7

ಈ ವರ್ಷದ ನಿರ್ಣಯ

Published:
Updated:
ಈ ವರ್ಷದ ನಿರ್ಣಯ

ಇನ್ನಷ್ಟು ವಾಕಿಂಗ್ ಮಾಡುವೆ

2017ರ ನಿರ್ಣಯಗಳನ್ನು 2016ರಲ್ಲಿ ಬರೆದುಕೊಂಡಿದ್ದೆ. ಅದರಂತೆ ಧಾರಾವಾಹಿಗಳನ್ನು ನೋಡುವುದು ಕಡಿಮೆ ಮಾಡಿ, ವಾಕಿಂಗ್‌ ಅವಧಿ ಹೆಚ್ಚು ಮಾಡಿಕೊಂಡೆ. ನನ್ನ ತೂಕ ನಿಜಕ್ಕೂ ಕಡಿಮೆಯಾಗಿದೆ. ಈಗ ಮನೆ ಕೆಲಸಗಳನ್ನು ಹೆಚ್ಚು ಉತ್ಸಾಹದಿಂದ ಮತ್ತು ಚುರುಕಾಗಿ ಮಾಡಲು ಸಾಧ್ಯವಾಗಿದೆ. ದೇಹದ ತೂಕ ಹೆಚ್ಚಾಗುವುದರಿಂದ ಅನೇಕ ಕಾಯಿಲೆಗಳು ಬರುತ್ತವೆ, ಕೆಲಸಗಳನ್ನೂ ಚುರುಕಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯವೇ ಮಹಾಭಾಗ್ಯ ತಾನೆ. ಈ ವರ್ಷಕ್ಕೂ ಇದೇ ನಿರ್ಣಯವನ್ನು ಮುಂದುವರಿಸುವೆ. ವಾಕಿಂಗ್ ಅವಧಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡು, ತೂಕವನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳುವೆ.    -  ಲೀಲಾ ಚಂದ್ರಶೇಖರ, ಉತ್ತರಹಳ್ಳಿ

***

ಇದು ನನ್ನ ನಿರ್ಣಯಗಳು

* ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು, ಬಾಸ್ ಕಡೆಯಿಂದ ಬೈಸಿಕೊಳ್ಳದಿರುವುದು

* ಪುಕ್ಕಟೆ ಸಲಹೆ ಕೊಡದಿರುವುದು (ಪಡೆದವರು ಉದ್ದಾರವಾಗಿ ನನ್ನನ್ನು ಕ್ಯಾರೇ ಅನ್ನದಾಗ ನೊಂದುಕೊಳ್ಳುವುದಾದರೂ

ತಪ್ಪುತ್ತದೆ).

* ವಿಪರೀತ ಕಾಫಿ ಕುಡಿಯುವ ಚಟದಿಂದ ಮುಕ್ತಳಾಗುವುದು

* ತರ್ಕಾತೀತ ಧಾರಾವಾಹಿಗಳಿಗೆ ಅಂಟಿಕೊಳ್ಳದಿರುವುದು. ನೋಡಿದರೂ ವಿಮರ್ಶೆಗೆ ಹಚ್ಚಿ ಹುಚ್ಚಿಯಾಗದಿರುವುದು

* ಮೊಮ್ಮಗ ಮತ್ತು ಅಮ್ಮ ಏನೇ ಹೇಳಿದರೂ ಸಿಟ್ಟು ಮಾಡಿಕೊಳ್ಳದಿರುವುದು

* ವಿಭಿನ್ನ ರೆಸಿಪಿಗಳನ್ನು ಕಲಿತು, ಮೊಮ್ಮಗನ ಬಾಕ್ಸ್‌ ರುಚಿ ಹೆಚ್ಚಿಸುವುದು

* ಮಳೆ ಬಿಸಿಲು ಚಳಿ ಏನಾದರಾಗಲಿ ಬೆಳಿಗ್ಗೆ ಮತ್ತು ಸಂಜೆ ವಾಕ್ ತಪ್ಪಿಸದಿರುವುದು

ಕೆ.ವಿ. ರಾಜಲಕ್ಷ್ಮಿ, ಅಳ್ಳಾಳಸಂದ್ರ

***

ಹೂಡಿಕೆ ಮಾಡುವೆ

68 ವರ್ಷ ಕಳೆದರೂ ದೇವರ ದಯೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡಿಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಚಿಂತೆಯಲ್ಲಿಯೇ 2017 ಓಡಿಹೋಯಿತು. 2018 ಹೀಗೆ ಹಾಳಾಗಬಾರದು. ಆಪತ್ಕಾಲಕ್ಕೆಂದು ಈ ವರ್ಷ ಒಂದಿಷ್ಟು ಹಣ ಹೂಡಿಕೆ ಮಾಡುತ್ತೇನೆ.

ಧರಣೇಂದ್ರ ಬರಮಪ್ಪ ಜವಳಿ, ಮಧುರ ಚೇತನ ಕಾಲೊನಿ

***

ಸ್ವಲ್ಪ ಸಿಹಿ, ಸ್ವಲ್ಪ ಹುಳಿ

ಅಂಬೇಡ್ಕರ್ ಬರಹದ ಸಂಪುಟಗಳನ್ನು ಪೂರ್ತಿಯಾಗಿ ಓದಬೇಕು ಎಂದು ಕಳೆದ ವರ್ಷ ಸಂಕಲ್ಪಿಸಿದ್ದೆ. ಆದರೆ ಕೇವಲ ಎರಡು ಸಂಪುಟಗಳನ್ನು ಮಾತ್ರ ಓದಲು ಸಾಧ್ಯವಾಯಿತು. ಟಿವಿ ವಾಹಿನಿಗಳಲ್ಲಿ ರಾಜಕೀಯ ಚರ್ಚೆ ನೋಡುವುದನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆ. ಅದು ಯಶಸ್ವಿಯಾಗಿದೆ. ಈಗ ಕೇವಲ ಸುದ್ದಿಯ ಮುಖ್ಯಾಂಶಗಳಿಗೆ ಮಾತ್ರ ಟಿವಿ ನೋಡುತ್ತೇನೆ. ಉಳಿದಂತೆ ದಿನಪತ್ರಿಕೆಗಳು ನನ್ನ ಸುದ್ದಿ ಸಂಗಾತಿಯಾಗಿ ಇಂದಿಗೂ ಉಳಿದುಕೊಂಡಿವೆ. ಈ ವರ್ಷ ಯಾವ ಸಂಕಲ್ಪ ಮಾಡಬಾರದು ಎಂದುಕೊಂಡಿದ್ದೇನೆ.

–ಮಂಜುನಾಥ್ ಸಿ. ನೆಟ್ಕಲ್, ಕಾಳಿಕಾ ನಗರ

***

ಅಂಕಣಕ್ಕೆ ಅವಕಾಶ ಕೋರುವೆ

ನಾನು ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಸಲು ಯತ್ನಿಸುತ್ತಿರುವೆ. ಕಳೆದ ವರ್ಷ ದಿನ ಪತ್ರಿಕೆಗಳಲ್ಲಿ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಿಸುವುದು ಹೇಗೆ ಎನ್ನುವ ಕುರಿತು ಲೇಖನ ಬರೆದೆ. ಸ್ಪರ್ಧಾತ್ಮಕ ಗಣಿತವನ್ನು ಪ್ರೌಢ ಹಂತದಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಲು ಒಂದು ಮಾಸಪತ್ರಿಕೆಯಲ್ಲಿ ಗಣಿತ ಅಂಕಣಕಾರನಾಗಿ ಬರೆಯುತ್ತಿರುವೆ. ದಿನಪತ್ರಿಕೆಗಳಲ್ಲಿ ಗಣಿತದ ಕುರಿತು ಅಂಕಣ ಬರೆಯಲು ಅವಕಾಶ ಪಡೆದುಕೊಳ್ಳುವುದು ನನ್ನ ಈ ವರ್ಷದ ಸಂಕಲ್ಪ.

ಎಲ್.ಪಿ. ಕುಲಕರ್ಣಿ, ಚಾಲುಕ್ಯನಗರ

***

ವಿಮೆ ಅರಿವು ಮೂಡಿಸುವೆ

2017ರಲ್ಲಿ ನಾನು ನಿವೃತ್ತನಾದೆ. ಚಟುವಟಿಕೆ ಇಲ್ಲದಿದ್ದರೆ ಆರೋಗ್ಯ ಹಾಳಾದೀತು ಎಂದು ಮನಸು ಎಚ್ಚರಿಸಿತು. ನನ್ನ ಪ್ರವೃತ್ತಿಯು ಸಮಾಜಮುಖಿಯಾಗಬೇಕು. ಈ ವರ್ಷ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಸಂಪರ್ಕಿಸಿ, ಕುಟುಂಬ ರಕ್ಷಣೆಯಲ್ಲಿ ಜೀವವಿಮೆಯ ಮಹತ್ವ ಮತ್ತು ಅಗತ್ಯದ ಅರಿವು ಮೂಡಿಸುವೆ. ಬರುವ ಅಲ್ಪ ಆದಾಯವನ್ನು ಅನಾಥಾಲಯಕ್ಕೆ ನೀಡುವ ಉದ್ದೇಶವಿದೆ.

ಶ್ಯಾಮರಾಜ್ ಆತಡಕರ್, ಜಯನಗರ 5ನೇ ಬ್ಲಾಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry