ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಒಳಮೀಸಲಾತಿ ಒಂದು ಭ್ರಮೆ’

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ನ್ಯಾ.ಸದಾಶಿವ ಆಯೋಗವು ಪ್ರಸ್ತಾಪಿಸಿರುವ ಒಳಮೀಸಲಾತಿ ಬಗ್ಗೆ ನಿಮ್ಮ ನಿಲುವೇನು?

ಅದೊಂದು ವಿದ್ರೋಹದ ವಿಭಜನೆ. ಅಂಬೇಡ್ಕರರ ಮೀಸಲಾತಿ ತತ್ವವನ್ನು ಅಪವಿತ್ರಗೊಳಿಸುವ, ಅದನ್ನು ದೇಶದಲ್ಲಿ ಇಲ್ಲದಂತೆ ಮಾಡುವ ಹುನ್ನಾರ, ರೋಗ. ಹಿಂದುತ್ವ, ಭ್ರಷ್ಟ ರಾಜಕೀಯ ವ್ಯವಸ್ಥೆ ಹಾಗೂ ಮೇಲುಜಾತಿ ಒಟ್ಟಾಗಿ ನಡೆಸುತ್ತಿರುವ ಹುನ್ನಾರಗಳ ಭಾಗವಾಗಿಯೇ ಒಳಮೀಸಲಾತಿ ವಿವಾದವನ್ನು ಅರ್ಥೈಸಬೇಕು. ಸಾಮಾಜಿಕ ನ್ಯಾಯವನ್ನು ಅವರವರ ತುತ್ತಿಗೆ ಅನುಗುಣವಾಗಿ ಹಂಚಿದರೂ ಅದೊಂದು ಮೋಸ. ದೇಶಗಳ ವಿಭಜನೆಯಿಂದ ಸೃಷ್ಟಿಯಾದ ಹಿಂಸೆ, ಭಯೋತ್ಪಾದನೆ ಪರಿಸ್ಥಿತಿಯಂತೆಯೇ ಒಳಮೀಸಲಾತಿಯೂ ಸಮುದಾಯಗಳನ್ನು ವಿಭಜಿಸುತ್ತದೆ.

* ಹಾಗಾದರೆ ಒಳಮೀಸಲಾತಿ ಬೇಡವೇ?

ನನ್ನ ಪ್ರಕಾರ ಹೊಲೆಯ ಮಾದಿಗರಿಬ್ಬರೂ ಸಯಾಮಿ ಅವಳಿಗಳು. ಅವರನ್ನು ಇಬ್ಭಾಗ ಮಾಡಿದರೆ ಇಬ್ಬರೂ ಸಾಯುತ್ತಾರೆ ಎಂಬ ಎಚ್ಚರ ಇಬ್ಬರಿಗೂ ಇರಬೇಕು. ನ್ಯಾಯದ ಹೆಸರಲ್ಲಿ ಒಳಮೀಸಲಾತಿಯನ್ನು ಹಂಚಿಕೊಳ್ಳಿ ಎಂದು ಹೇಳುತ್ತಿರುವ ವಿಚಾರವನ್ನು ಮಾದಿಗ ದಂಡೋರದ ತಲೆಗೆ ತುಂಬಿದವರಿಗೆ ಮೊದಲು ದಂಡನೆ ಆಗಬೇಕು.

* ದಂಡೋರದ ತಲೆಗೆ ವಿಚಾರವನ್ನು ತುಂಬಿದವರು ಯಾರು?

ಹಿಂದುತ್ವದ ಪ್ರತಿಪಾದಕರು. ಮೀಸಲಾತಿಯನ್ನು ಅಪವಿತ್ರ, ಅಪವ್ಯಾಖ್ಯಾನಗೊಳಿಸಿಬಿಟ್ಟರೆ ಅಂಬೇಡ್ಕರರ ಮೀಸಲಾತಿ ತತ್ವ ಮತ್ತು ಸಂವಿಧಾನವನ್ನು ಕೊನೆಗಾಣಿಸಬಹುದು ಎಂಬ ಅಜೆಂಡಾ ಅವರಿಗೆ ಇರಬಹುದು. ಅವರೊಂದಿಗೆ ಆಸೆಬುರುಕ ಹಾಗೂ ಸ್ವಾರ್ಥಿಯಾದ, ಮಾದಿಗರ ನಿಜವಾದ ಪ್ರತಿನಿಧಿಗಳಲ್ಲದ, ಕೆಲವು ಅಪ್ರಬುದ್ಧ ನಾಯಕರೂ ಇದ್ದಾರೆ. ಅವರಲ್ಲಿ ಕೆಲವರು ಕಾಂಗ್ರೆಸ್‌ನಲ್ಲಿದ್ದಾರೆ. ಈ ನಡುವೆ, ಹೊಲೆಯರ ನಿಜವಾದ ರಾಜಕೀಯ ನಾಯಕರು, ಹೋರಾಟಗಾರರು ಹಾಗೂ ಲೇಖಕರರಲ್ಲಿ ಯಾರೂ ಒಳಮೀಸಲಾತಿಗಾಗಿ ಆಗ್ರಹಿಸಿಲ್ಲ.

* ಇತರೆ ರಾಜ್ಯಗಳಲ್ಲೂ ಒಳಮೀಸಲಾತಿಯ ಕೂಗಿದೆಯಲ್ಲಾ?

ಒಳಮೀಸಲಾತಿ ಅಖಂಡವಾದ ಅಸ್ಪೃಶ್ಯರ ಸಮಸ್ಯೆ ಅಲ್ಲ. ಆಂಧ್ರ ಮತ್ತು ಕರ್ನಾಟಕದಲ್ಲಿ ಚರ್ಚೆ ಜೋರಾಗಿದೆ. ತಮಿಳುನಾಡು ಮತ್ತು ಗುಜರಾತಿನ ಅಲ್ಲಲ್ಲಿ ಮಾತ್ರ ಇದೆ. ಆಂಧ್ರದಲ್ಲಿ ಮೊದಲು ಈ ರೋಗ ಕಾಣಿಸಿಕೊಂಡಿತು. ಇದರಿಂದ ಯಾರಿಗೂ ಲಾಭವಿಲ್ಲ, ಪಾಲೂ ಸಿಕ್ಕುವುದಿಲ್ಲ. ಇಬ್ಬರ ಪಾಲನ್ನೂ ಕಿತ್ತುಕೊಂಡು ಮೂರನೆಯವರು ತಿನ್ನುತ್ತಾರೆ. ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಬೇಕೆಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗುತ್ತದೆ.

* ಒಳಮೀಸಲಾತಿಯಿಂದ ಯಾರಿಗೆ ಲಾಭ?

ರಾಜಕೀಯ ಪಕ್ಷಗಳಿಗೆ. ತನಗೆ ಮಾದಿಗರು ಹೆಚ್ಚು ಹತ್ತಿರವಾಗಿದ್ದಾರೆ ಎಂದು ಬಿಜೆಪಿ ಭಾವಿಸಿದೆ. ಯಡಿಯೂರಪ್ಪ ತಮ್ಮ ಸರ್ಕಾರದಲ್ಲಿ ಮಾದಿಗರಿಗೆ ಹೆಚ್ಚು ಸಚಿವ ಸ್ಥಾನಗಳನ್ನು ಕೊಡುವ ಮೂಲಕ ಮಾದಿಗರನ್ನು ಓಟ್‌ ಬ್ಯಾಂಕ್‌ ಆಗಿ ಪರಿವರ್ತಿಸಿಕೊಂಡರು. ಕಾಂಗ್ರೆಸ್‌ ಹೊಲೆಯರ ಓಟುಗಳನ್ನು ನಂಬಿ ಕಾರ್ಯಾಚರಣೆ ನಡೆಸುತ್ತಿದೆ. ಮತ ಬ್ಯಾಂಕ್‌ ರಾಜಕಾರಣದ ಭಾಗವಾಗಿ ಮಾತ್ರ ಒಳಮೀಸಲಾತಿಯನ್ನು ಪಕ್ಷಗಳು, ಸರ್ಕಾರಗಳು ನೋಡುತ್ತಿವೆಯೇ ಹೊರತು, ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾದವರಿಗೆ ನ್ಯಾಯ ದೊರಕಿಸಬೇಕು ಎಂದಲ್ಲ. ಕೆಲವು ದಲಿತ ಲೇಖಕರೂ ಈ ಚರ್ಚೆಯನ್ನು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ.

* ಒಳಮೀಸಲಾತಿ ಬೇಡ ಎಂದರೆ, ಪರಿಶಿಷ್ಟರಲ್ಲೇ ಶೋಚನೀಯ ಸ್ಥಿತಿಯಲ್ಲಿರುವವರಿಗೆ ನ್ಯಾಯ ಸಿಗುವುದಾದರೂ ಹೇಗೆ?

ಒಳಮೀಸಲಾತಿ ಮೇಲ್ನೋಟಕ್ಕೆ ಚೆನ್ನಾಗಿದೆ. ಕೇಂದ್ರ ಸರ್ಕಾರದ ಅಂಕಿ–ಅಂಶದ ಪ್ರಕಾರ, ದೇಶದ 70ವರ್ಷಗಳ ಇತಿಹಾಸದಲ್ಲಿ ಅಸ್ಪೃಶ್ಯರ ಶೇ 18 ಮೀಸಲಾತಿ ಪೈಕಿ ಶೇ 3.8ರಷ್ಟು ಮಾತ್ರ ಜಾರಿಯಾಗಿದೆ. ಇಂಥ ಸನ್ನಿವೇಶದಲ್ಲಿ ಒಳಮೀಸಲಾತಿ ಜಾರಿಗೊಳ್ಳುತ್ತದೆ ಎಂಬುದು ಸುಳ್ಳು. ಮಾದಿಗರಲ್ಲಿ, ಹೊಲೆಯರಲ್ಲಿ ಅತ್ಯಂತ ಅಸ್ಪೃಶ್ಯರಿದ್ದಾರೆ. ಅಂಥವರ ಜಾತಿ ಜನಗಣತಿ ಮೊದಲು ನಡೆಯಲಿ. ಅವರಿಗೆ ಮೊದಲು ಪ್ರತ್ಯೇಕ ಮೀಸಲಾತಿ ದೊರಕಲಿ. ಒಳಮೀಸಲಾತಿಯು ಹಿಂದೂ ಅವಕಾಶವಾದಿಗಳ ಪ್ರಚೋದನೆಯಿಂದ ಸೃಷ್ಟಿಯಾದ ಭ್ರಮೆ ಹಾಗೂ ಚಿಲ್ಲರೆ ನ್ಯಾಯ. ಅದರಿಂದ ತಳಸಮುದಾಯಗಳ ಅಖಂಡ ಭಾರತ ಸುಭದ್ರವಾಗುವುದಿಲ್ಲ. ಒಳಮೀಸಲಾತಿಯ ನ್ಯಾಯ ಕೇಳುವ ಅವಶ್ಯಕತೆ ಇಲ್ಲ. ದಮನಿತರನ್ನು ಅಸಂಘಟಿತರಾಗಿಡುವ ರಾಜಕೀಯ ಪಕ್ಷಗಳ ಉದ್ದೇಶಕ್ಕೆ ಪೂರಕವಾಗಿಯೇ ಆಯೋಗವೂ ಒಳಮೀಸಲಾತಿ ಹಂಚುತ್ತಿದೆ.

* ಒಳಮೀಸಲಾತಿಗಾಗಿ ಮಾದಿಗ ಸಮುದಾಯ ಹಟ ಹಿಡಿದಿದೆಯಲ್ಲಾ?

ಅವರು ಹಟ ಹಿಡಿಯಲಿ. ಅನ್ಯಾಯ ಆಗಿದ್ದರೆ ಪ್ರಶ್ನಿಸುವ ಸ್ವಾತಂತ್ರ ಹಾಗೂ ನ್ಯಾಯ ಪಡೆಯುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಪರ್ಯಾಯವಾದ ಇನ್ನೊಂದು ಚೈತನ್ಯ ಇದೆ ಎನ್ನುವಂತೆ ಅವರು ಬಾಬು ಜಗಜೀವನರಾಂ ಅವರನ್ನು ಮುಂದಿಟ್ಟುಕೊಂಡು ನ್ಯಾಯವನ್ನು ಕೇಳುತ್ತಿರುವುದು ದುರಂತ. ಮಾದಿಗ ದಂಡೋರದಲ್ಲಿ ಇದರ ಕಲ್ಪನೆಯೇ ಇರಲಿಲ್ಲ. ಅದನ್ನು ತಂದಿದ್ದು ಕಾಂಗ್ರೆಸ್‌. ಒಳಮೀಸಲಾತಿ ಮಾದಿಗರು–ಹೊಲೆಯರಿಬ್ಬರಿಗೂ ಬೇಕಾಗಿರಲಿಲ್ಲ. ಅಂಬೇಡ್ಕರ್‌ ಎಂಬ ಜ್ಯೋತಿಯೊಂದೇ ಸಾಕಾಗಿತ್ತು. ಅದನ್ನು ದಲಿತ ಸಂಘರ್ಷ ಸಮಿತಿ ಮೂಲಕ ಬಿ.ಕೃಷ್ಣಪ್ಪನವರು ಬೆಳಗಿಸಿದ್ದರು. ಅವರ ನಂತರ ಸಮಿತಿಯನ್ನು ಬಲವಾಗಿ ಕಟ್ಟಲಾಗದ ಮುಖಂಡರು ಹೊಲೆಯರಿಗಾಗಲೀ ಮಾದಿಗರಿಗಾಗಲೀ ಮತ್ತು ಒಳಜಾತಿಗಳಲ್ಲಿರುವ ಯಾರಿಗೇ ಆಗಲೀ ಮುಖ್ಯವಾಗಿರಲಿಲ್ಲ. ಅಂಥ ಕೆಲವು ಬೆರಳೆಣಿಕೆಯ ಮಾದಿಗ ಸಮುದಾಯದ ಮುಖಂಡರು ಸ್ವಾರ್ಥಕ್ಕಾಗಿ ಒಳ ಮೀಸಲಾತಿಯ ಬಾವುಟ ಹಿಡಿದು ದಂಡೋರವನ್ನು ಬಳಸಿಕೊಂಡರು.

* ಒಳಮೀಸಲಾತಿಗಿಂತಲೂ ಅಸ್ಪೃಶ್ಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳೇನು?

ಮಾನವ ಹಕ್ಕುಗಳ ದಮನ ಮಾಡುತ್ತಿರುವ ಸನಾತನ ಹಿಂದೂ, ಮನುವಾದಿ, ಕೋಮುವಾದಿ ಬಲಪಂಥೀಯ ರಾಜಕಾರಣವೇ ದೊಡ್ಡ ಸಮಸ್ಯೆ. ದಲಿತರನ್ನು ಜೀವಂತ ಸುಡಬೇಕು ಎಂದು ಹೇಳುತ್ತಿರುವ ಸಂದರ್ಭದಲ್ಲಿ ನಮ್ಮನ್ನು ನಾವೇ ಸುಟ್ಟುಕೊಂಡರೆ ಯಾವ ಮೀಸಲಾತಿ ಕೇಳಲು ಸಾಧ್ಯ? ಇಡೀ ಭಾರತವನ್ನು ಮನು ಭಾರತನ್ನಾಗಿಸಿ ಎಂಬ ಆಗ್ರಹದ ನಡುವೆ, ಅಂಬೇಡ್ಕರ್‌ ಅವರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದೇ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT