ಶನಿವಾರ, ಆಗಸ್ಟ್ 8, 2020
22 °C

ಉತ್ಸವ ಆಚರಣೆಯಿಂದ ಭಾಷಾಭಿಮಾನ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಗ್ರಾಮೀಣ ಪ್ರದೇಶದಲ್ಲಿ ಉತ್ಸವ ಸಾರ್ವಜನಿಕರಿಗೆ ಊರು, ನಾಡು, ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಮೂಡಲು ಕಾರಣವಾಗುತ್ತವೆ ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಸೋಮವಾರ ಸಮೀಪದ ಹನುಮನಾಳ ಗ್ರಾಮದಲ್ಲಿ ಗುರು ಗಂಗಾಧರಸ್ವಾಮಿ ಸಂಗೀತ ಶಾಲೆ, ಗುರುಗಂಗಾಧರೇಶ್ವರ ಅನಾಥಾಶ್ರಮ. ರಿಕ್ಷಾ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕಲಾ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹನುಮನಾಳ ಉತ್ಸವ-2018’ ಉದ್ಘಾಟಿಸಿ ಮಾತನಾಡಿದರು.

ಯುವಕರಲ್ಲಿ ಎಂತಹ ಶಕ್ತಿ ಇದೆ ಎಂಬುದಕ್ಕೆ ಈ ಉತ್ಸವವೇ ಸಾಕ್ಷಿಯಾಗಿದೆ. ಉತ್ಸವದ ನೆಪದಲ್ಲಿ ಊರಿನ ಸ್ವಚ್ಛತೆಗೆ ಟೊಂಕಕಟ್ಟಿ ಗ್ರಾಮದ ಬೀದಿ ಬೀದಿಗಳನ್ನು ಸ್ವಚ್ಛ ಮಾಡಿದ ಯುವಕರ ಸಾಧನೆ ಮೆಚ್ಚುವಂತಹದ್ದು ಎಂದು ಹೇಳಿದರು.

ಬೆಂಗಳೂರಿನ ಉದ್ಯಮಿ ಅರುಣಕುಮಾರ ಕನ್ನೂರವರ ಮಾತನಾಡಿ, ಹಂಪಿ, ಪಟ್ಟದಕಲ್ಲಿನಲ್ಲಿ ನಡೆಯುವ ಉತ್ಸವಗಳಲ್ಲಿ ಅವಕಾಶ ದೊರೆಯದೆ ವಂಚಿತರಾದ ಸ್ಥಳೀಯ ಕಲಾವಿದರಿಗೆ ದೊರೆತ ಒಂದು ವೇದಿಕೆ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ರಿ ಮಾತನಾಡಿ, ಹನುಮನಾಳ ಗ್ರಾಮದಲ್ಲಿ ಎಷ್ಟೆಲ್ಲ ಕಲಾ ಪ್ರಕಾರಗಳು ಹಾಗೂ ಕಲಾ ಪ್ರತಿಭೆಗಳು ಇವೆ ಎಂಬುದು ಈ ಉತ್ಸವದಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಹೊಸಪೇಟೆಯ ಕಲ್ಲಂಭಟ್‌ ಮಾತನಾಡಿ, ನಾಡಿನ ಕಲಾ ಬಳಗದಿಂದ ಮುಂದಿನ ದಿನಗಳಲ್ಲಿ ಹನುಮನಾಳದಲ್ಲಿ ಅಖಂಡ ಕರ್ನಾಟಕ ಸಾಂಸ್ಕೃತಿಕ ಸಮ್ಮೇಳನ ಮಾಡುವ ಉದ್ದೇಶವಿದ್ದು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಮನೋಹರ ಪತ್ತಾರ, ಹನುಮನಾಳ ಉತ್ಸವ ಇದು ಗ್ರಾಮಕ್ಕೆ ಸೀಮಿತವಾಗಿರದೆ ರಾಜ್ಯವನ್ನೇ ಪ್ರತಿನಿಧಿಸುವಂತಾಗಬೇಕು ಎಂದರು.

ವಿವಿಧ ಕಲಾ ತಂಡಗಳಿಂದ ಸಾಮೂಹಿಕ ನೃತ್ಯ, ಹಿರಿಯ ಜನಪದ ಕಲಾವಿದೆ ವತ್ಸಲಾಬಾಯಿ ಪತ್ತಾರ ಹಾಗೂ ತಂಡದಿಂದ ಸಾಮೂಹಿಕ ಜನಪದ, ತಾವರಗೇರಿಯ ಶ್ರೀದೇವಿ ಪತ್ತಾರ ಅವರಿಂದ ಭರತನಾಟ್ಯ, ಹದಿನೈದು ಸಿತಾರ್ ಕಲಾವಿದರಿಂದ ಜುಗಲ್ ಬಂದಿ, ಬಳೂಟಗಿ ಕಲಾ ಬಳಗದಿಂದ ಮರಗಾಲ ಕುಣಿತ, ತುಗ್ಗಲಡೋಣಿ ಬೀರಲಿಂಗೇಶ್ವರ ಕಲಾ ಸಂಘದ ಸದಸ್ಯರಿಂದ ಡೊಳ್ಳಿನ ಕುಣಿತ, ಜಾನಪದ ನೃತ್ಯ, ಭಕ್ತಿ ಗೀತೆ, ಲಾವಣಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ ವಂದಕುದರಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮೀ ಪಲ್ಲೇದ, ಹನುಮಗೌಡ ಪಾಟೀಲ, ವಿಜಯಕುಮಾರ ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಂಜುಳಾ ಪಾಟೀಲ, ಅಂದಪ್ಪ ತಳವಾರ, ಗ್ರಾ.ಪಂ ಉಪಾಧ್ಯಕ್ಷ ಗುರುಸಿದ್ದಪ್ಪ ರೊಟ್ಟಿ, ಸದಸ್ಯರಾದ ಪರಶುರಾಮ ಬಾಗಲಿ, ಯಮನೂರಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಸುರೇಶ ಬಾನಾಳ, ಶರಣಪ್ಪ ತಿಮ್ಮನಟ್ಟಿ, ರೇಣುಕಾ ಭಜಂತ್ರಿ, ರೇಣುಕಾ ಪೊಲೀಸ್‌ಪಾಟೀಲ, ಲಕ್ಷ್ಮವ್ವ ಕುರುಮನಾಳ, ಗುರವ್ವ ಕುಂಬಾರ, ಭೀಮಪ್ಪ ಉಮಚಗಿ, ಪ್ರಮುಖರಾದ ಶಿವಕುಮಾರ ಹಿರೇಮಠ, ವಿ.ಗಜೇಂದ್ರರಾವ್, ವಿಕ್ರಮ ನಂದಗೋಳ, ಮುತ್ತಯ್ಯ ಗಂಟಿಮಠ, ರಾಜು ಬೈರಗೊಳ, ರಾಘವೇಂದ್ರರಾವ್ ಹೊಸಕೋಟೆ, ಕೆ.ಆರ್.ಕುಲಕರ್ಣಿ, ಗುರುನಾಥ ಪತ್ತಾರ, ಶರಣಪ್ಪ ಹಂಡಿ, ವೀರಣ್ಣ ಬಡಿಗೇರ, ಗುರುರಾಜ ಹಡಪದ, ಬಸವರಾಜ ದಾಸರ ಇದ್ದರು. ಬಸವರಾಜ ದಾಸರ ಸ್ವಾಗತಿಸಿದರು. ಶರಣಗೌಡ ಗೌಡರ ನಿರೂಪಿಸಿದರು. ಮರಿಸ್ವಾಮಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.