ಸೋಮವಾರ, ಆಗಸ್ಟ್ 3, 2020
25 °C

ಸುರಕ್ಷಿತ ಭವಿಷ್ಯಕ್ಕೆ ಆರ್ಥಿಕ ನಿರ್ಧಾರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಕ್ಷಿತ ಭವಿಷ್ಯಕ್ಕೆ ಆರ್ಥಿಕ ನಿರ್ಧಾರಗಳು

ಪ್ರತಿಯೊಬ್ಬರ  ಹಣಕಾಸು ಅಗತ್ಯಗಳು ಮತ್ತು ಅದಕ್ಕೆ ತಕ್ಕಂತೆ ಹಣಕಾಸು ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. ಭವಿಷ್ಯದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳುವುದು ಜಾಣ ನಿರ್ಧಾರವಾಗಿರಲಿದೆ. ಬಳಿಯಲ್ಲಿ ಇರುವ ಸಂಪತ್ತನ್ನು ಇನ್ನಷ್ಟು ವೃದ್ಧಿಸುವ, ನಿವೃತ್ತಿ ಬದುಕು ಹೆಚ್ಚು ಆರಾಮವಾಗಿ ಕಳೆಯುವ, ಮಕ್ಕಳ ಶಿಕ್ಷಣ, ಮದುವೆ ಬಗೆಗಿನ ವೆಚ್ಚದ ಬಗ್ಗೆ ಬರೀ ಗುರಿ ಹಾಕಿಕೊಂಡರೆ, ಕನಸುಗಳನ್ನು ಕಂಡರೆ ಸಾಲದು. ಅವುಗಳನ್ನು ಸಾಧಿಸುವ  ನಿಟ್ಟಿನಲ್ಲಿ ಯೋಜಿತ ರೀತಿಯಲ್ಲಿ ಹೂಡಿಕೆ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ನಿರ್ದಿಷ್ಟ ಆದಾಯದ ಮಿತಿಯಲ್ಲಿಯೇ ತಮ್ಮ ಕೌಟುಂಬಿಕ ಬಜೆಟ್‌ ಅನ್ನು ಸಮರ್ಪಕವಾಗಿ ನಿಭಾಯಿಸುತ್ತ, ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತಿದ್ದರೆ ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಹಣಕಾಸು ಬಿಕ್ಕಟ್ಟಿನ ಸಂದರ್ಭಗಳನ್ನು ಸುಲಭವಾಗಿ ಎದುರಿಸಬಹುದು.

ಹೊಸ ವರ್ಷಾರಂಭದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹೊಸ ನಿರ್ಧಾರಕ್ಕೆ ಬರುತ್ತಾರೆ. ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಯಾರು ಸರಿಯಾದ ನಿರ್ಧಾರಕ್ಕೆ ಬರುವರೋ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ. ಹಾಗೆಂದು ಕಾರ್ಯಸಾಧ್ಯವಲ್ಲದ ಹಣಕಾಸು ನಿರ್ಧಾರಕ್ಕೆ ಬರುವುದೂ ಸರಿಯಲ್ಲ.ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಲ್ಲಿ ಬಿಟ್‌ಕಾಯಿನ್‌ ಆಕರ್ಷಣೆ ಹೆಚ್ಚುತ್ತಿದೆ. ಡಿಜಿಟಲ್‌ ಕರೆನ್ಸಿಗಳನ್ನುಮುಖ್ಯವಾಹಿನಿಗೆ ತರಲು ಅಮೆರಿಕದಲ್ಲಿ ಷೇರುಪೇಟೆಯಲ್ಲಿ ಅವುಗಳ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ವೇಳೆಗೆ ದಕ್ಷಿಣ ಕೊರಿಯಾ ಅವುಗಳ ವಹಿವಾಟಿನ ಮೇಲೆ ನಿಷೇಧ ಹೇರಲು ಮುಂದಾಗಿದೆ. ನಮ್ಮಲ್ಲಿ ಇನ್ನೂ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಬಳಿಯಲ್ಲಿ ಹೆಚ್ಚುವರಿ ಹಣ ಇದ್ದವರು ಹೂಡಿಕೆ ಮಾಡಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಇಂತಹ ಕರೆನ್ಸಿಗಳು ಹೂಡಿಕೆದಾರರನ್ನು ಎಲ್ಲಿಗೆ ಕರೆದೊಯ್ಯಲಿವೆ ಎನ್ನುವುದು ಸದ್ಯಕ್ಕಂತೂ ಸ್ಪಷ್ಟವಿಲ್ಲ.

ಜನಸಾಮಾನ್ಯರು, ನಿರ್ದಿಷ್ಟ ತಿಂಗಳ ಆದಾಯ ಇದ್ದವರು ನಿಯಮಿತವಾಗಿ ಹಣ ಉಳಿಸುವ ಮತ್ತು ಹಣಕಾಸು ಯೋಜನೆಗಳಲ್ಲಿ ಹಣ ತೊಡಗಿಸುವ ಪ್ರವೃತ್ತಿ ರೂಢಿಸಿಕೊಂಡರೆ ದೀರ್ಘಾವಧಿಯಲ್ಲಿ ಖಂಡಿತವಾಗಿಯೂ ವ್ಯಕ್ತಿಗೆ, ಕುಟುಂಬಕ್ಕೆ ಒಳಿತಾಗುವುದರಲ್ಲಿ ಸಂದೇಹವೇ ಇಲ್ಲ.   ಹೊಸ ವರ್ಷದ ಆರಂಭದಲ್ಲಿ  ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅನೇಕ ಸಂಗತಿಗಳನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.

ಹಣ ಹೂಡಿಕೆ ಹವ್ಯಾಸ: ಒಂದು ಬಾರಿಗೆ ದೊಡ್ಡ ಮೊತ್ತವನ್ನು ಒಂದೆಡೆಯೇ ಹೂಡಿಕೆ ಮಾಡುವ ಬದಲಿಗೆ, ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಆರಂಭದಲ್ಲಿ ಮೊತ್ತ ಸಣ್ಣದಿದ್ದರೂ ಪರವಾಗಿಲ್ಲ, ಕ್ರಮೇಣ ಅದನ್ನು ಹೆಚ್ಚಿಸುತ್ತ ಹೋಗಬಹುದು. ಪ್ರತಿ ವರ್ಷ ಶೇ 10 ರಿಂದ ಶೇ 15ರಷ್ಟು ಹೆಚ್ಚಿಸಬಹುದು. ಇದರಿಂದ ಕಾಲಾನಂತರದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಸಾಧ್ಯವಾಗಲಿದೆ.

ಹಣಕಾಸು ಗುರಿ: ಸಣ್ಣ ಮೊತ್ತದ ವ್ಯವಸ್ಥಿತ ಹೂಡಿಕೆಗೆ ಮನಸ್ಸು ಮಾಡುವಾಗ, ಹಣಕಾಸು ಗುರಿ ನಿಗದಿಪಡಿಸಲು ಮರೆಯಬಾರದು. ಹಣ ಹೂಡಿಕೆಯ ಗುರಿ ನಿಗದಿಪಡಿಸದೆ ಯಾವುದೇ ಬಗೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಬಾರದು.

ಕುಟುಂಬದವರ ಪಾಲ್ಗೊಳ್ಳುವಿಕೆ: ದುಡಿಯುವ ವ್ಯಕ್ತಿಯ ಆದಾಯವು ಕುಟುಂಬದ ಸದಸ್ಯರ ಅಗತ್ಯಗಳನ್ನು ಈಡೇರಿಸಲು ವೆಚ್ಚವಾಗುವುದರಿಂದ, ಉಳಿತಾಯ ಮತ್ತು ಹಣ ಹೂಡಿಕೆಯ ನಿರ್ಧಾರಗಳ ಬಗ್ಗೆಯೂ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲು ಮರೆಯಬಾರದು. ನಿರ್ಧಾರ ಕೈಗೊಳ್ಳುವಾಗ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಿಂದ, ಹೂಡಿಕೆ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಕಷ್ಟವಾಗಲಾರದು.

ಹೂಡಿಕೆಗಳಿಗೆ ಸೂಕ್ತ ಹೆಸರು: ಮಕ್ಕಳ ಶಿಕ್ಷಣ, ಮದುವೆ ಮತ್ತಿತರ ಉದ್ದೇಶಗಳಿಗೆ ಮಾಡುವ ಹಣ ಹೂಡಿಕೆಗಳಿಗೆ ಮಗ ಅಥವಾ ಮಗಳ ಹೆಸರಿನ ಶಿಕ್ಷಣ, ಮದುವೆ ಹೂಡಿಕೆ ಹಣ ಎಂದು ನಿರ್ದಿಷ್ಟವಾಗಿ ಗುರುತಿಸುವುದನ್ನು ರೂಢಿಸಿಕೊಳ್ಳಬಹುದು. ನಿವೃತ್ತಿಯ ಬದುಕಿಗೆ ಉಳಿತಾಯ: ಹಣಕಾಸು ನಿರ್ಧಾರಗಳ ಪೈಕಿ ನಿವೃತ್ತಿ ನಂತರದ ಬದುಕಿನ ಆಸರೆಗಾಗಿ ಹೆಚ್ಚು ಉಳಿತಾಯ ಮಾಡುವುದಕ್ಕೆ ಆದ್ಯತೆ ನೀಡಬೇಕು. ಬೇರೆ, ಬೇರೆ ವಿಧಾನಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಬೇಕು.

ಕ್ರೆಡಿಟ್‌ ಕಾರ್ಡ್‌ ಸಾಲ ಪಾವತಿ: ಯಾವುದೇ ಬಗೆಯ ಸಾಲಗಳಿಗಿಂತ ಕ್ರೆಡಿಟ್‌ ಕಾರ್ಡ್‌ಗಳ ಸಾಲ ಮರುಪಾವತಿಗೆ ಮೊದಲ ಆದ್ಯತೆ ನೀಡಬೇಕು. ಇಂತಹ ಸಾಲ ಮತ್ತು ಬಡ್ಡಿ ದುಬಾರಿಯಾಗಿ ಪರಿಣಮಿಸುವುದರಿಂದ ಅವುಗಳ ಹೊರೆಯಿಂದ ಪಾರಾಗಲು ಆದ್ಯತೆ ನೀಡಲು ಮರೆಯಬಾರದು.

ಸುರಕ್ಷಿತ ಮ್ಯುಚುವಲ್‌ ಫಂಡ್ಸ್‌: ಹಣ ಹೂಡಿಕೆ ಯೋಜನೆಗಳ ಪೈಕಿ ಮ್ಯೂಚುವಲ್‌ ಫಂಡ್ಸ್‌ಗಳು ಹೆಚ್ಚು ಸುರಕ್ಷಿತ.  ಈ ಫಂಡ್ಸ್‌ಗಳು ಹೆಚ್ಚಿನ ಪ್ರಮಾಣದ ಲಾಭ ತರುತ್ತವೆ ಎಂದು ಹಣಕಾಸು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಇಂತಹ ಫಂಡ್ಸ್‌ಗಳಲ್ಲಿ ಹಲವಾರು ಬಗೆಗಳಿದ್ದು, ಅವುಗಳ ಪೈಕಿ ಷೇರುಗಳಲ್ಲಿ ಹೂಡಿಕೆ ಮಾಡುವುದೂ ಒಂದು. ಷೇರು ಹೂಡಿಕೆ ವಿಷಯದಲ್ಲಿ ನಿಧಿ ನಿರ್ವಾಹಕರು ಪರಿಣತರಾಗಿರುತ್ತಾರೆ. ಹೂಡಿಕೆದಾರರ ಹಣಕ್ಕೆ ಸೂಕ್ತ ಪ್ರತಿಫಲ ದೊರಕಿಸಲು ಇವರು ಪ್ರಯತ್ನಿಸುತ್ತಾರೆ.

‘ಷೇರು ಮ್ಯೂಚುವಲ್‌ ಫಂಡ್‌’ಗಳು ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯ ವಿವಿಧ ವಲಯಗಳ ಸೂಚ್ಯಂಕಗಳ ಪೈಕಿ ನಿರಂತರವಾಗಿ ಉತ್ತಮ ಸಾಧನೆ ದಾಖಲಿಸುತ್ತವೆ. ಸಂವೇದಿ ಸೂಚ್ಯಂಕ ಕುಸಿದಾಗಲೂ, ‘ಷೇರುಗಳಲ್ಲಿ ಹಣ ತೊಡಗಿಸಿದ ಮ್ಯೂಚುವಲ್‌ ಫಂಡ್‌’ಗಳು ಸರಾಸರಿ ಲಾಭ ನೀಡುತ್ತವೆ.  ಮ್ಯೂಚುವಲ್‌ ಫಂಡ್‌ ಎನ್ನುವುದು ವೃತ್ತಿಪರತೆಯಿಂದ ನಿರ್ವಹಿಸುವ ಹೂಡಿಕೆ ಯೋಜನೆಯಾಗಿದೆ. ಸಂಪತ್ತು ನಿರ್ವಹಣಾ ಸಂಸ್ಥೆಗಳು ಈ ಯೋಜನೆಗಳನ್ನು ನಿರ್ವಹಿಸುತ್ತವೆ. ಹೂಡಿಕೆದಾರರ ಹಣವನ್ನು ಷೇರು, ಬಾಂಡ್‌ ಮತ್ತು ಇತರ ಸಾಲ ಪತ್ರಗಳಲ್ಲಿ ತೊಡಗಿಸುತ್ತವೆ.

ಹೂಡಿಕೆದಾರರು ಮ್ಯೂಚುವಲ್ ಫಂಡ್ಸ್‌ಗಳ ’ಯುನಿಟ್ಸ್‌’ಗಳನ್ನು ಖರೀದಿಸಬಹುದು. ಇದು ಮ್ಯೂಚುವಲ್‌ ಫಂಡ್‌ನ ನಿರ್ದಿಷ್ಟ ಯೋಜನೆಯಲ್ಲಿನ ಹೂಡಿಕೆದಾರರ ಪಾಲನ್ನು ಪ್ರತಿನಿಧಿಸುತ್ತದೆ. ಈ ಯುನಿಟ್ಸ್‌ಗಳನ್ನು ಖರೀದಿಸಬಹುದು ಅಥವಾ ಫಂಡ್ಸ್‌ಗೆ ಮರಳಿಸಲೂ ಅವಕಾಶ ಇರುತ್ತದೆ.

ಷೇರುಗಳಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ, ಕಂಪನಿಯೊಂದರ ಷೇರುಗಳನ್ನು ಖರೀದಿಸುವುದು ಎಂದರ್ಥ. ಕಂಪನಿಯ ಲಾಭ – ನಷ್ಟ ಆಧರಿಸಿ ಈ ಹೂಡಿಕೆಯು ಲಾಭ ನಷ್ಟ ಒಳಗೊಂಡಿರುತ್ತದೆ. ಇಂತಹ ನಿಧಿಗಳಲ್ಲಿ ತೊಡಗಿಸಿದ ಹಣವನ್ನು ಷೇರುಗಳ ಸಮೂಹ, ಬಾಂಡ್ಸ್ ಮತ್ತು ಸಾಲಪತ್ರಗಳಲ್ಲಿ ತೊಡಗಿಸಲಾಗಿರುತ್ತದೆ. ಒಂದು ಷೇರು ನಷ್ಟ ಉಂಟು ಮಾಡಿದರೆ ಇತರ ಷೇರುಗಳಲ್ಲಿನ ಲಾಭವು ನಷ್ಟ ಭರ್ತಿ ಮಾಡಿಕೊಡುತ್ತದೆ. ಲಾಭವನ್ನೂ ತಂದುಕೊಡಬಹುದು.

ಕೆಲವರು ಭೂಮಿ, ಕಟ್ಟಡ, ಚಿನ್ನದಂತಹ ಭೌತಿಕ ಸ್ವರೂಪದ ಸ್ಥಿರ ಸಂಪತ್ತಿನಲ್ಲಿ (tangible asset ) ಹಣ ತೊಡಗಿಸುತ್ತಾರೆ. ಇವುಗಳಿಂದ ಸ್ಥಿರ ವರಮಾನ ಬರುತ್ತದೆ. ಷೇರುಗಳಲ್ಲಿನ ಹೂಡಿಕೆ ಸ್ಥಿರ ಸಂಪತ್ತು ಆಗಿರುವುದಿಲ್ಲ. ಏರಿಳಿತ ಇರುತ್ತದೆ. ವರಮಾನವೂ ಸ್ಥಿರವಾಗಿರುವುದಿಲ್ಲ. ಟ್ರೆಸರಿ ಬಿಲ್‌, ಸರ್ಕಾರಿ ಸಾಲಪತ್ರಗಳಲ್ಲಿ ಅಲ್ಪಾವಧಿಯಲ್ಲಿ ತೊಡಗಿಸುವುದರಲ್ಲಿ (Liquid funds) ನಷ್ಟದ ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಪರಿಪಕ್ವ ಅವಧಿ 91 ದಿನಗಳಿಗಿಂತ ಕಡಿಮೆ ಇರುತ್ತದೆ.‌ ಆದರೆ, ಮ್ಯೂಚುವಲ್‌ ಫಂಡ್‌ ಇವೆಲ್ಲವುಗಳಿಗಿಂತ ಭಿನ್ನವಾಗಿರುತ್ತದೆ. ಇದೊಂದು ದೀರ್ಘಾವಧಿಯ, ಕನಿಷ್ಠ 3 ರಿಂದ 5 ವರ್ಷಗಳವರೆಗಿನ ಹೂಡಿಕೆಯಾಗಿರುತ್ತದೆ.

ಹಣಕಾಸು ಸಾಕ್ಷರತೆ

ಹಣ ಖರ್ಚು – ವೆಚ್ಚ, ಉಳಿತಾಯ, ಹೂಡಿಕೆ ಮತ್ತಿತರ ವಿಷಯಗಳಲ್ಲಿ ಯಾವುದೇ ಒಂದು ನಿರ್ಧಾರಕ್ಕೆ ಬರುವ ಮುನ್ನ, ಹಣಕಾಸು ಸಾಕ್ಷರತೆ ಹೊಂದುವ ಬಗ್ಗೆ ನಿರ್ಧಾರಕ್ಕೆ ಬರುವುದು ಪ್ರಮುಖ ಆರ್ಥಿಕ ನಿರ್ಧಾರವಾಗಿರುತ್ತದೆ.

ತಿಂಗಳ ಮತ್ತು ನಿರ್ದಿಷ್ಟ ಆದಾಯಕ್ಕೆ ತಕ್ಕಂತೆ ಖರ್ಚು ವೆಚ್ಚಗಳ ಬಜೆಟ್‌ ಸಿದ್ಧಪಡಿಸುವುದು, ಅದಕ್ಕೆ ಬದ್ಧವಾಗಿರುವುದು ಬಹುತೇಕರ ಪಾಲಿಗೆ ಅತಿದೊಡ್ಡ ಸವಾಲಾಗಿರುತ್ತದೆ. ಹೀಗಾಗಿ ವಾಸ್ತವದ ನೆಲೆಗಟ್ಟಿನ ಮೇಲೆ ಬಜೆಟ್‌ ರೂಪಿಸಬೇಕು.

ಹಣ ವೆಚ್ಚ ಮಾಡುವಾಗ, ವೆಚ್ಚಕ್ಕೆ ಕಡಿವಾಣ ಹಾಕುವ ಬದಲಿಗೆ ಮೊದಲು ಆದ್ಯತೆಗಳ ಪಟ್ಟಿಯನ್ನು ತಯಾರಿಸಬೇಕು.

ವೆಚ್ಚಕ್ಕೆ ಕಡಿವಾಣ

ಯಾರೇ ಆಗಲಿ ತಮ್ಮ ವೆಚ್ಚಗಳಿಗೆ ಮೊದಲು ಕಡಿವಾಣ ವಿಧಿಸಬೇಕು. ಇದರಿಂದ ವ್ಯಕ್ತಿಯ ಒಟ್ಟಾರೆ ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಹಣ ವೆಚ್ಚವಾಗುವುದರ ಮೇಲೆ ನಿಗಾ ಇಡುವುದರ ಮೂಲಕ, ತಿಂಗಳಾಂತ್ಯದಲ್ಲಿ ಅನಗತ್ಯವಾಗಿ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವುದರ ಮಾಹಿತಿ ಸಿಗುತ್ತದೆ.

ವ್ಯಕ್ತಿಯೊಬ್ಬ ಅನಗತ್ಯ ವೆಚ್ಚಗಳಿಗೆ ಕಡಿವಾಣ ವಿಧಿಸಲು ಬಯಸಿದ್ದರೆ, ಆ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಲು ಮರೆಯಬಾರದು.

ತುರ್ತು ನಿಧಿ

ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿ ಒಂದಷ್ಟು ಮೊತ್ತದ ಉಳಿತಾಯ ಹೊಂದಿರಬೇಕು. ಬಳಿಯಲ್ಲಿ ಅಷ್ಟಿಷ್ಟು ನಗದು ಹಣ ಹೊಂದಿಲ್ಲದವರು, ಹೊಸ ವರ್ಷದಲ್ಲಿ ‘ತುರ್ತು ನಿಧಿ’ ರೂಪದಲ್ಲಿ ಒಂದಿಷ್ಟು ಹಣ ಉಳಿಸಲು ಮುಂದಾಗಬೇಕು.

ಷೇರುಪೇಟೆ ವಹಿವಾಟು ಗಮನಾರ್ಹ ಚೇತರಿಕೆ ಕಾಣುತ್ತಿದೆ. ಅರ್ಥ ವ್ಯವಸ್ಥೆಯಲ್ಲಿ ಕಂಡು ಬರಲಿರುವ ಪ್ರಗತಿ ಮತ್ತು ಸರ್ಕಾರ ಕೈಗೊಳ್ಳಲಿರುವ ಆರ್ಥಿಕ ಸುಧಾರಣಾ ಕ್ರಮಗಳು ಷೇರು ಮಾರುಕಟ್ಟೆಯನ್ನು  ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ. ವಿಲಾಸಿ ಸರಕು ತಯಾರಿಕಾ ಸಂಸ್ಥೆಗಳಾದ ವಾಹನ ತಯಾರಿಕೆ, ಮೂಲ ಸೌಕರ್ಯ ರಂಗದ ಷೇರುಗಳೂ ಉತ್ತಮ ಲಾಭ ತಂದು ಕೊಡಲಿವೆ. ಇತ್ತೀಚಿನ ದಿನಗಳಲ್ಲಿ ಚಿನ್ನದಲ್ಲಿನ ಹೂಡಿಕೆ ಗರಿಷ್ಠ ಪ್ರಮಾಣದ ಲಾಭ ತಂದುಕೊಡುತ್ತಿಲ್ಲ ಎನ್ನುವುದು ಗಮನದಲ್ಲಿ ಇರಲಿ.

ಉತ್ತಮ ಹಣಕಾಸು ಯೋಜನೆ

* ಸದ್ಯದ ಹಣಕಾಸು ಪರಿಸ್ಥಿತಿ ಆಧರಿಸಿ ಭವಿಷ್ಯದ ಗುರಿ ನಿಗದಿಪಡಿಸಬೇಕು. ಗುರಿಗಳ ಪ್ರತಿಯೊಂದು ವಿವರ ಲೆಕ್ಕಕ್ಕೆ ತೆಗೆದುಕೊಳ್ಳಬೇಕು

* ಹಣ ಹೂಡಿಕೆ ನಿರ್ಧಾರವು 2, 5, 10, 20 ವರ್ಷಗಳ ನಿರ್ದಿಷ್ಟ ಕಾಲಮಿತಿ ಒಳಗೊಂಡಿರಬೇಕು.

* ಹಣದುಬ್ಬರವನ್ನೂ ಪರಿಗಣಿಸಲು ಮರೆಯಬಾರದು. ಸದ್ಯಕ್ಕೆ ₹ 100ಗೆ ಖರೀದಿಸುವ ಸರಕನ್ನು ಹಲವು ವರ್ಷಗಳ ನಂತರ ಖರೀದಿಸಲು ₹ 1,000 ಬೇಕಾಗಬಹುದು ಎಂಬುದನ್ನು ಮರೆಯಬಾರದು.

* ಅನಿರೀಕ್ಷಿತವಾಗಿ ಘಟಿಸುವ ಆಕಸ್ಮಿಕ ಘಟನೆಗಳನ್ನು ಎದುರಿಸಲು ತುರ್ತು ನಿಧಿ ಹೊಂದಿರಲು ಮರೆಯಬಾರದು.

* ಹಣಕಾಸಿನ ಗುರಿಯನ್ನು ತಿಂಗಳ, ವಾರ್ಷಿಕ ಎಂದು ವಿಂಗಡಿಸಬೇಕು. ಇದು ಹಣ ಹೂಡಿಕೆಗೆ ನೆರವಾಗಲಿದ್ದು, ಸುಲಭವಾಗಿ ಗುರಿ ಸಾಧಿಸಬಹುದು.* ಆದಾಯದ ಮಿತಿಗಿಂತ ಹೂಡಿಕೆ ಮಿತಿ ಕಡಿಮೆ ಇರುವಂತೆ ಎಚ್ಚರವಹಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.