ಗುಳ್ಳವ್ವ –ಗೌರವ್ವ ಅವರಿಂದ ರೋಬೊ ಸುಂದರಿವರೆಗೆ!

7

ಗುಳ್ಳವ್ವ –ಗೌರವ್ವ ಅವರಿಂದ ರೋಬೊ ಸುಂದರಿವರೆಗೆ!

Published:
Updated:
ಗುಳ್ಳವ್ವ –ಗೌರವ್ವ ಅವರಿಂದ ರೋಬೊ ಸುಂದರಿವರೆಗೆ!

ಹುಬ್ಬಳ್ಳಿ, ಗದಗ, ರೋಣ, ಕೊಪ್ಪಳ, ಬಾಗಲಕೋಟೆ, ಕಲಬುರ್ಗಿ ಸೀಮೆಗಳ ಎಲ್ಲ ಊರುಗಳಲ್ಲಿ ಹಿಂದೆ ಬೆಳಿಗ್ಗೆ ಎದ್ದಕೂಡಲೆ ಯಾರೇ ಭೆಟ್ಟಿಯಾದರೂ ‘ಎದ್ರ್ಯಾ’ ಅಂತ ಕೇಳುತ್ತಿದ್ದರು. ನನಗೆ ವಿಚಿತ್ರ ಅನಿಸುತ್ತಿತ್ತು. ಅವರು ಎದ್ದೇ ಬಿಟ್ಟಿದ್ದಾರೆ. ಎದ್ದವರಿಗೆ ‘ಎದ್ರ್ಯಾ’ ಅಂತ ಕೇಳುವುದರಲ್ಲಿ ಏನು ಅರ್ಥ?

ಈ ನನ್ನ ಪ್ರಶ್ನೆಗೆ ಒಬ್ಬ ಮುದಿಯಜ್ಜಿ ಉತ್ತರ ಹೇಳಿದ್ದಳು- ‘ರಾತ್ರಿ ಮಕ್ಕೊಂಡೋರು ಸತ್ತೋರು ಇಬ್ರೂ ಸಮಾ. ಅದಕ್ಕ ಎದ್ರ್ಯಾ ಅಂತ ಕೇಳ್ತಾರು’. ಈ ಮಾತು ನಮ್ಮೆಲ್ಲರ ಹೊಸದಿನ, ಹೊಸ ಬದುಕು, ಹೊಸ ಹುಟ್ಟನ್ನು ಗಟ್ಟಿಗೊಳಿಸುತ್ತದೆ. ದಿನದಿನವೂ ಹೊಸದಿನ; ಅನುದಿನವೂ ಹೊಸ ವರುಷ!

ನಮ್ಮ ಓಣಿಯ ಮುಸಲ್ರು ಕೂಡ, ಬೆಳಿಗ್ಗೆ ಭೆಟ್ಟಿಯಾದರೆ ‘ಎದ್ರ್ಯಾ ಎಜ್ಜಾ’, ‘ಎದ್ರ್ಯಾ ಎಣ್ಣಾ’ ಅಂತ ಕೇಳುತ್ತಿದ್ದರು. ದಾರಿಯಲ್ಲಿ ಯಾರೇ ಭೆಟ್ಟಿಯಾದರೂ ‘ಶರಣ್ರಿ ಯಪ್ಪಾ’, ‘ಶರಣ್ರಿ ಶಿವಾ’ ಅನ್ನುತ್ತಿದ್ದರು. ಪರಸ್ಪರ ‘ಶರಣ್ರಿ’ ಅಂತ ಕೈಮುಗಿಯುತ್ತಿದ್ದರು.

ತಲತಲಾಂತರದ ಈ ಸಾಮಾಜಿಕ ಸಾಂಸ್ಕೃತಿಕ ಸಂಬಂಧ-ಸಂಪರ್ಕಗಳು ಸಂಪೂರ್ಣ ಕಡಕೊಂಡು ಕೊಪ್ಪರಿಸಿ ಬಿದ್ದವೋ ಅಂತ ಅನಿಸುತ್ತಿದೆ. ಕಾರಣ; ಬೆಂಗಳೂರಿನಂತಹ ಲಿಮಿಟೆಡ್ ಸಂಸ್ಕೃತಿ ಮತ್ತೆಲ್ಲಿಯಾದರೂ ಇದೆಯೇ ಅಂತ ಈಗೀಗ ಸಂಶಯ ಬರುತ್ತಿದೆ. ಕಾರಣ ಒಬ್ಬರು ನಮ್ಮ ಮನೆಯ ಪಕ್ಕದಲ್ಲೇ ಮೂರುವರ್ಷ ಇದ್ದು ಹೋದರು.

ಅವರ ಹೆಸರು ನಮಗೆ ಗೊತ್ತಾಗಲೇ ಇಲ್ಲ. ನಮ್ಮ ಹೆಸರು ಅವರಿಗೆ ಗೊತ್ತಾಗಲೇ ಇಲ್ಲ! ಆಕಸ್ಮಿಕವಾಗಿಯೂ ಅವರು-ನಾವು ಒಮ್ಮೆಯೂ ಮಾತಾಡಲೇ ಇಲ್ಲ. ಇಂಥ ಪುಷ್ಕಳ ಉದಾಹರಣೆ ಬೆಂಗಳೂರಲ್ಲಿ ಹೆಕ್ಕಿ ಒಕ್ಕಿ ಕೊಡಬಹುದು. ನಮಗೆ ನಮ್ಮದೇ ಮನೆ ಗೋರ್‍ಯಾಳವಾಗಿ ಕಾಡುತ್ತಿರುವುದು ಹೊಸಕಾಲದ ವಿಚಿತ್ರ ಲಕ್ಷಣ!

ಇಂದು ಮೈಸೂರು ತನ್ನ ಹಳೆಯ ರಾಜಮಾನ್ಯ ಪ್ರೀತಿಯ ಬದುಕು-ಭಾಷೆ ಉಳಿಸಿಕೊಂಡಿದೆ. ಮೈಸೂರು ಮಲ್ಲಿಗೆ ಮತ್ತು ಮೈಸೂರುಪಾಕದ ಕಂಪು ಬೆಳೆಸಿಕೊಂಡಿದೆ. ಬೆಂಗಳೂರು ಹೀಗೇಕೆ ಎಬಡಸಿಂಗಿಯಾಗಿದೆ ಗೊತ್ತಿಲ್ಲ. ನಾನು ಅಮೆರಿಕೆಗೆ ಎರಡು ಸಲ ಹೋಗಿ; ಅಲ್ಲಿ ತಿಂಗಳಗಟ್ಟಲೆ ಇದ್ದಮೇಲೆ ಇದಕ್ಕೆ ಉತ್ತರ ಸಿಕ್ಕಿತು. ಅಮೆರಿಕೆಯ ಕ್ಯಾಲಿಫೋರ್ನಿಯಾ ರಾಜ್ಯದ ನಮ್ಮ ಓಣಿಯ ಸುತ್ತಮುತ್ತಲ ಮನೆಗಳೆಲ್ಲವೂ ಪ್ಯಾಕ್‌ ಮಾಡಿದ ಸುಂದರ ಹೆಣಗಳು.

ಅಲ್ಲಿ ಯಾವುದಾದರೂ ಮನೆಗೆ ನೇರವಾಗಿ ಹೋಗಿ ಬಾಗಿಲ ಬೆಲ್ಲು ಒತ್ತಿದರೆ; ಅಲ್ಲಿ ಅವರು ಬಾಗಿಲು ತೆರೆಯುವುದಿಲ್ಲ; ಬದಲಾಗಿ ಅಲ್ಲಿಗೆ ಪೊಲೀಸ್‌ ಬರುತ್ತಾನೆ! ಈ ಮಾತನ್ನು ನನಗೆ ಇಥಿಯೋಪಿಯಾದ ಒಬ್ಬ ಎಂಜಿನಿಯರ್‌ ತನ್ನ ಅನುಭವವನ್ನು ವಿವರಿಸುತ್ತ ಹೇಳಿದ. ಇಂಥದೊಂದು ನಂಬಿಕೆಯನ್ನು ಕಳಕೊಂಡ ಸಾಮಾಜಿಕ ವಿಸ್ಮೃತಿ ಅಲ್ಲಿ ಜೀಡುಗಟ್ಟಿದೆ. ಇತ್ತೀಚೆಗೆ ಅಮೆರಿಕೆಯವರಿಗೆ ಕೆಟ್ಟಮೇಲೆ ಬುದ್ಧಿ ಬಂದಂತೆ; ಈಗೀಗ ಅಲ್ಲಿಯ ನಗರಗಳಲ್ಲಿ ‘ಸ್ಯಾಟರ್‌ಡೇ ಮಾರ್ಕೇಟ್’ (ಶನಿವಾರ ಸಂತಿ), ‘ಸ್ಟ್ರೀಟ್ ಫೆಸ್ಟಿವಲ್’ (ರಸ್ತೆ ಹಬ್ಬ), ‘ಗಾರ್ಡನ್ ಪಾರ್ಟಿ’ (ಅಲ್ಲಿಕೇರಿ ಊಟ) ಮಾಡುತ್ತಿದ್ದಾರೆ. ಅದಕ್ಕೆ ಅವರು ಕಮ್ಯುನಿಟಿ ಮೀಟಿಂಗ್ ಅಂತ ಹೊಸ ಹೆಸರು ಕೊಡುತ್ತಾರೆ. ಆದರೂ ಅವರು ತಮ್ಮ ನಿತ್ಯದ ಬದುಕಿನಲ್ಲಿ ಚಲಿಸುತ್ತಿರುವ ಸಮಾಧಿಗಳೇ ಸೈ! ಅದರಲ್ಲಿಯೂ ಒಂದು ವಿಶೇಷವಿದೆ. ಏನೆಂದರೆ ದಾರಿಯಲ್ಲಿ ಅಪರಿಚಿತರಾದ ಯಾರೇ ಭೆಟ್ಟಿಯಾದರೂ ಅವರು ‘ಹಾಯ್’, ‘ಹೌಡೂಯೂಡೂ’, ‘ನೈಸ್ ಇವನಿಂಗ್‌’ ಅಂತ ಅಂದು; ಒಂದು ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಶನ್ ಕೊಟ್ಟು; ಉತ್ತರಕ್ಕೂ ಕಾಯದೆ ಹೋಗಿಬಿಡುತ್ತಾರೆ. ಮಾತು ತುಟಿಯ ಹೊಸ್ತಿಲದಿಂದ ಎದೆಯ ಅಂಗಳಕ್ಕೆ ಇಳಿಯುವುದೇ ಇಲ್ಲ. ಆದರೆ ನಮ್ಮ ಮುದ್ದಿನ ಬೆಂಗಳೂರಲ್ಲಿ ಇದೂ ಪುಂಗಿ. ಅದೆಷ್ಟೋ ಎಜ್ಯುಕೇಟೆಡ್ ಜನ ಎದುರಿಗೆ ಯಾರೇ ಬಂದರೂ ದೃಷ್ಟಿ ಕೂಡ ಕೊಡದೇ, ಸ್ಮೈಲ್ ನೀಡದೇ, ತಲೆ ಕೆಳಗೆ ಹಾಕಿಕೊಂಡು ಹೋಗಿಬಿಡುತ್ತಾರೆ. ಇಂಥವರಿಗೆ ನಮ್ಮೂರ ಕಡೆ ‘ಗುಮ್ಮನ ಗುಸುಕಾ’, ‘ಮಣಮುಕ್ಕ ಹಾವು’ ಅಂತ ಕರೆಯುತ್ತಾರೆ. ನಾವೆಲ್ಲರೂ ಒಂದರ್ಥದಲ್ಲಿ ಇಂಥ ಗುಮ್ಮನಗುಸುಕರೇ ಆಗಿದ್ದೇವೆ. ಅದೇನು ಕಾರಣವೋ ಏನೋ ನಮ್ಮ ಲಕ್ಷಾಂತರ ಜನ ಯುರೋಪ್ ಖಂಡಗಳಿಗೆ ಕೂಳಿಗಾಗಿ ಕಾಳಿಗಾಗಿ ವಲಸೆ ಹೋಗಲು ಪ್ರಾರಂಭ ಮಾಡಿದಂದಿನಿಂದ; ಈ ಮಣಮುಕ್ಕ ಹಾವುಗಳ ಕಾಲ ಸುರುವಾಗಿದೆಯೋ ಏನೋ? ಅಮೆರಿಕ ಇಂಡಿಯಾಕ್ಕೆ ಕೊಟ್ಟ ಈ ಕೆಟ್ಟ ಬಿಸ್ಕೀಟ್‌ಗಳನ್ನು ತಿನ್ನುವುದೆ ನಮ್ಮ ಫ್ಯಾಶನ್ ಆಗಿದೆ.

ನಮ್ಮದೇ ಆದ ಹೋಳೀಹುಣ್ಣಿವಿ, ಬನ್ನೀಹಬ್ಬ, ಎಳ್ಳುಕೊಡುವ ಹಬ್ಬ, ರೊಟ್ಟಿಪಂಚಮಿ, ನಾಗರಪಂಚಮಿ, ಬಯಲಾಟ, ದೊಡ್ಡಾಟ, ಜೋಕಾಲಿ, ಎತ್ತಿನ ಕರಿ ಹರಿಯುವ ಆಟ, ಗುಡಿಕಟ್ಟಿ ಭಜನಿ, ಪುರಾಣ, ಶಾಸ್ತ್ರ, ಕೀರ್ತನ, ಸಂತೆ, ಜಾತ್ರೆ, ಹುಚ್ಚಯ್ಯನತೇರು, ಗುಳ್ಳವ್ವನ ಹಬ್ಬ, ಶೀಗವ್ವನ ಹಬ್ಬ, ಓಣಿಕಟ್ಟಿನ ಅಸಂಖ್ಯ ಜನಪದೀಯ ಹಾಡು, ಅಲ್ಲೀಕೇರಿಯ ಬುತ್ತಿಯೂಟ, ಗೌರಿಹುಣ್ಣಿಮೆಯ ಬೆಳದಿಂಗಳ ಆಟ, ಹೋಳಿ ಹುಣ್ಣಿಮೆಯ ಮನರಂಜನೆ, ಗರಡಿಮನೆ, ಗುಂಡೆತ್ತಿ ಒಗೆಯುವ ಸ್ಪರ್ಧೆ, ಬಯಲ ಕುಸ್ತಿ, ಮಠದ ಕಟ್ಟಿ ಭಜನಿ, ಅನುಭಾವ ಪದ್ಯ, ತತ್ವಪದ... ಇಂಥ ಸಾವಿರಾರು ಸಾಮೂಹಿಕ ಸಡಗರಗಳು ಏನಾದವು? ನಮ್ಮಲ್ಲಿ ನಾವು ಮೆಲ್ಲನೆ ಸಾಯುತ್ತಿದ್ದೇವೆಯೇ? ನಾವು ಇದ್ದೇವೆ. ಆದರೆ ಮೆತ್ತಗೆ ಸಾಯುತ್ತಿದ್ದೇವೆ! ನಮ್ಮೊಳಗಿನ ನಮ್ಮತನ ಕಳಕೊಳ್ಳುತ್ತಿದ್ದೇವೆ. ಈ ಸಮೂಹ ಸಂಸ್ಕೃತಿಯ ಪಾರ್ಶ್ವವಾಯು ರೋಗ (ಲಕ್ವಾ) ನಮ್ಮನ್ನು ಕಾಡುತ್ತಿದೆ. ಜೊತೆಗೆ ಟೀವಿಯಲ್ಲಿ ಕ್ರಿಕೆಟ್ ನೋಡುತ್ತ, ಟಿಫಿನ್ ತಿನ್ನುವ, ಕುಂತಲ್ಲೇ ಕಾಫೀ-ಟೀ ಹೀರುವ, ಹಳಸಿದ ಧಾರಾವಾಹಿಗಳ ಕೃತ್ರಿಮ ಲೋಕದಲ್ಲಿ ಟೈಮ್ ಪಾಸ್ ಮಾಡುವ ಈಜಿ ಚೇರ್ ಸಂಸ್ಕೃತಿ (ಒಳಮುಚುಗ ಜೀವನಶೈಲಿ) ಈಗ ನಿತ್ಯದ ಪದ್ಧತಿಯೇ ಆಗಿಬಿಟ್ಟಿದೆ. ಇದಕ್ಕಾಗಿಯೋ ಏನೋ ನಾವು ಮಾನಸಿಕ, ದೈಹಿಕ ರೋಗಗಳಿಗೆ ಹತ್ತಿರ ಆಗುತ್ತಿದ್ದೇವೆ.

ಮಠಗಳು, ಗುಡಿಗಳು ತಮ್ಮ ಕೀರ್ತನ, ಪುರಾಣ, ಭಜನೆ, ಜಾತ್ರೆ, ಪ್ರವಚನ, ಪಾರಾಯಣಗಳಿಂದ ಒಂದು ಅದ್ಭುತ ಸಾಂಸ್ಕೃತಿಕ ಕಲಾಲೋಕ ಸೃಷ್ಟಿಸಿದ್ದವು. ಇನ್ನೂ ಅವು ಇಷ್ಟೊಂದು ಕಮರ್ಶಿಯಲ್ ಸೆಂಟರ್‌ ಆಗಿದ್ದಿಲ್ಲ. ಆದರೆ ಟೀವಿ ಬಂದಮೇಲೆ, ಮೊಬೈಲ್ ಫೋನುಗಳು ಪ್ರವೇಶಪಡೆದ ಮೇಲೆ ಎಲ್ಲಾ ಎಡವಟ್ಟುಗಳೂ ಗುಳೇಕಟ್ಟಿಕೊಂಡು ಬಂದುಬಿಟ್ಟವು. ನಮ್ಮ ಮೊಮ್ಮಕ್ಕಳು ಈಗ ದಿನಕ್ಕೆ ಆರುತಾಸು ಟೀವಿ ಮುಂದೆ ಠಳಾಯಿಸುತ್ತಾರೆ. ಅದು ಅವರ ತಪ್ಪಲ್ಲ. ನಾವು ದೊಡ್ಡವರು ಕೂಡ ಟೀವಿ ಮುಂದೆ ಅವಲಕ್ಕಿ ತಿನ್ನುತ್ತ ಫಿಕ್ಸ್‌ ಆಗುತ್ತೇವೆ. ಚಾನೆಲ್ಲಿನಿಂದ ಚಾನೆಲ್ಲಿಗೆ ಜಂಪ್‌ ಮಾಡುತ್ತ ಹೋಗುತ್ತೇವೆ. ಎಷ್ಟೋಸಲ ಚಾನೆಲ್ಲುಗಳ ಆಯ್ಕೆಯಲ್ಲಿ ಮಮ್ಮಕ್ಕಳಿಗೂ ನಮಗೂ ಗರ್ದಿಗಮ್ಮತ್ತಿನ ಜಗಳವೂ ಆಗು ತ್ತದೆ. ಇಂಥಾದ್ದರಲ್ಲಿ ನನ್ನ ಹೆಂಡತಿ ಎಲ್ಲಾರನ್ನೂ ಆಕಡೆ ತಳ್ಳಿ ಅಡಗಿಯ ಚಾನೆಲ್ಲುಗಳನ್ನು ನೋಡುತ್ತಾಳೆ. ಆ ಸಮಯದಲ್ಲಿ ದೇವರು ಬಂದರೂ ಅವಳು ‘ನೋ ಟೈಮ್’ ಅಂತ ಹೇಳಿಬಿಡುತ್ತಾಳೆ.

ಅಬ್ಬಾ ಒಂದು ಸರ್ವೇಸಾಮಾನ್ಯ ದೃಶ್ಯ ನೀವು ಕಂಡಿದ್ದೀರಾ? ಸಂಜೆ-ಮುಂಜಾವು ವಾಕಿಂಗಿಗೆ ಹೋದಾಗ ಎಲ್ಲರ ಕೈಯಲ್ಲೂ ಮೊಬೈಲುಗಳು. ಈಗ ಗಂಡ-ಹೆಂಡಿರು ದಾರಿಯಲ್ಲಿ ಪ್ರಾಣಮಿತ್ರರಾಗಿ ಮಾತಾಡುತ್ತ ಹೋಗುವುದೇ ಇಲ್ಲ. ಕಾರಣ ಗಂಡನ ಕೈಯಲ್ಲೂ ಮೊಬೈಲು, ಹೆಂಡತಿಯ ಕೈಯಲ್ಲೂ ಮೊಬೈಲು, ಮಕ್ಕಳ ಕೈಯಲ್ಲೂ ಮೊಬೈಲು. ಅವರು ಗಂಟೆಗಟ್ಟಲೆ ತಮ್ಮ ಕರ್ಣಪಿಶಾಚಿಯಾದ ಮೊಬೈಲಿಗೆ ಗಲ್ಲ ಹಚ್ಚಿ ಮಾತಾಡತೊಡಗಿದರೆ ಯಾರು ಬಂದರೂ ಗೊತ್ತಾಗುವುದಿಲ್ಲ, ಯಾರು ಹೋದರೂ ತಿಳಿಯುವುದಿಲ್ಲ! ಆಧುನಿಕ ತಂತ್ರಜ್ಞಾನ ಸಾವಿರ-ಲಕ್ಷ ಪಟ್ಟು ವೇಗದಿಂದ ಬೆಳೆದುಬಂದು; ನಮ್ಮ ಸಮಯ- ಸಂಬಂಧ- ಸಂಪರ್ಕ- ಶಕ್ತಿ- ಸಾಧನೆ ಎಲ್ಲವನ್ನೂ ಯಂತ್ರದ ಗೂಡಿಗೆ ದಬ್ಬಿಬಿಟ್ಟಿದೆ.

ಓಣಿಕಟ್ಟಿನಲ್ಲಿ ನಡೆಯುವ ಗೊಂದಲಿಗೇರ ಕಥಿ, ಹಗಲು ವೇಷಧಾರಿಗಳು, ಬಂಬೈ ಮಿಠಾಯಿ, ಜೋಗವ್ವಗಳ ಹಾಡು, ದುರುಗ ಮುರಿಗಿ, ಕಾಡುಸಿದ್ಧರ ಜಾದು, ಕಣಿಹೇಳುವ ಜಾಣಿಯರು, ಕಂದೀಲು ಹಿಡಿದು ಜಗತ್ತಿನ ಭವಿಷ್ಯ ಹೇಳುವ ಜಂಗಮರು, ಮಂಗ್ಯಾನ ಆಡಿಸುವವರು, ಕರಡಿ ಕುಣಿಸುವವರು, ಅಳ್ಳೊಳ್ಳಿ ಬಾವಾಗಳು, ಏಳ್ಕೋಟಿಗೇಳ್ಕೋಟಿಗೋ ಹಾಡಿ ಕುಣಿಯುವ ಕಂಬಳಿ ಗೊಗ್ಗಯ್ಯಗಳು, ಜೀವದ ತೊರೆದು ಆಟವಾಡುವ ಡೊಂಬರು, ಚಕ್ಕಾ- ಕುಂಟಲ್ಪಿ- ಪಗಡಿ- ಚಿಣಿಫಣಿ- ಗುಂಡ- ಗಜಗ- ಬಗರಿ- ಹೂತೀತಿ ಆಟಗಳು ಇವನ್ನೆಲ್ಲ ಈಗ ಒಂದೇ ಒಂದು ಟೀವಿ ಪಡದೆ ನುಂಗಿ ನೀರು ಕುಡಿಯಿತು. ಟೀವಿ ಬಂದಮೇಲೆ ಅತೀಕೆಟ್ಟ ಕನ್ನಡ ಭಾಷಾಪ್ರಯೋಗದ, ಮಿಕ್ಸೆಡ್ ಕನ್ನಡದ ಮಹಾಮಿಶ್ರಣ ಆರಂಭವಾಯಿತು.

ಅತ್ಯಾಧುನಿಕ ಟೆಕ್ನಾಲಾಜಿಯ ಜೀವನಶೈಲಿ ಅನಿವಾರ್ಯ, ಅವಶ್ಯ. ಆದರೆ ಯಂತ್ರವೇ ಮಂತ್ರವಲ್ಲ, ತಂತ್ರವೇ ತ್ರಾಣವಲ್ಲ. ಇನ್ನು ಬರಲಿರುವ ದಿನಗಳಲ್ಲಿ ಕೇವಲ ಒಂದೆರಡು ದಶಕಗಳಲ್ಲಿ ರೋಬೊ ಸುಂದರಿಯರು ನಮ್ಮನ್ನು ಆಳಲಿದ್ದಾರೆ. ಈ ರೋಬೊ ನಾರಿಯರು ವೈದ್ಯಕೀಯ ಕ್ಷೇತ್ರ, ಕಾರುಚಾಲನೆ, ಕಾರಖಾನೆ, ಆಫೀಸ್‌ ಕೆಲಸ, ಶಿಕ್ಷಣ, ವ್ಯಾಪಾರ, ಕೃಷಿ ಮುಂತಾದ ಎಲ್ಲ ಕೆಲಸಕಾರ್ಯಗಳಲ್ಲಿ ನುಗ್ಗಲಿದ್ದಾರೆ. ಅಷ್ಟೇ ಅಲ್ಲ ನಮ್ಮಂತೆ ಇವರು ಸಂಬಳ, ಇನ್‌ಕ್ರಿಮೆಂಟ್‌, ಪ್ರಮೋಶನ್ ಕೇಳುವುದಿಲ್ಲ. ಪುಕ್ಕಟೆ ದುಡಿಯುವ ಪ್ರೇಮಿಕೆಯರು ಇವರು. ನಮ್ಮಂತೆ ಎಂಟುಗಂಟೆ ಸೀಮಿತವಾಗಿ ಆಫೀಸು ಕೆಲಸ ಮಾಡದೇ ಇವರು ದಿನದ 24 ಗಂಟೆಯೂ ಎಗ್ಗಿಲ್ಲದೆ ದುಡಿಯಬಲ್ಲರು.

ನಮಗಿಂತ ನೂರುಪಾಲು, ಸಾವಿರಪಾಲು ಅಚ್ಚುಕಟ್ಟಾಗಿ, ದೋಷರಹಿತರಾಗಿ ಕೆಲಸ ನಿಭಾಯಿಸಬಲ್ಲರು. ಬಾಹ್ಯಾಕಾಶ ಯುಗದಲ್ಲಂತೂ ಇವರು ಮಾಡದ ಕೆಲಸಗಳೇ ಇಲ್ಲ. ಕೂಳಿಲ್ಲದೇ ಕಾಳಿಲ್ಲದೇ ನೂರಾರು ವರ್ಷ ಬಾಹ್ಯಾಕಾಶದಲ್ಲಿ ತಿರುಗಿ ಅಗತ್ಯ ಮಾಹಿತಿ ನೀಡಬಲ್ಲರು. ಮನುಷ್ಯ ತನ್ನ ಅನುಕೂಲತೆಗಾಗಿ ಬೆಳೆಸಿದ ತಂತ್ರಜ್ಞಾನ ಮನುಷ್ಯನನ್ನೇ ನುಂಗುವ ಕಾಲ ದೂರವಿಲ್ಲ. ಆಯ್ತು... ಇದೇ ಸರಿ ಅನ್ನೋಣವೇ? ಹೌದು! ನಮಗೆ ಹಂಗಿಸಿ ಕೂಳುಹಾಕುವ ಜೀವಹಿಂಡುತಿಯಾದ ಹೆಂಡತಿಗಿಂತ ಈ ರೋಬೊ ಹೆಂಡತಿಯೇ ನೂರುಪಾಲು ಭೇಸಿಯಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry