ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ಒಪಿಡಿ ಬಂದ್‌: ವೈದ್ಯರ ಮುಷ್ಕರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ

Last Updated 2 ಜನವರಿ 2018, 5:29 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರ ಬೆಂಬಲಿಸಿ ರಾಜ್ಯದಲ್ಲಿರುವ ಸುಮಾರು 15 ಸಾವಿರ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್ ಮಾಡಲು ಐಎಂಎ ಕರ್ನಾಟಕ ಶಾಖೆ ನಿರ್ಧರಿಸಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಕಾರ್ಯನಿರ್ವಹಿಸುವುದಿಲ್ಲ. ಆದರೆ, ತುರ್ತು ಚಿಕಿತ್ಸಾ ಸೌಲಭ್ಯ, ಔಷಧಿ ಅಂಗಡಿಗಳು ಮತ್ತು ಒಳರೋಗಿ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ
ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬೆಳಗಾವಿಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಖಾಸಗಿ  ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳು ಕಾರ್ಯನಿರ್ವಹಿಸುತ್ತಿಲ್ಲ. ಬೆಳಿಗ್ಗೆ 6ರಿಂದಲೂ ಬಂದ್ ಆಗಿವೆ. ಸಂಜೆ 6ರವರೆಗೂ ಬಂದ್ ಮುಂದುವರಿಯಲಿದೆ.

ಈ ಭಾಗದ ಪ್ರಮುಖ ಆಸ್ಪತ್ರೆಯಾದ ಕೆಎಲ್ಇ ಆಸ್ಪತ್ರೆಯಲ್ಲಿ ಸದ್ಯ ಹೊರ ರೋಗಿಗಳ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಮುಷ್ಕರಕ್ಕೆ ಬೆಂಬಲ ನೀಡುವ ಕುರಿತು ನಿರ್ಧಾರ ಆಗಿಲ್ಲ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಬಸವರಾಜ ಸೊಂಟನವರ ತಿಳಿಸಿದರು.

ಬರುವ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡುವಂತೆ, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸರ್ಕಾರಿ  ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿದೆ. ಔಷಧಿಗಳ ಕೊರತೆ ಇಲ್ಲ ಎಂದು ಡಿಎಚ್ಒ ಅಪ್ಪಾಸಾಹ ನರಹಟ್ಟಿ ಪ್ರತಿಕ್ರಿಯಿಸಿದರು.

ಹುಬ್ಬಳ್ಳಿಯಲ್ಲಿ ಉತ್ತಮ ಸ್ಪಂದನೆ

ಕೇಂದ್ರ ಸರ್ಕಾರ ಮಂಡಿಸಿರುವ 'ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017' ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ  ನೀಡಿರುವ 12 ಗಂಟೆ ಕಾಲ ಹೊರರೋಗಿ ಸೇವೆ ಬಂದ್‌ ಕರೆಗೆ  ಹುಬ್ಬಳ್ಳಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ.

ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ವಿವೇಕಾನಂದ ನರ್ಸಿಂಗ್ ಹೋಂ, ತತ್ವದರ್ಶ, ಶಕುಂತಲಾ, ಶಿವಕೃಪಾ, ಲೈಫ್ ಲೈನ್, ಸುಚಿರಾಯು ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಆಗಿದ್ದು, ಸಂಜೆ 6 ಗಂಟೆ ನಂತರ ಅವುಗಳು ಪುನಃ ಕಾರ್ಯಾರಂಭ ಮಾಡಲಿವೆ. ಇನ್ನು ಕೆಲ ಖಾಸಗಿ ಆಸ್ಪತ್ರೆಗಳ ಎದುರು ಸೂಚನಾ ಫಲಕವನ್ನ ಅಳವಡಿಸಲಾಗಿದ್ದು, ಹೊರ ರೋಗಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ನಗರದ ಕಿಮ್ಸ್ ಆಸ್ಪತ್ರೆ ಮತ್ತು ಚಿಟಗುಪ್ಪಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ

ತುಮಕೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ
 ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ತುಮಕೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಖಾಸಗಿ ಆಸ್ಪತ್ರೆ ಗಳ ಬಳಿ ಬಂದ ರೋಗಿಗಳು ಚಿಕಿತ್ಸೆ ದೊರೆಯುವುದಿಲ್ಲ ಎನ್ನುವುದನ್ನು ತಿಳಿದು ವಾಪಸ್ ಹೋಗುತ್ತಿದ್ದಾರೆ. ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ರಜೆಯಲ್ಲಿದ್ದ ಸಿಬ್ಬಂದಿಯನ್ನು ಕರೆಸಿಕೊಂಡಿದ್ದೇವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದರು. ಜಿಲ್ಲಾಧಿಕಾರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದು ಐಎಂಎ ಜಿಲ್ಲಾ ಘಟಕ ತಿಳಿಸಿದೆ.

ಹೊರ ರೋಗಿಗಳ ಸೇವೆ ಸ್ಥಗಿತ
ಕಲಬುರ್ಗಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕರೆ ನೀಡಿರುವ ಕರಾಳ ದಿನಾಚರಣೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬೆಳಿಗ್ಗೆಯಿಂದಲೇ ಕ್ಲಿನಿಕ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತಗೊಂಡಿದೆ ಎಂದು ಎಂಸಿಐ ಜಿಲ್ಕಾ ಘಟಕದ ಅಧ್ಯಕ್ಷ ಡಾ. ಕಿರಣ ದೇಶಮುಖ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT