7

₹ 14 ಲಕ್ಷ ಎಗರಿಸಿದ ಕಳ್ಳರು

Published:
Updated:

ವಿಜಯಪುರ: ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಕಳ್ಳರು, ₹14 ಲಕ್ಷ ನಗದು ಇದ್ದ ಪೆಟ್ಟಿಗೆಯೊಂದಿಗೆ ಶನಿವಾರ ಪರಾರಿಯಾಗಿದ್ದಾರೆ.

ಬ್ಯಾಂಕಿನ ಮುಖ್ಯ ಕಚೇರಿಯಿಂದ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು, ಮೂರು ಟ್ರಂಕ್‌ಗಳಲ್ಲಿ ಹಣ ಕೊಂಡೊಯ್ಯಲು ಬ್ಯಾಂಕ್‌ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಘಟನೆ ವಿವರ: ಶನಿವಾರ ಬೆಳಿಗ್ಗೆ 11.30ಕ್ಕೆ, ಹಣವಿದ್ದ ಟ್ರಂಕ್‌ಗಳನ್ನು ಬ್ಯಾಂಕ್‌ ಸಿಬ್ಬಂದಿ ವಿಶೇಷ ವಾಹನದಲ್ಲಿ ಕೊಂಡೊಯ್ಯಲು ಸಜ್ಜಾಗಿದ್ದರು. ಭದ್ರತಾ ಸಿಬ್ಬಂದಿಯೂ ಕಾವಲಿಗಿದ್ದರು. ಈ ಸಂದರ್ಭ ವಾಹನದ ಬಳಿ ಬಂದ ಚಾಲಾಕಿ ಕಳ್ಳನೊಬ್ಬ ಕೆಲ ನೋಟುಗಳನ್ನು ಕೆಳಗೆ ಚೆಲ್ಲಿ ಸಿಬ್ಬಂದಿಯ ಗಮನವನ್ನು ಅತ್ತ ಸೆಳೆದಿದ್ದಾನೆ. ಭದ್ರತಾ ಕಾವಲುಗಾರ ಕೆಳಗೆ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಮುಂದಾಗುತ್ತಿದ್ದಂತೆಯೇ, ವಾಹನದೊಳಗಿಟ್ಟಿದ್ದ ಒಂದು ಟ್ರಂಕ್‌ನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ, ಬ್ಯಾಂಕ್‌ನಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಗಾಂಧಿಚೌಕ್‌ ಪೊಲೀಸರು ಘಟನೆಯ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗಾಗಿ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪಕುಮಾರ್ ಆರ್‌ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry