ಸೋಮವಾರ, ಆಗಸ್ಟ್ 3, 2020
25 °C
ದಕ್ಷಿಣ ಆಫ್ರಿಕಾದಲ್ಲಿ ಭಾರತದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಸಿದ್ಧತೆ

ವೇಗಿಗಳಿಗೆ ನೆರವಾಗುವ ಪಿಚ್‌ ಸಿದ್ಧ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವೇಗಿಗಳಿಗೆ ನೆರವಾಗುವ ಪಿಚ್‌ ಸಿದ್ಧ?

ಕೇಪ್‌ಟೌನ್‌: ಇದೇ ಐದರಿಂದ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ಗಳನ್ನು ಸಿದ್ಧಪಡಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಾಗಿರುವುದು ಭಾರತ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಿರಂತರ ಒಂಬತ್ತು ಸರಣಿಗಳಲ್ಲಿ ಜಯ ಗಳಿಸಿರುವ ಭಾರತ ದಾಖಲೆಯ 10ನೇ ಸರಣಿ ಜಯದ ಕನಸು ಹೊತ್ತು ಇಲ್ಲಿಗೆ ಬಂದಿದೆ. ಆದರೆ ವೇಗದ ಬೌಲಿಂಗ್‌ಗೆ ನೆರವಾಗುವ ಪಿಚ್‌ಗಳಲ್ಲಿ ಪಂದ್ಯಗಳನ್ನು ಗೆಲ್ಲುವುದು ವಿರಾಟ್ ಕೊಹ್ಲಿ ಬಳಗಕ್ಕೆ ಸವಾಲಾಗಲಿದೆ.

ಇಲ್ಲಿಯ ವರೆಗೆ ಭಾರತ ಗೆದ್ದಿರುವ ಸರಣಿಗಳ ಬಹುತೇಕ ಪಂದ್ಯಗಳು ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್‌ಗಳಲ್ಲಿ ನಡೆದಿವೆ. ಆದರೆ ಕೇಪ್‌ಟೌನ್‌, ಸೆಂಚುರಿಯನ್‌ ಮತ್ತು ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಪಂದ್ಯಗಳ‌ಲ್ಲಿ ಗೆಲ್ಲಬೇಕಾದರೆ ವಿಭಿನ್ನ ತಂತ್ರಗಳನ್ನು ಅನುಸರಿಸಬೇಕಾದ ಅನಿವಾರ್ಯ ಸ್ಥಿತಿ ಈಗ ಬಂದೊದಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ವರೆಗೆ ಆಡಿದ 17 ಪಂದ್ಯಗಳ ಪೈಕಿ ಎರಡರಲ್ಲಿ ಮಾತ್ರ ಭಾರತ ಗೆದ್ದಿದೆ. ಈ ಅಂಕಿ ಅಂಶಗಳು ಭಾರತದ ಭರವಸೆಗೆ ಇನ್ನಷ್ಟು ಪೆಟ್ಟು ನೀಡಿವೆ. ಆದರೆ ಈಗಿನ ತಂಡದಲ್ಲಿರುವವರ ಪೈಕಿ 13 ಮಂದಿ ಈ ಹಿಂದೆ ದಕ್ಷಿಣ ಆ‍ಫ್ರಿಕಾದಲ್ಲಿ ಆಡಿದ ಅನುಭವ ಹೊಂದಿರುವುದು ತಂಡದ ಭರವಸೆಯನ್ನು ಹೆಚ್ಚಿಸಿದೆ.

‘ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ರೀತಿಯ ಸವಾಲನ್ನು ಎದುರಿಸಲು ತಂಡ ಸಜ್ಜಾಗಿದೆ. ಹಿಂದೆ ಭಾರತದ ಆಟಗಾ ರರಿಗೆ ಇಲ್ಲಿ ಆಡುವುದು ಕಷ್ಟವಾಗಿತ್ತು. ಆದರೆ ಈಗ ಇಲ್ಲಿನ ಪಿಚ್‌ಗಳಿಗೆ ಹೊಂದಿಕೊಂಡಿದ್ದಾರೆ. ಭಾರತಕ್ಕೆ ಈಗ ಎಲ್ಲ ಪಂದ್ಯಗಳೂ ತವರಿನ ಪಂದ್ಯಗಳಿಗೆ ಸಮಾನ. ಎಲ್ಲ ಎದುರಾಳಿಗಳೂ ಒಂದೇ ರೀತಿ. ಸಂದರ್ಭಕ್ಕೆ ತಕ್ಕಂತೆ ಆಡಬೇಕಾದದ್ದು ಅನಿವಾರ್ಯ. ಇದಕ್ಕೆ ಆಟಗಾರರು ಬದ್ಧವಾಗಿರಬೇಕು. ಅದರಲ್ಲಿ ರಾಜಿ ಇಲ್ಲ’ ಎಂದು ತಂಡದ ಕೋಚ್‌ ರವಿಶಾಸ್ತ್ರಿ ಹೇಳಿದರು.

‘ಇಂಗ್ಲೆಂಡ್‌ಗೆ ಹೋದರೆ ಸೀಮ್‌ ಬೌಲರ್‌ಗಳಿಗೆ ಅನುಕೂಲಕರ ಪಿಚ್‌ ಗಳಲ್ಲಿ ಆಡಬೇಕಾಗುತ್ತದೆ. ಭಾರತದಲ್ಲಿ ಚೆಂಡು ತಿರುವು ಪಡೆಯುವ ಪಿಚ್‌ಗಳು ಹೆಚ್ಚು. ಯಾವುದೇ ತಂಡಗಳು ಅಲ್ಲಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಅದೇ ಆಟದ ತತ್ವ ಆಗಬೇಕು’ ಎಂದು ವಿವರಿಸಿದರು.

ಬಲ ವೃದ್ಧಿಸಿಕೊಂಡಿರುವ ಆತಿಥೇಯರು

ಐಸಿಸಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಈಗ ಬಲ ವೃದ್ಧಿಕೊಂಡಿದೆ. ಅನೇಕ ತಿಂಗಳುಗಳಿಂದ ತಂಡದಿಂದ ದೂರ ಉಳಿದಿದ್ದ ಎಬಿ ಡಿವಿಲಿಯರ್ಸ್ ಮರಳಿರುವುದು ಬ್ಯಾಟಿಂಗ್ ವಿಭಾಗದ ಶಕ್ತಿಯನ್ನು ಇಮ್ಮಡಿಗೊಳಿಸಿದೆ.

ಗಾಯದಿಂದ ಚೇತರಿಸಿಕೊಂಡಿರುವ ಡೇಲ್ ಸ್ಟೇನ್‌ ಗುಣಮುಖರಾಗಿರುವುದು ಮತ್ತು ದೀರ್ಘ ಕಾಲದಿಂದ ಅವರೊಂದಿಗೆ ಹೊಸ ಚೆಂಡನ್ನು ಹಂಚಿಕೊಳ್ಳುತ್ತಿರುವ ವೆರ್ನಾನ್ ಫಿಲ್ಯಾಂಡರ್‌ ತಂಡಕ್ಕೆ ವಾಪಸಾಗಿರುವುದು ವೇಗದ ಬೌಲಿಂಗ್‌ಗೆ ಬಲ ತುಂಬಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.