7
ವಿ.ವಿ. ಸಿಂಡಿಕೇಟ್ ಸಭೆ ಒಪ್ಪಿಗೆ

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

Published:
Updated:

ತುಮಕೂರು: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (ಎಸ್‌.ಸಿ.ಪಿ ಮತ್ತು ಟಿ.ಎಸ್.ಪಿ) ₹ 1.19 ಕೋಟಿ ಮೊತ್ತದಲ್ಲಿ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 254 ಲ್ಯಾಪ್‌ಟಾಪ್ ವಿತರಿಸಲು ಶನಿವಾರ ಪ್ರಭಾರ ಕುಲಪತಿ ಪ್ರೊ.ಜಯಶೀಲ ಅಧ್ಯಕ್ಷತೆಯಲ್ಲಿ ನಡೆದ  ತುಮಕೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿತು.

ವಿಶೇಷ ಘಟಕ ಯೋಜನೆಯಡಿ 182 ಹಾಗೂ ಗಿರಿಜನ ಉಪಯೋಜನೆಯಡಿ 72 ಸೇರಿ 254 ಲ್ಯಾಪ್ ಟಾಪ್ ವಿತರಿಸುವ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಯಿತು. ಈ ಎರಡೂ ಯೋಜನೆಗಳಲ್ಲಿ ವಿ.ವಿ ಹಣ ಬಳಕೆ ಮಾಡಿಕೊಳ್ಳದೇ ಉಳಿಸಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡಬೇಕು ಎಂದು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳು ಒತ್ತಾಯಿಸಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಟೆಂಡರ್ ಕರೆದು ಸರಬರಾಜು ಮಾಡಲು ಕಾಲಾವಕಾಶ ಕಡಿಮೆ ಇದೆ. ಅನುದಾನವನ್ನು ತುರ್ತಾಗಿ ಬಳಕೆ ಮಾಡಬೇಕಾಗಿದೆ. ಹೀಗಾಗಿ  ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಮೂಲಕ ಸರಬರಾಜು ಮಾಡುವುದಕ್ಕೆ ಸಭೆ ಒಪ್ಪಿಗೆ ನೀಡಿತು.

ಲ್ಯಾಪ್‌ಟಾಪ್‌ ಸರಬರಾಜು ಮಾಡಿದ ಬಳಿಕ  ಕಿಯೋನಿಕ್ಸ್‌ಗೆ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಲು ನಿರ್ಣಯ ಕೈಗೊಳ್ಳಲಾಯಿತು.

ಚಾಲೆಂಜ್ ಮೌಲ್ಯಮಾಪನಕ್ಕೆ ಗ್ರಿನ್ ಸಿಗ್ನಲ್: ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತ ಪ್ರಸ್ತಾವನೆ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿತು.

ತುಮಕೂರು ವಿವಿಯು 2014–15ರ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಪದವಿ ಸಿಬಿಸಿಎಸ್ ನಿಯಮಾವಳಿಯಲ್ಲಿ ಉತ್ತರ ಪತ್ರಿಕೆಗಳ ಛಾಯಾ ಪ್ರತಿಯನ್ನು ನೀಡಲು ಮತ್ತು ಚಾಲೆಂಜ್ ಮೌಲ್ಯಮಾಪನಕ್ಕೆ ಯಾವುದೇ ಅವಕಾಶ ಇರಲಿಲ್ಲ.

ಕಳೆದ ಮೇ ತಿಂಗಳಲ್ಲಿ ನಡೆದ ಸಿಂಡಿಕೇಟ್ ಸಭೆಯು ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ(ಸಿಬಿಸಿಎಸ್) ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ವಿವಿಯ ಪರಿನಿಯಮಾವಳಿಗೆ ಸೂಕ್ತ ತಿದ್ದುಪಡಿ ಮಾಡಿ ರಾಜ್ಯಪಾಲರ ಅನುಮೋದನೆಗೆ ಸಿಂಡಿಕೇಟ್ ಒಪ್ಪಿತ್ತು.

ಈ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮನವಿ ಪತ್ರವನ್ನು ಪರೀಕ್ಷಾಂಗ ವಿಭಾಗಕ್ಕೆ ಸಲ್ಲಿಸಿ ಚಾಲೆಂಜ್ ಮೌಲ್ಯಮಾಪನಕ್ಕೆ ಅವಕಾಶ ಕೋರಿದ್ದರು. ಈ ವಿದ್ಯಾರ್ಥಿಗಳಿಗೆ ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಲು  ಒಪ‍್ಪಿಗೆ ಸೂಚಿಸಲಾಯಿತು.

ಸ್ನಾತಕ ಪರಿಸರ ವಿಜ್ಞಾನ ವಿಷಯದ ಅಧ್ಯಯನ ಮಂಡಳಿ, ಸ್ನಾತಕ ಸಂಸ್ಕೃತಿ ವಿಷಯದ ಅಧ್ಯಯನ ಮಂಡಳಿ, ಸ್ನಾತಕ ಜೈವಿಕ ತಂತ್ರಜ್ಞಾನ ವಿಷಯ ಅಧ್ಯಯನ ಮಂಡಳಿ, ಸ್ನಾತಕ ಇಂಟಿಗ್ರೇಟೆಡ್ ಕನ್ನಡ ಪಂಡಿತ ವಿಷಯದ ಅಧ್ಯಯನ ಮಂಡಳಿ ರಚನೆಗೆ ಒಪ್ಪಿಗೆ ನೀಡಿತು. ಕುಲಪತಿ ‍ಪ್ರೊ. ಗುಂಜಾಳ್‌ ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry