ಗ್ರಂಥಾಲಯ ಇಲಾಖೆ ಅಕ್ರಮ ನೇಮಕಾತಿ: ನಕಲಿ ಅಂಕ ಪಟ್ಟಿ ಸಲ್ಲಿಸಿದವರಲ್ಲಿ ಸೂಪರಿಂಟೆಂಡೆಂಟ್‌ ಮಗಳು!

7

ಗ್ರಂಥಾಲಯ ಇಲಾಖೆ ಅಕ್ರಮ ನೇಮಕಾತಿ: ನಕಲಿ ಅಂಕ ಪಟ್ಟಿ ಸಲ್ಲಿಸಿದವರಲ್ಲಿ ಸೂಪರಿಂಟೆಂಡೆಂಟ್‌ ಮಗಳು!

Published:
Updated:
ಗ್ರಂಥಾಲಯ ಇಲಾಖೆ ಅಕ್ರಮ ನೇಮಕಾತಿ: ನಕಲಿ ಅಂಕ ಪಟ್ಟಿ ಸಲ್ಲಿಸಿದವರಲ್ಲಿ ಸೂಪರಿಂಟೆಂಡೆಂಟ್‌ ಮಗಳು!

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಂಥಾಲಯ ಇಲಾಖೆಯ ಸಹಾಯಕ ಹುದ್ದೆ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳಲ್ಲಿ ಅದೇ ಇಲಾಖೆಯ ಸೂಪರಿಂಟೆಂಡೆಂಟ್‌ ಮಗಳೂ ಸೇರಿದ್ದಾರೆ!

ಇಲಾಖೆಯ 123 ಗ್ರಂಥಾಲಯ ಸಹಾಯಕರು, 27 ಜವಾನ ಮತ್ತು 8 ರಾತ್ರಿ ಕಾವಲುಗಾರ ಸೇರಿ ಒಟ್ಟು 158 ಗ್ರೂಪ್‌ ‘ಡಿ’ ಹುದ್ದೆಗಳಿಗೆ 2008ರಲ್ಲಿ ನೇರ ನೇಮಕಾತಿ ನಡೆದಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಕಾರಣ ವಿಚಾರಣೆಗೆ ರಚಿಸಲಾದ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ (ಆಡಳಿತ) ಬೆಳ್ಳಶೆಟ್ಟಿ (ಈಗ ನಿವೃತ್ತ) ನೇತೃತ್ವದ ತಂಡ, ಸರ್ಕಾರಕ್ಕೆ ಸಲ್ಲಿಸಿದ ರಹಸ್ಯ ವರದಿಯಲ್ಲಿ ನೇಮಕಾತಿಗೊಂಡವರ ಪೈಕಿ 135 ಅಭ್ಯರ್ಥಿಗಳು ನಕಲಿ ದಾಖಲೆ ಕೊಟ್ಟಿರುವುದು ದೃಢಪಟ್ಟಿದೆ.

ಗ್ರಂಥಾಲಯ ಸಹಾಯಕ ಹುದ್ದೆಗೆ 7ನೇ ತರಗತಿ, ಜವಾನ ಮತ್ತು ರಾತ್ರಿ ಕಾವಲುಗಾರ ಹುದ್ದೆಗಳಿಗೆ 5ನೇ ತರಗತಿ ತೇರ್ಗಡೆ ಆಗಿರಬೇಕು ಎಂದು ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. ಗರಿಷ್ಠ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ನೇಮಕಾತಿ ಮಾಡಲಾಗಿತ್ತು. ಆದರೆ, ಈ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆ.ವಿ. ಸತ್ಯನಾರಾಯಣ ಎಂಬವರು ಲೋಕಾಯುಕ್ತಕ್ಕೆ ನೀಡಿದ ದೂರಿನ ಜೊತೆಗೆ, ಆರೋಪಗಳಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನೂ ಸಲ್ಲಿಸಿದ್ದಾರೆ.

‘ಸೂಪರಿಂಟೆಂಡೆಂಟ್‌ ಆಗಿದ್ದ ಆರ್‌. ಮುದರೆಡ್ಡಿ (ಈಗ ನಿವೃತ್ತ) ಮಗಳು ಆರ್‌.ಎಂ. ಪುಷ್ಪಾ (ನೇಮಕಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 76) ಸಾಮಾನ್ಯ ಮಹಿಳೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಅರ್ಜಿಯ ಜೊತೆ ಸಲ್ಲಿಸಿದ ಏಳನೇ ತರಗತಿಯ ಅಂಕ ಪಟ್ಟಿಯಲ್ಲಿ 600ಕ್ಕೆ 550 ಅಂಕ ಪಡೆದಿದ್ದಾರೆ ಎಂದು ನಕಲಿ ದಾಖಲೆ ಸಲ್ಲಿಸಿದ್ದಾರೆ. ಆದರೆ, ಆಕೆ ಸಲ್ಲಿಸಿದ ದಾಖಲೆಯಲ್ಲಿರುವ ಶಾಲೆಗೆ ತೆರಳಿ 7ನೇ ತರಗತಿಯ ಕ್ರೋಡೀಕೃತ ಅಂಕ ಪಟ್ಟಿ ಪರಿಶೀಲಿಸಿದಾಗ ಆ ಶಾಲೆ

ಯಲ್ಲಿ ಓದೇ ಇಲ್ಲ. ವಾಸ್ತವವಾಗಿ ಬೇರೊಂದು ಶಾಲೆಯಲ್ಲಿ 7ನೇ ತರಗತಿ ಓದಿದ್ದು, ಗಳಿಸಿದ್ದು ಕೇವಲ 246 ಅಂಕ’ ಎನ್ನುವ ಅಂಶ ವಿಚಾರಣಾ ತಂಡದ ವರದಿಯಲ್ಲಿದೆ!

ಗ್ರಂಥಾಲಯ ಸಹಾಯಕ ಹುದ್ದೆಗೆ ಆಯ್ಕೆಯಾದ ಇನ್ನೊಬ್ಬ ಅಭ್ಯರ್ಥಿ ರಾಜಶೇಖರ ಚಂದ್ರಪ್ಪ ಹತ್ತರಕಿ (ಕ್ರಮ ಸಂಖ್ಯೆ 13) ಸಲ್ಲಿಸಿದ ಅಂಕ ಪಟ್ಟಿಯಲ್ಲಿ 900ಕ್ಕೆ 867 ಅಂಕ ಪಡೆದಿರುವ ಮಾಹಿತಿ ಇದೆ. ಆದರೆ, ವಿಚಾರಣೆ ವೇಳೆ ಹತ್ತರಕಿಗೆ ಶಾಲೆಯ ಸಿಬ್ಬಂದಿ ನಕಲಿ ಅಂಕ ಪಟ್ಟಿ ನೀಡಿರುವುದು ಪತ್ತೆಯಾಗಿದೆ. ಶಾಲಾ ದಾಖಲಾತಿಯಲ್ಲಿ ಹೊಸತಾಗಿ ಹೆಸರು ಸೇರಿಸಿ ಅಂಕಪಟ್ಟಿ ನೀಡಲಾಗಿದೆ. ಉದ್ಯೋಗಕ್ಕಾಗಿ ಅರ್ಜಿ ಜೊತೆ ಸಲ್ಲಿಸಿದ ದಾಖಲೆಯಲ್ಲಿರುವ ಶಾಲೆಯಲ್ಲಿ ಪರಿಶೀಲಿಸಿದಾಗ, ಆ ಶಾಲೆಯಲ್ಲಿ ಹತ್ತರಕಿ ಕಲಿತೇ ಇಲ್ಲ!

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ, ತಸ್ಲಿಮಾ ಬಾನು (ಆಯ್ಕೆ ಕ್ರಮ ಸಂಖ್ಯೆ 45) ಎಂಬ ಅಭ್ಯರ್ಥಿಯ ಬಯೋಡಾಟಾದಲ್ಲಿ ತಂದೆ ಹೆಸರು ಎಂ.ಡಿ. ಅಹ್ಮದ್‌ ಅಲಿ. ಆದರೆ, ವಿಚಾರಣಾ ತಂಡ ನಡೆಸಿದ ಪರಿಶೀಲನೆಯ ಆಕೆಯ ತಂದೆ ಹೆಸರು ಮೊಹ್ಮದ್‌ ಅಹ್ಮದ್‌ ಎಂದು ಖಚಿತವಾಗಿದ್ದು, ಶಾಲೆಯ ದಾಖಲೆಗಳಲ್ಲಿ ಹೊಸತಾಗಿ ಅಂಕಗಳನ್ನು ನಮೂದಿಸಿರುವುದು ಬಯಲಾಗಿದೆ. ಆಕೆ, ನಕಲಿ ಅಂಕ ಪಟ್ಟಿ ಸಲ್ಲಿಸಿ ಉದ್ಯೋಗಕ್ಕೆ ಸೇರಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಅವ್ಯವಹಾರ ನಡೆಸಿದ್ದಾರೆನ್ನಲಾದ ಗ್ರಂಥಾಲಯ ಇಲಾಖೆ ಹಿಂದಿನ ನಿರ್ದೇಶಕ ಹೊಂಡದಕೇರಿ ಮತ್ತು ಸೂಪರಿಂಟೆಂಡೆಂಟ್‌ ಮುದರೆಡ್ಡಿ ಕರ್ತವ್ಯದಿಂದ ನಿವೃತ್ತಿ ಆಗಿರುವುದರಿಂದ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯ ಇಲ್ಲ. ಹೀಗಾಗಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆ ನಡೆಸುವಂತೆ ಬೆಂಗಳೂರು ನಗರ ವಿಭಾಗದ ಭ್ರಷ್ಟಾಚಾರ ನಿಗ್ರಹದ ದಳದ (ಎಸಿಬಿ) ಪೊಲೀಸ್‌ ಸೂಪರಿಂಟೆಂಡೆಂಟ್‌ಗೆ ಸೂಚಿಸಿದೆ.

ಜ. 31ರ ಒಳಗಾಗಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕು ಎಂದೂ ತಿಳಿಸಿದೆ.

ನಿರ್ದೇಶಕರ ಸಂಬಂಧಿ ನೌಕರಿಯಿಂದ ವಜಾ!

ಗ್ರಂಥಾಲಯ ನಿರ್ದೇಶಕರಾಗಿದ್ದ ಬಿ.ಎಸ್‌. ಹೊಂಡದಕೇರಿ ಅವರ ಸಮೀಪ ಸಂಬಂಧಿ ಎಚ್‌.ಆರ್‌. ಗೀತಾ ನಕಲಿ ಅಂಕಪಟ್ಟಿ ಸಲ್ಲಿಸಿ ನೌಕರಿ ಗಿಟ್ಟಿಸಿದ್ದಾರೆ ಎಂದು ಆರೋಪಿಸಿ, ಬಾಳಪ್ಪ ಬಡಕರಿಯಪ್ಪನವರ ಎಂಬುವವರು ಮಾಹಿತಿ  ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪಡೆದ ದಾಖಲೆಗಳ ಸಮೇತ ಇಲಾಖೆಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಇಲಾಖೆ, ‌ಬಳಿಕ ಆಕೆಯನ್ನು ನೌಕರಿಯಿಂದ ವಜಾಗೊಳಿಸಿತ್ತು.

ನೌಕರಿಗೆ ಅರ್ಜಿ ಸಲ್ಲಿಸುವಾಗ, ಬೆಂಗಳೂರಿನ ಜ್ಞಾನಜ್ಯೋತಿ ವಿದ್ಯಾಲಯದಲ್ಲಿ 7ನೇ ತರಗತಿ ಕಲಿತ ಅಂಕಪಟ್ಟಿಯನ್ನು ಗೀತಾ ಸಲ್ಲಿಸಿದ್ದರು. ಅದರಲ್ಲಿ ಆಕೆ 521 ಅಂಕ ಪಡೆದಿರುವ ಮಾಹಿತಿ ಇದೆ. ಆದರೆ, ವಾಸ್ತವವಾಗಿ ಸೊರಬ ತಾಲ್ಲೂಕಿನ ಮೂಡಿಯಲ್ಲಿರುವ ಎಚ್‌ಪಿಎಸ್‌ ಶಾಲೆಯಲ್ಲಿ ಅವರು 7ನೇ ತರಗತಿ ಓದಿದ್ದು, 331 ಅಂಕ ಪಡೆದಿದ್ದರು.

ಮುಖ್ಯಾಂಶಗಳು

* ವಿಚಾರಣಾ ತಂಡದಿಂದ ಅವ್ಯವಹಾರ ಬಹಿರಂಗ

* ನಿರ್ದೇಶಕ, ಸೂಪರಿಂಟೆಂಡೆಂಟ್‌ ವಿರುದ್ಧ ಮೊಕದ್ದಮೆ

* ಜ. 31ರ ಒಳಗಾಗಿ ವರದಿ ಸಲ್ಲಿಸಲು ನಿರ್ದೇಶನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry