ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ಫೊಸಿಸ್‌ ಮುನ್ನಡೆಸಲು ಉತ್ಸುಕ’

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು/ಹೈದರಾಬಾದ್‌: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ತ್ವರಿತಗತಿಯ ಬದಲಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಂಸ್ಥೆಯನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ’ ಎಂದು ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪ‍ಕ ನಿರ್ದೇಶಕರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ಅವರು ಸಿಬ್ಬಂದಿಯೊಟ್ಟಿಗೆ ಮಾತುಕತೆ ನಡೆಸಿದರು. ಕ್ಯಾಂಪಸ್‌ನಲ್ಲಿ ಸುತ್ತಾಡುತ್ತಿದ್ದಾಗ ಕೆಲವು ಸಿಬ್ಬಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.

ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ ಅವರು, ‘ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿಭಾಯಿಸಬೇಕಿದೆ. ಅದಕ್ಕೆ ಅಗತ್ಯವಿರುವ ಕೌಶಲದೊಂದಿಗೆ ಸಿದ್ಧರಾಗಿರಿ’ ಎಂದು ಕರೆ ನೀಡಿದರು.

2017ರಲ್ಲಿ ಸಹ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ನಡೆಯುತ್ತಿದ್ದ ಬೋರ್ಡ್‌ರೂಂ ಕಲಹದಿಂದ ವಿಶಾಲ್ ಸಿಕ್ಕಾ ಆಗಸ್ಟ್‌ 18ರಂದು ಹಠಾತ್ತಾಗಿ ರಾಜೀನಾಮೆ ನೀಡಿದ್ದರು. ಆ ಬಳಿಕ ಮೂರು ತಿಂಗಳಕಾಲ ಹುಡುಕಾಟ ನಡೆಸಿ ಫ್ರಾನ್ಸ್‌ನ ಕ್ಯಾಪ್‌ ಜೆಮಿನಿ ಸಂಸ್ಥೆಯಲ್ಲಿ ಸಮೂಹದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದ ಸಲೀಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಡಿ. 2 ರಂದು ಅವರ ನೇಮಕವನ್ನು ಘೋಷಣೆ ಮಾಡಲಾಗಿತ್ತು.

ಸಂಸ್ಥೆಗೆ ಅನುಕೂಲ; ಪೈ: ‘ಸಲೀಲ್‌ ಅವರು ಇನ್ಫೊಸಿಸ್‌ ಸೇರುತ್ತಿರುವುದರಿಂದ ಸಂಸ್ಥೆಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

‘ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇರುವ ಅವರು, ಸೇವಾ ವಹಿವಾಟು ಮತ್ತು ಬದಲಾಗುತ್ತಿರುವ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದಾರೆ’ ಎಂದು ಹೇಳಿದ್ದಾರೆ.

‘ಪಾರೇಖ್‌ ಅವರು ಬೆಂಗಳೂರಿನಲ್ಲಿಯೇ ಇರುವುದರಿಂದ ಆಡಳಿತ ಮಂಡಳಿ, ಸಿಬ್ಬಂದಿಯೊಂದಿಗೆ ಉತ್ತಮ ಸಂಪರ್ಕ ಕಾಯ್ದುಕೊಳ್ಳಬಹುದು. ಹೊಸ ಒಪ್ಪಂದಗಳಿಗೆ ಅನುಮತಿ ಪಡೆಯಲು ಗ್ರಾಹಕರು ಅವರನ್ನು ಖುದ್ದು ಭೇಟಿ ಮಾಡಬಹುದು’ ಎಂದಿದ್ದಾರೆ.

‘ಈ ಹಿಂದೆ ಕ್ಯಾಪ್‌ಜೆಮಿನಿಯಲ್ಲಿ ಕೆಲಸ ಮಾಡಿರುವುದರಿಂದ ಸೇವಾ ಸಂಸ್ಥೆಯೊಂದರ ವಹಿವಾಟಿನ ರೀತಿ, ತಂಡವನ್ನು ಮುನ್ನಡೆಸಿಕೊಂಡು ಹೋಗುವ ಕಲೆ ಹಾಗೂ ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಅಂಶಗಳನ್ನು ಬಹಳ ಚನ್ನಾಗಿ ಕರಗತ ಮಾಡಿಕೊಂಡಿದ್ದಾರೆ’ ಎಂದು ಪಾರೇಖ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಸಿಕ್ಕಾ ವಿರುದ್ಧ ಟೀಕೆ: ‘ಸಿಕ್ಕಾ ಅವರು ಸಿಇಒ ಆಗಿದ್ದಾಗ ಬಹುಪಾಲು ಅಮೆರಿಕದಲ್ಲಿ ಇದ್ದುಕೊಂಡೇ ಕಾರ್ಯನಿರ್ವಹಿಸುತ್ತಿದ್ದರು. ಇದರಿಂದಾಗಿ ದೇಶದಲ್ಲಿರುವ ಸಿಬ್ಬಂದಿಯೊಂದಿಗೆ ಸರಿಯಾದ ರೀತಿಯಲ್ಲಿ ಸಂಪರ್ಕ ಸಾಧ್ಯವಾಗಿರಲಿಲ್ಲ’ ಎಂದು ಸಿಕ್ಕಾ ಅವರ ಕಾರ್ಯವೈಖರಿಯನ್ನು ಮೋಹನದಾಸ್‌ ಪೈ ಟೀಕಿಸಿದ್ದಾರೆ.

ಸವಾಲಿನ ಹಾದಿ
ಸಲೀಲ್‌ ಅವರ ಸಿಇಒ ಹಾದಿ ಹಲವು ಸವಾಲುಗಳಿಂದ ಕೂಡಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಸಹ ಸ್ಥಾಪಕರು ಮತ್ತು ಆಡಳಿತ ಮಂಡಳಿ ಮಧ್ಯೆ ಸಾಮರಸ್ಯ ಕಾಯ್ದುಕೊಂಡು ಸಂಸ್ಥೆಯನ್ನು ಪ್ರಗತಿ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಬಹುದೊಡ್ಡ ಸವಾಲು ಅವರ ಮುಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT