7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಗುರುಮಠಕಲ್‌ ಬಂದ್‌: ರಾಷ್ಟ್ರೀಯ ಹೆದ್ದಾರಿ ತಡೆ

Published:
Updated:

ಗುರುಮಠಕಲ್: ಗುರುಮಠಕಲ್, ಕೊಂಕಲ್, ಸೈದಾಪುರ ಮತ್ತು ಹತ್ತಿಕುಣಿ ಹೋಬಳಿಗಳು ಸೇರಿದಂತೆ ಸೇಡಂ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ ಒಟ್ಟು 138 ಗ್ರಾಮಗಳು ಒಳಗೊಂಡು ತಾಲ್ಲೂಕು ಕೇಂದ್ರ ರಚಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಗುರುಮಠಕಲ್‌ ಬಂದ್‌ ಆಚರಿಸಲಾಯಿತು. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.

ಖಾಸಾಮಠದ ಶ್ರೀಗಳ ನೇತೃತ್ವದಲ್ಲಿ ಹೋರಾಟಗಾರರು ಪಟ್ಟಣದ ಗಾಂಧಿ ಮೈದಾನದಿಂದ ಇಟ್ಕಾಲ್ ಗೇಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೈದರಾಬಾದ್–ವಿಜಯಪುರ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ, ಪ್ರತಿಭಟಿಸಿದರು. ಯಾದಗಿರಿ ತಹಶೀಲ್ದಾರ್‌ ಚೆನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ರಾಜಕೀಯ ಸ್ವಾರ್ಥಕ್ಕಾಗಿ ಸರ್ಕಾರ ಗುರುಮಠಕಲ್ ಮತ್ತು ಕೊಂಕಲ್ ಹೋಬಳಿಯ ಅರ್ಧ ಭಾಗದ ಒಟ್ಟು 57 ಗ್ರಾಮಗಳು ಹಾಗೂ ಗುರುಮಠಕಲ್ ಪಟ್ಟಣ ಒಳಗೊಂಡ ಸಣ್ಣ ತಾಲ್ಲೂಕು ರಚಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗುರುಮಠಕಲ್ ತಾಲ್ಲೂಕು ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ಇಂಜಳ್ಳಿಕರ್ ಮಾತನಾಡಿ, ‘ಈಗಾಗಲೇ ನಿರ್ಧರಿಸಿದಂತೆಯೇ ಗುರುಮಠಕಲ್‌ ತಾಲ್ಲೂಕು ರಚಿಸಬೇಕು. ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ.10ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಜ.10ರೊಳಗೆ ಸೇಡಂ ತಾಲ್ಲೂಕಿನ 36 ಗ್ರಾಮಗಳನ್ನು ಗುರುಮಠಕಲ್ ತಾಲ್ಲೂಕಿನಲ್ಲಿ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಈ ಹಿಂದೆ ಹುಂಡೇಕರ್, ಗದ್ದಿಗೌಡರ್ ಸಮಿತಿಗಳ ಶಿಫಾರಸಿನಂತೆ ಸೇಡಂ ತಾಲ್ಲೂಕು ವ್ಯಾಪ್ತಿಯ 36 ಗ್ರಾಮಗಳನ್ನು ಗುರುಮಠಕಲ್ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಮತ್ತು ಯಾದಗಿರಿ ತಾಲ್ಲೂಕಿನ 206 ಗ್ರಾಮಗಳ ಪೈಕಿ 101 ಗ್ರಾಮಗಳನ್ನು ಗುರುಮಠಕಲ್ ವ್ಯಾಪ್ತಿಗೆ ತರುವುದರ ಮೂಲಕ ಗುರುಮಠಕಲ್ ತಾಲ್ಲೂಕು ರಚಿಸಬೇಕಿತ್ತು. ಆದರೆ ಸರ್ಕಾರವು ಸ್ವಾರ್ಥ ರಾಜಕಾರಣದಿಂದ ಅತಿ ಚಿಕ್ಕ ತಾಲ್ಲೂಕು ರಚಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುಮಠಕಲ್ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಸಾಯಬಣ್ಣ ಬೋರಬಂಡಾ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶರಣು ಗದ್ದುಗೆ, ಜಿ.ಕೆ.ಪಾಟೀಲ, ರಾಜಗೋಪಾಲರೆಡ್ಡಿ, ಮುಖ್ರಂ ಖಾನ್, ಬಾಲಪ್ಪ ನಿರೇಟಿ, ಶರಣು ಆವಂಟಿ, ರಾಜಗೋಪಾಲರೆಡ್ಡಿ, ಕೆ.ದೇವದಾಸ್, ಪ್ರಕಾಶರೆಡ್ಡಿ, ನರೇಶ ಗೋಂಗ್ಲೆ, ವೀರಪ್ಪ ಪ್ಯಾಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry