3

ಈ ಬಾರಿ ನನಗೇ ಟಿಕೆಟ್‌: ಜಯಣ್ಣ

Published:
Updated:
ಈ ಬಾರಿ ನನಗೇ ಟಿಕೆಟ್‌: ಜಯಣ್ಣ

ಚಾಮರಾಜನಗರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ನನಗೇ ಟಿಕೆಟ್‌ ನೀಡಲಿದೆ’ ಎಂದು ಕೊಳ್ಳೇಗಾಲ ಶಾಸಕ ಎಸ್. ಜಯಣ್ಣ ಭರವಸೆ ವ್ಯಕ್ತಪಡಿಸಿದರು. ‘ಕಳೆದ ಚುನಾವಣೆ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದೆ. ಈಗ ಆರೋಗ್ಯವಾಗಿದ್ದು, ಚುನಾವಣೆ ಎದುರಿಸಲು ಸಮರ್ಥನಿದ್ದೇನೆ. ಜನಸೇವೆ ಮಾಡುವುದನ್ನು ಮುಂದುವರಿಸುವ ಆಸೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬೆನ್ನಿಗಿದ್ದಾರೆ’ ಎಂದು ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೊಳ್ಳೇಗಾಲ ಕ್ಷೇತ್ರದಲ್ಲಿ ಐವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿದ್ದೇವೆ. ಐವರೂ ಒಗ್ಗಟ್ಟಾಗಿದ್ದು, ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಪರಸ್ಪರ ಬೆಂಬಲಿಸುತ್ತೇವೆ’ ಎಂದು ಹೇಳಿದರು. ಬಿಜೆಪಿ ಮುಖಂಡ ಎ.ಆರ್. ಕೃಷ್ಣಮೂರ್ತಿ ಕಾಂಗ್ರೆಸ್‌ ಸೇರ್ಪಡೆ ವದಂತಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎ.ಆರ್‌.ಕೆ. ಬಿಜೆಪಿ ತ್ಯಜಿಸುವ ಮತ್ತು ಕಾಂಗ್ರೆಸ್‌ ಸೇರುವ ಬಗ್ಗೆ ಎಲ್ಲಿಯೂ ಸ್ಪಷ್ಟ ಹೇಳಿಕೆ ನೀಡಿಲ್ಲ. ಅಧಿಕೃತ ಮಾಹಿತಿ ಇಲ್ಲದೆ ಈ ಕುರಿತು ಮಾತನಾಡುವುದಿಲ್ಲ’ ಎಂದು ಹೇಳಿದರು.

‘ಎ.ಆರ್‌.ಕೆ. ಈ ಹಿಂದೆ ಶಾಸಕರಾಗಿದ್ದವರು. 6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ಒಡೆದಾಗ ಮತ್ತು ಮಹದೇವಪ್ರಸಾದ್‌, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸೇರ್ಪಡೆಯಾದಾಗ ಸಿದ್ದರಾಮಯ್ಯ ಅವರೊಂದಿಗೆ ಹೋಗಲು ಅವರಿಗೆ ಅವಕಾಶವಿತ್ತು. ಕೊಳ್ಳೇಗಾಲ ಉಪಚುನಾವಣೆ ಸಂದರ್ಭದಲ್ಲಿಯೂ ಪಕ್ಷದಿಂದ ಆಹ್ವಾನ ನೀಡಲಾಗಿತ್ತು. ಈಗಲೂ ಸಿದ್ದರಾಮಯ್ಯ ಅವರನ್ನು ನಂಬಿ ಪಕ್ಷಕ್ಕೆ ಬರುತ್ತಾರೆ ಎಂಬ ನಂಬಿಕೆ ನನಗಿಲ್ಲ’ ಎಂದು ಹೇಳಿದರು.

‘ಎ.ಆರ್‌.ಕೆ. ಅವರ ತಂದೆ ದಿ. ಬಿ. ರಾಚಯ್ಯ ಅವರ ಬಗ್ಗೆ ಅಪಾರ ಗೌರವವಿದೆ. ರಾಜಕಾರಣದಲ್ಲಿ ನನಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಜತೆಗೆ ಹೋಗುವಂತೆ ಮಗನಿಗೂ ಅವರು ಸೂಚಿಸಿದ್ದರು. ಆದರೆ, ಅವರು ವಿರುದ್ಧ ದಿಕ್ಕಿನಲ್ಲಿ ಸಾಗಿದರು’ ಎಂದು ವಿಶ್ಲೇಷಿಸಿದರು.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ. ಸರ್ಕಾರದ ಆಡಳಿತವನ್ನು ಜನರು ಮೆಚ್ಚಿಕೊಂಡಿರು ವುದರಿಂದ ಮತಬ್ಯಾಂಕ್‌ ಇನ್ನಷ್ಟು ಗಟ್ಟಿಯಾಗಿದೆ. ಯಾರ ಸೇರ್ಪಡೆ ಯಿಂದಲೂ ಪಕ್ಷದ ಬಲ ಹೆಚ್ಚುತ್ತದೆ ಎಂಬ ನಿರೀಕ್ಷಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬಾಲರಾಜ್‌ ಮಾತನಾಡಿ, ಎ.ಆರ್‌. ಕೃಷ್ಣಮೂರ್ತಿ ಪಕ್ಷ ಸೇರ್ಪಡೆ ಬಗ್ಗೆ ಪತ್ರಿಕೆಗಳ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಊಹಾಪೋಹ ಹರಡುತ್ತಿದೆ. ಬುಧವಾರ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು. ತಾಲ್ಲೂಕು ಮಟ್ಟದಲ್ಲಾಗಲೀ, ಮೇಲ್ಮಟ್ಟದ್ದಲ್ಲಾಗಲೀ ಅಂತಹ ಪ್ರಕ್ರಿಯೆ ನಡೆದಿಲ್ಲ. ಒಂದು ವೇಳೆ ಅವರು ಪಕ್ಷ ಸೇರುವುದು ನಿಜವಾದರೆ ಚರ್ಚೆ ನಡೆಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪುಟ್ಟಬುದ್ದಿ, ಮೈಸೂರು ವಿಶ್ವವಿದ್ಯಾಲಯ ಸೆನೆಟ್‌ ಸದಸ್ಯ ರಾಚಯ್ಯ, ರಾಜ್ಯ ಪರಿಶಿಷ್ಟ ಜಾತಿ ಘಟಕದ ಸಂಚಾಲಕ ನಟರಾಜ್‌ ಇದ್ದರು.

10ರಂದು ಮುಖ್ಯಮಂತ್ರಿ ಭೇಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 10ರಂದು ಕೊಳ್ಳೇಗಾಲಕ್ಕೆ ಬರಲಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು. ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ₹17 ಕೋಟಿ ವೆಚ್ಚದ ಬಸ್‌ ನಿಲ್ದಾಣ, ₹2 ಕೋಟಿ ವೆಚ್ಚದ ಹೊರಾಂಗಣ ಕ್ರೀಡಾಂಗಣ, ₹3.60 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ, ₹1.50 ಕೋಟಿ ವೆಚ್ಚದ ನಗರಸಭೆ ಕಚೇರಿ, ₹5 ಕೋಟಿ ವೆಚ್ಚದ ಅಗ್ನಶಾಮಕದಳ ಕಚೇರಿ, ಮಿನಿ ವಿಧಾನಸೌಧ ವಿಸ್ತರಣೆ ಮುಂತಾದ ಕಾಮಗಾರಿಗಳ ಉದ್ಘಾಟನೆ ಹಾಗೂ ಚಾಲನೆ ಕಾರ್ಯಕ್ರಮ ಅಂದು ನಡೆಯಲಿದೆ ಎಂದು ವಿವರಿಸಿದರು.

ದಾಸನಪುರ, ನರಸಾಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ. ಸೇತುವೆ ನಿರ್ಮಾಣದಿಂದ ಕೊಳ್ಳೇಗಾಲ–ಬೆಂಗಳೂರು ನಡುವಣ ಅಂತರ 20 ಕಿ.ಮೀ.ಯಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry