಬರ್ಟಸನ್‌ಪೇಟೆ ಹೋಬಳಿಯ ಮಾವಳ್ಳಿ ಕಂದಾಯ ವೃತ್ತದ ವಾವಳ್ಳಿ, ವಾದನಹಳ್ಳಿ, ಕಾಮಾಂಡಹಳ್ಳಿ, ಚಲಗಾನಹಳ್ಳಿ, ಆಲಗಾನಹಳ್ಳಿ, ಮಂಚಹಳ್ಳಿ, ಕುರುಬರಹಳ್ಳಿ, ಹುನ್ಕುಂದ ಕಂದಾಯ ವೃತ್ತದ ಹುನ್ಕುಂದ, ಮಿಟ್ಟಮಾಲಹಳ್ಳಿ, ಮಾದಮುತ್ತನಹಳ್ಳಿ, ದೊಡ್ರಳ್ಳಿ, ಗಾನಚಾರಪುರ,ಪಿಚ್ಚಗುಂಟ್ಲಹಳ್ಳಿ, ಡಿ.ಕೆ.ಹಳ್ಳಿ ಕಂದಾಯ ವೃತ್ತದ ಡಿಕೆಹಳ್ಳಿ, ದಾಸರಹೊಸಹಳ್ಳಿ, ಡಿ.ಕೆ.ಹಳ್ಳಿ ಪ್ಲಾಂಟೇಶನ್‌, ತಮ್ಮೇನಹಳ್ಳಿ, ಕಾವರನಹಳ್ಳಿ, ದೊಡ್ಡವಲಗಮಾದಿ ಕಂದಾಯ ವೃತ್ತದ ದೊಡ್ಡವಲಗಮಾದಿ, ಬೂರಗಮಾಕನಹಳ್ಳಿ, ಬೈರಗಾನಹಳ್ಳಿ, ಐಮಸಪುರ, ದೊಡ್ಡಚಿನ್ನಹಳ್ಳಿ, ಚಿಕ್ಕಕರಿಮಾನಹಳ್ಳಿ, ಅಜ್ಜಪಲ್ಲಿ, ಮಲ್ಲಂಗುರ್ಕಿ, ಚಿನ್ನಕೋಟೆ ಮತ್ತು ಕೆಸರನಹಳ್ಳಿ ಗ್ರಾಮಗಳನ್ನು ರಾಬರ್ಟಸನ್‌ಪೇಟೆ ಹೋಬಳಿಯಿಂದ ತೆಗೆದು ಬಂಗಾರಪೇಟೆ ಕಸಬಾ ಹೋಬಳಿಗೆ ಸೇರಿಸಲಾಗಿದೆ.

ರಾಬರ್ಟಸನ್‌ಪೇಟೆ ನಗರಸಭೆಯ ಅಂಚಿನಲ್ಲಿರುವ ಬೆಮಲ್‌ನಗರದ ಹೊಸ ಬಡಾವಣೆಗಳನ್ನು ಕೆಜಿಎಫ್ ತಾಲ್ಲೂಕಿಗೆ ಸೇರಿಸಲಾಗಬೇಕು ಎಂಬ ಒತ್ತಡ ಇತ್ತು. ಎಂ.ವಿ.ನಗರ, ಭಾರತ್‌ ನಗರ, ವಿಜಯನಗರ, ಪಾಲಾರ್ ನಗರ, ಕತ್ತಿಹಳ್ಳಿ ಬಡಾವಣೆಗಳು ಕೆಜಿಎಫ್ ನಗರಕ್ಕೆ ಅತಿ ನಿಕಟವಾಗಿದ್ದವು. ಆದರೆ ಅವುಗಳನ್ನು ಬಂಗಾರಪೇಟೆ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ.

450ಕ್ಕೂ ಹೆಚ್ಚು ಶಿಕ್ಷಕರು ಸೇರ್ಪಡೆ

ಹೊಸ ತಾಲ್ಲೂಕು ರಚನೆ ಜನವರಿ 1ರಿಂದ ಪ್ರಾರಂಭವಾಗಲಿದ್ದರೂ, ಶೈಕ್ಷಣಿಕ ವಲಯದಲ್ಲಿ ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಕೆಜಿಎಫ್ ಶೈಕ್ಷಣಿಕ ವಲಯಕ್ಕೆ ಹೆಚ್ಚುವರಿಯಾಗಿ 450ಕ್ಕೂ ಹೆಚ್ಚು ಸರ್ಕಾರಿ ಶಿಕ್ಷಕರು ಸೇರ್ಪಡೆಯಾಗಲಿದ್ದಾರೆ. ಹಲವಾರು ದೊಡ್ಡ ಖಾಸಗಿ ಶಾಲೆಗಳು ಸಹ ಕೆಜಿಎಫ್ ತಾಲ್ಲೂಕಿಗೆ ಸೇರ್ಪಡೆಯಾಗಲಿದ್ದು, ಕಾಮಸಮುದ್ರ ಹೋಬಳಿಯ ಕೆಲ ಖಾಸಗಿ ಶಾಲೆಗಳು ಮಾತ್ರ ಬಂಗಾರಪೇಟೆ ತಾಲ್ಲೂಕಿಗೆ ಸೇರ್ಪಡೆಯಾಗಲಿದೆ.

ಅಂಕಿ ಅಂಶಗಳು

‌218 ಬಂಗಾರಪೇಟೆಗೆ ಸೇರ್ಪಡೆಯಾದ ಗ್ರಾಮ

182 ಕೆಜಿಎಫ್‌ಗೆ ಸೇರ್ಪಡೆಯಾದ ಗ್ರಾಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry