ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೈದುಂಬಿದ ಬಂಡ್ರಿ ದೊಡ್ಡ ಕೆರೆ

ಎರಡು ವರ್ಷದ ಬಳಿಕ ದುರಸ್ತಿ ಪೂರ್ಣ
Last Updated 1 ಜನವರಿ 2018, 5:56 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಬಂಡ್ರಿ ದೊಡ್ಡ ಕೆರೆ ಎರಡು ವರ್ಷದ ಬಳಿಕ ಮತ್ತೆ ಮೈದುಂಬಿದೆ.

2015ರ ಸೆಪ್ಟೆಂಬರ್‌ನಲ್ಲಿ ಅಪಾರ ಮಳೆಯಿಂದಾಗಿ ಕೆರೆಯ ಒಂದು ಭಾಗ ಒಡೆದು ನೀರು ಪೋಲಾಗಿ ಸುತ್ತಮುತ್ತಲಿನ ಪ್ರದೇಶದ ಬೆಳೆ ನಷ್ಟಕ್ಕೂ ದಾರಿ ಮಾಡಿತ್ತು. ದುರಸ್ತಿಯ ನಂತರ ಬಿದ್ದ ಉತ್ತಮ ಮಳೆಯಿಂದಾಗಿ ಕೆರೆಯು ಮೈದುಂಬಿಕೊಂಡು ನೋಡುಗರನ್ನು ಆಕರ್ಷಿಸುತ್ತಿದೆ. ಗ್ರಾಮಸ್ಥರಲ್ಲೂ ಹರ್ಷವನ್ನುಂಟು ಮಾಡಿದೆ.

ಜಿಲ್ಲಾ ಪಂಚಾಯಿತಿಗೆ ಸೇರಿದ ಕೆರೆಯನ್ನು ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರ 2016–17ನೇ ಸಾಲಿನ ವಿಶೇಷ ಅನುದಾನ ಸೇರಿ ಒಟ್ಟು ₹1.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಒಡೆದ ಭಾಗವನ್ನಲ್ಲದೆ, ಕೆರೆಯ ಏರಿ, ತೂಬು, ಕೋಡಿಯನ್ನು ಕೂಡ ಅಭಿವೃದ್ಧಿ ಪಡಿಸಲಾಗಿದೆ.

ಅಂತರ್ಜಲ ಹೆಚ್ಚಳ: ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಕೆರೆಯ ಸುತ್ತಲಿನ ಬಂಡ್ರಿ, ಕೋಡಳ್ಳಿ, ಗೊಲ್ಲರಹಟ್ಟಿ ಮುಂತಾದ ಭಾಗಗಳಲ್ಲಿ ಬೇಸಿಗೆಯಲ್ಲಿ ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳೆಲ್ಲಾ ಈಗ ಮರುಪೂರಣಗೊಂಡಿವೆ.

‘ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಈ ಭಾಗದಲ್ಲಿ ನೀರಿನ ತೊಂದರೆ ತಪ್ಪಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಬಂಡ್ರಿ ಗ್ರಾಮಸ್ಥ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೀನುಗಾರಿಕೆಗೂ ಅನುಕೂಲ: ಕೆರೆಯಲ್ಲಿ ನೀರು ತುಂಬಿರುವುದು ಮೀನುಗಾರಿಕೆಗೂ ಅನುಕೂಲವಾಗಿದೆ. ಇಲ್ಲಿ ಮೀನುಗಾರಿಕೆ ನಡೆಸಲು ವಾರ್ಷಿಕ ₹3.01 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ.

‘ಕೃಷಿ ಮತ್ತು ದನಕರುಗಳಿಗೂ ಹೆಚ್ಚು ಅನುಕೂಲವಾಗಿದೆ’ ಎಂದು ಬಂಡ್ರಿ ಗ್ರಾಮ ಪಂಚಾಯ್ತಿ ಸದಸ್ಯ ಕೆ. ನಾಗರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT