7

‘ಮುಂದಾಲೋಚನೆಯೇ ತಪ್ಪು ಎನ್ನಿಸುತ್ತಿದೆ!’

Published:
Updated:
‘ಮುಂದಾಲೋಚನೆಯೇ ತಪ್ಪು ಎನ್ನಿಸುತ್ತಿದೆ!’

1. ನಾನು ಡಿಪ್ಲೊಮ ಆದಮೇಲೆ ಬಿ.ಇ. ಮಾಡುತಿದ್ದೇನೆ. ನನಗೆ ಮೊದಲಿನಂತೆ ಓದಲು ಆಗುತ್ತಿಲ್ಲ. ಮಂಕು ಮಂಕಾಗಿ ಇರುತ್ತೇನೆ. ಗಣಿತ ತುಂಬಾ ಕಷ್ಟವಾಗುತ್ತಿದೆ. ಬಿ.ಇ. ಸೇರಲೆಂದೇ ಡಿಪ್ಲೊಮ ತೆಗೆದುಕೊಂಡಿದ್ದೆ. ತುಂಬಾ ಮುಂದಾಲೋಚನೆ ಕೂಡ ತಪ್ಪಾಗುತ್ತದೆ ಎಂದು ಈಗ ಅನ್ನಿಸುತ್ತಿದೆ.

–ಮಧು, ಊರು ಬೇಡ.

ಮೊದಲಿಗೆ, ಹೌದು, ಎಂಜಿನಿಯರಿಂಗ್‌ನ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಪ್ರಾಧ್ಯಾಪಕರೊಂದಿಗೆ ನಿರಂತರ ಸಂವಹನದಿಂದ ನೀವು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬಹುದು. ಜೊತೆಗೆ ಪ್ರತಿದಿನ ಅಭ್ಯಾಸ ಮಾಡುವುದರಿಂದ  ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೇ, ಇದು ಉತ್ತಮ ಅಂಕಗಳನ್ನು ಗಳಿಸಲು ಕೂಡ ಸಹಾಯ ಮಾಡುತ್ತದೆ. ನೀವು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೀರಿ, ಇದರ ಬಗ್ಗೆ ಮರಳಿ ಯೋಚಿಸಬೇಡಿ. ನಿಮ್ಮ ಪ್ರಯತ್ನ ನೀವು ಮಾಡಿ ಮತ್ತು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ. ಖಂಡಿತ ನೀವು ಚೆನ್ನಾಗಿ ಮಾಡುತ್ತೀರಿ. ನಿರಂತರ ಏಕ್ಸ್‌ಸೈಜ್ ಹಾಗೂ ಡಯೆಟ್ ಮೂಲಕ ಓದಿನ ಮೇಲೆ ನಿಮ್ಮ ಗಮನ ಕೇಂದ್ರಿಕರಿಸಲು ಸಹಾಯ ಮಾಡುತ್ತದೆ.

2. ನಾನು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮದುವೆ ಜೂನ್‌ 2ರಂದು ನಡೆಯಿತು. ನನ್ನ ಹೆಂಡತಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಯಾಗಿ ಎರಡು ತಿಂಗಳು ಜೊತೆಯಲ್ಲೆ ಇದ್ದೆವು. ನಂತರ ಅವಳು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಜೊತೆ ಪರಾರಿಯಾಗಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದೇವೆ ಮತ್ತು ಆರು ತಿಂಗಳು ಕಳೆದರು ಪತ್ತೆಯಾಗಲಿಲ್ಲ. ಈಗ ನನ್ನ ತಂದೆ-ತಾಯಿ ಬೇರೆ ಹುಡುಗಿ ನೋಡುತ್ತಿದ್ದು, ಒಂದು ವೇಳೆ ಮದುವೆಯಾದ ನಂತರ ಅವಳು ಬಂದು, ನಿನ್ನ ಜೊತೆಯಲ್ಲೇ ಬಾಳುತ್ತೇನೆ ಅಂತ ಹೇಳಿದರೆ ಅಥವಾ ನನ್ನಿಂದ ಏನಾದರೂ ಜೀವನಾಂಶ ಕೇಳಿದರೆ, ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಇವಳು ನನಗೆ ಮಾಡಿರುವ ಮೋಸದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.

–ಪ್ರವೀಣ್ ಕುಮಾರ್, ಚನ್ನಪಟ್ಟಣ

ನಿಮಗೆ ಯಾವ ರೀತಿ ಮಾನಸಿಕ ಆಘಾತವಾಗಿದೆ ಎಂಬುದನ್ನು ನಾನು ಊಹಿಸಬಲ್ಲೆ. ನೀವು ಒಬ್ಬ ವಕೀಲರನ್ನು ಕಂಡು ನಿಮ್ಮ ಸಮಸ್ಯೆಗಳನ್ನು ಅವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಿ. ಅವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ವ್ಯಕ್ತಿ. ಅದರ ಜೊತೆಗೆ ಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಿ. ಇದು ಮುಂದೆ ನಿಮಗೆ ಜೀವನದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

3. ನಾನು ಮದುವೆ ಆಗಿ ಆರು ತಿಂಗಳು ಕಳೆದಿದೆ. ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸ, ನಂಬಿಕೆ ಇಲ್ಲ. ನನ್ನೊಡನೆ ಮಾತು ಆಡುವುದಿಲ್ಲ. ತುಂಬಾ ಸುಳ್ಳು ಹೇಳುತ್ತಾನೆ. ಯಾವಾಗಲೂ ಜಗಳ ಮಾಡುತ್ತಾನೆ. ನಮ್ಮಿಬ್ಬರ ನಡುವೆ ನಡೆದ ವೈಯಕ್ತಿಕ ಮಾತುಗಳನ್ನು ರೆಕಾರ್ಡ್ ಮಾಡಿ ಅವರ ಮನೆಯವರಿಗೆ ಕೇಳಿಸುತ್ತಾನೆ. ಇದುವರೆಗೆ ನನಗಾಗಿ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ನನ್ನ ಜೊತೆ ಮಾತನಾಡಿ ಮೂರು ತಿಂಗಳಾಯಿತು. ಅವನ ಜೊತೆ ಬಾಳಲು ತುಂಬಾ ಕಷ್ಟವಾಗುತ್ತಿದೆ. ‘ಕೆಲಸ ಬಿಟ್ಟು ಹಳ್ಳಿಯಲ್ಲಿ ಇರು, ತಂಗಿಯ ಮಕ್ಕಳನ್ನು ನೀನೇ ನೋಡಿಕೋ’ ಎಂದು ಹಿಂಸೆ ಮಾಡುತ್ತಾನೆ. ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಗಂಡ ಕೆಲಸಕ್ಕೂ ಹೋಗುತ್ತಿಲ್ಲ. ನನಗೆ ಜೀವನ ಕಷ್ಟವಾಗಿದೆ.

– ಹೆಸರು, ಉರು ಬೇಡ

ಹೊಸದಾಗಿ ಮದುವೆಯಾದ ದಂಪತಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸುತ್ತಲೂ ಹೊಸ ಜನರಿರುತ್ತಾರೆ. ಆಗ ಇಬ್ಬರೂ ಅವರನ್ನು ಅರ್ಥ ಮಾಡಿಕೊಳ್ಳುವುದು, ಅವರೊಂದಿಗೆ ಹೊಂದಿಕೊಳ್ಳುವುದು ಮಾಡಬೇಕು. ಇಬ್ಬರೂ ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮಿಬ್ಬರ ನಿರೀಕ್ಷೆ ಏನು ಎಂಬುದನ್ನು ತಿಳಿದುಕೊಳ್ಳಿ. ಇಬ್ಬರ ನಡುವೆ ಇರುವ ವ್ಯತ್ಯಾಸಗಳನ್ನು ಚರ್ಚಿಸಿ, ಒಂದು ತಿಳಿವಳಿಕೆಗೆ ಬನ್ನಿ. ನಿಮ್ಮ ಗಂಡ ದುಡಿಯುತ್ತಿಲ್ಲ, ಹಾಗಾಗಿ ನೀವು ಕೆಲಸ ಬಿಡಬೇಡಿ. ಆರೋಗ್ಯಕರ ಸಂವಹನ ಇಲ್ಲಿ ತುಂಬಾ ಮುಖ್ಯ. ಮದುವೆ ಗಂಡ–ಹೆಂಡತಿ ಇಬ್ಬರ ಜೀವನದಲ್ಲೂ ಕೆಲವೊಂದು ಬದಲಾವಣೆಯನ್ನು ತರುತ್ತದೆ. ಇದು ತುಂಬಾ ದೊಡ್ಡ ಜವಾಬ್ದಾರಿ, ಫ್ರೌಢತೆಯಿಂದ ನಿಭಾಯಿಸಿ. ಸಮಯದ ಹಂತದೊಂದಿಗೆ ಸಂಬಂಧ ಸುಂದರವಾಗಿ ಬೆಳೆಯುತ್ತದೆ. ನಿಮ್ಮಿಂದ ಇದನ್ನು ನಿಭಾಯಿಸಲು ಸಾಧ್ಯವೇ ನೋಡಿ, ಇಲ್ಲಿದಿದ್ದರೆ ಕುಟುಂಬದ ಹಿರಿಯರ ಬೆಂಬಲ ಪಡೆಯಿರಿ. ಅದರ ಜೊತೆಗೆ ನಿಮ್ಮ ಪೋಷಕರ ಜೊತೆಗೂ ಮಾತನಾಡಿ. ಅವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬಹುದು.

4. ನಾನು ಪ್ರಥಮ ವರ್ಷದ ಬಿ.ಕಾಂ. ಓದುತ್ತಿದ್ದೇನೆ. ನನಗೆ ತೊದಲುವಿಕೆಯ ಸಮಸ್ಯೆ ಇದೆ. ಇದರಿಂದ  ಸರಾಗವಾಗಿ ಮಾತನಾಡಲು ಬಹಳ ಸಮಸ್ಯೆಯಾಗುತ್ತದೆ. ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಹಳ ಆಸೆ ಇದೆ. ಆದರೆ ತೊದಲುವಿಕೆಯ ಕಾರಣದಿಂದ ಹಿಂಜರಿಯುತ್ತೇನೆ. ಎಲ್ಲರೊಟ್ಟಿಗೆ ಗುರುತಿಸಿಕೊಳ್ಳಬೇಕು ಎಂಬ ಆಸೆ ಬಹಳಷ್ಟಿದೆ. ಆದರೆ ತೊದಲುವಿಕೆ ದೊಡ್ಡ ಸಮಸ್ಯೆಯಾಗಿದೆ.

– ಹೆಸರು, ಊರು ಬೇಡ

ಯಾವ ವಯಸ್ಸಿನಿಂದ ನಿಮ್ಮಲ್ಲಿ ತೊದಲುವಿಕೆ ಆರಂಭವಾಯಿತು ಎಂಬುದನ್ನು ಇಲ್ಲಿ ತಿಳಿಸಿಲ್ಲ. ನನಗೆ ತಿಳಿದ ಮಟ್ಟಿಗೆ ತೊದಲುವಿಕೆ‌ಗೆ ಮೂರು ರೀತಿಯ ಕಾರಣಗಳಿವೆ. ಇದರಲ್ಲಿ ಮುಖ್ಯವಾದ ಎರಡು ಡೆವಲಪ್‌ಮೆಂಟಲ್ ಮತ್ತು ನ್ಯೂರೋಜೆನಿಕ್‌. ಮೂರನೇ ಹಾಗೂ ಅತಿ ಅಪರೂಪವಾದುದ್ದನ್ನು ಸೈಕೋಜೆನಿಕ್ ಎನ್ನುತ್ತಾರೆ.

ಡೆವಲಪ್‌ಮೆಂಟಲ್ ವಿಧಾನವು ಮಗುವೂ ಮಾತನಾಡಲು ಆರಂಭಿಸಿದಾಗಲೇ ಕಾಣಿಸಿಕೊಳ್ಳುತ್ತದೆ. ಮಕ್ಕಳು ಬೆಳೆಯುತ್ತಿರುವ ಸಂದರ್ಭದ ಕೆಲವು ಹಂತದಲ್ಲಿ ತೊದಲುವಿಕೆ ಕಾಣಿಸಿಕೊಳ್ಳುತ್ತದೆ. ನ್ಯೂರೋಜಿನಿಕ್ ತೊದಲುವಿಕೆ ಸ್ಟ್ರೋಕ್‌ ಅಥವಾ ತಲೆಗೆ ಪೆಟ್ಟು ಬೀಳುವುದು ಇಂತಹ ಗಂಭೀರ ಸಮಸ್ಯೆಗಳು ಉಂಟಾದಾಗ ಕಾಣಿಸಿಕೊಳ್ಳುತ್ತದೆ. ಮೆದುಳಿನ ಭಾಷಾ ಕೇಂದ್ರ ಹಾಗೂ ಸ್ನಾಯುಗಳ ನಡುವೆ ಸಂಪರ್ಕ ಕಡಿತಗೊಂಡಾಗ ಈ ಸಮಸ್ಯೆ ಎದುರಾಗುತ್ತದೆ.

ಭಾವನಾತ್ಮಕ ಆಘಾತಗಳು ಉಂಟಾದಾಗ ಸೈಕೋಜೆನಿಕ್ ತೊದಲುವಿಕೆ ಬರುತ್ತದೆ. ನೀವು ಈ ಸಮಸ್ಯೆಯನ್ನು ಗುರುತಿಸಲು ಡಾಕ್ಟರ್ ಬಳಿ ಹೋಗಿ‌ದ್ದೀರಿ ಎಂದು ಭಾವಿಸುತ್ತೇನೆ. ಏನೇ ಆಗಲಿ, ಅವೆಲ್ಲವನ್ನೂ ಬಿಟ್ಟು ನೀವು ಎಲ್ಲರೊಂದಿಗೆ ಬೆರೆಯಿರಿ ಮತ್ತು ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ. ನಿಮ್ಮನ್ನು ಅರ್ಥಮಾಡಿಕೊಂಡು ನಿಮಗೆ ಬೆಂಬಲ ನೀಡುವ ಸ್ನೇಹಿತರ ಗುಂಪೊಂದನ್ನು ಹುಟ್ಟುಹಾಕಿಕೊಳ್ಳಿ. ಅದಕ್ಕಾಗಿ ಕೆಲವು ತಂತ್ರಗಳನ್ನು ಪಾಲಿಸಬೇಕು. ಅದೆಂದರೆ, ನಿಧಾನವಾಗಿ ಮತ್ತು ಸುಮ್ಮನೆ ಮಾತನಾಡಿ. ಮುಂದಿನ ಶಬ್ದಕ್ಕೆ ಹೋಗುವ ಮೊದಲು, ಈಗ ಹೇಳಿದ ಶಬ್ದ ಸರಿಯಾಗಿ ನಿಮ್ಮ ಬಾಯಿಂದ ಹೊರಬರುವಂತೆ ನೋಡಿಕೊಳ್ಳಿ.

ನೀವು ಹೇಗೆ ಮಾತನಾಡುತ್ತೀರೋ ಹಾಗೆ ನಿಮ್ಮ ಶಬ್ದಗಳನ್ನು ನಿರ್ವಹಣೆ ಮಾಡಿ. ನೀವು ಯಾವ ಶಬ್ದ ಅಥವಾ ಯಾವ ಮನಃಸ್ಥಿತಿಯಲ್ಲಿದ್ದಾಗ ತೊದಲುತ್ತೀರಿ ಎಂಬುದನ್ನು ಕಂಡುಕೊಳ್ಳಿ.

ಮಾತಿನ ನಡುನಡುವೆ ನಿಲ್ಲಿಸಿ ಮಾತನಾಡಲು ಹಿಂಜರಿಯಬೇಡಿ. ಅಭ್ಯಾಸ ಮಾಡುತ್ತಿರುವಾಗಲೇ ಮಾತಿನ ವೇಗವನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಯಾವ ಶಬ್ದ ಕಷ್ಟ ಎನ್ನಿಸುತ್ತಿದೆ ಅದನ್ನು ಹೆಚ್ಚು ಅಭ್ಯಾಸ ಮಾಡಿ.

ಕ್ರಮೇಣಕ್ಕೆ ಶಬ್ದ ಹಾಗೂ ವಾಕ್ಯವನ್ನು ಹೆಚ್ಚಿಸಿಕೊಳ್ಳಿ. ಮಾತಿನಲ್ಲಿ ತೊಂದರೆ ನೀಡುವ ಶಬ್ದಗಳನ್ನು ಅನುಷ್ಠಾನಗೊಳಿಸುವವರೆಗೂ ಅದರ ಮೇಲೆ ಕೆಲಸ ಮಾಡಿ. ಭಾಷಾ ಚಿಕಿತ್ಸಕರೂ ನಿಮಗೆ ಕೆಲವು ತಂತ್ರಗಳನ್ನು ಕಲಿಸಲು ಸಹಾಯ ಮಾಡಬಹುದು. ತೊದಲುವಿಕೆಯಿಂದ ಉಂಟಾಗುವ ಆತಂಕ, ಒತ್ತಡ ಇವುಗಳು ಕೂಡ ಚಿಕಿತ್ಸೆಯಿಂದ ಗುಣವಾಗಬಹುದು. ಸಮಯ ಕಳೆದಂತೆ ನೀವು ಏನನ್ನು ಹೇಳಬೇಕು ಅದನ್ನು ಹೇಳುತ್ತಿದ್ದರೆ ತೊದಲುವಿಕೆ ನಿವಾರಣೆಯಾಗುತ್ತದೆ. ಮಾತನಾಡುವಾಗ ಸಮಯ ನೀಡಿ. ಆದಷ್ಟು ಶಾಂತರಾಗಿರಲು ಪ್ರಯ್ನತಿಸಿ.

ಈ ತಂತ್ರಾಭ್ಯಾಸಗಳು ನೀವು ಸ್ಪಷ್ಟವಾಗಿ ಮಾತನಾಡಲು ಸಹಾಯ ಮಾಡುತ್ತದೆ. ಆದರೆ ನಿಧಾನವಾಗಿ ಸಾರ್ವಜನಿಕವಾಗಿ ಮಾತನಾಡಲು ಅಭ್ಯಾಸವಾಗುತ್ತದೆ. ತೊದಲುವಿಕೆ ಇದೆ ಎನ್ನುವ ಕಾರಣಕ್ಕೆ ನಿಮ್ಮ ಯಾವುದೇ ಚಟುವಟಿಕೆಯನ್ನು ನಿಲ್ಲಿಸಬೇಡಿ. ಆತ್ಮವಿಶ್ವಾಸದಿಂದಿರಿ ಮತ್ತು ನಿಮ್ಮ ಕೌಶಲವನ್ನು ತೋರಿಸಿ. ಜನರು ಖಂಡಿತ ನಿಮಗೆ ಸಹಾಯ ಮಾಡುತ್ತಾರೆ ಮತ್ತು ನಿಮ್ಮನ್ನು ಪ್ರಶಂಸಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry