ಶನಿವಾರ, ಜೂಲೈ 4, 2020
21 °C

ಸಮಸ್ಯೆ ಬಗೆಹರಿಸದಿದ್ದರೆ ಶರ್ಟ್‌ ಹಿಡಿದು ಪ್ರಶ್ನಿಸಿ: ಎಚ್‌.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಬಗೆಹರಿಸದಿದ್ದರೆ ಶರ್ಟ್‌ ಹಿಡಿದು ಪ್ರಶ್ನಿಸಿ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ‘ವಿಧಾನಸೌಧಕ್ಕಿರುವ ಕಬ್ಬಿಣದ ಗೇಟ್‌ಗಳನ್ನು ನಾನು ಮುಖ್ಯಮಂತ್ರಿ ಆದ ತಕ್ಷಣ ಕಿತ್ತು ಹಾಕಿಸುತ್ತೇನೆ. ಸಮಸ್ಯೆ ಬಗೆಹರಿಸಿ ಎಂದು ಶರ್ಟ್‌ ಹಿಡಿದು ಪ್ರಶ್ನಿಸುವ ಅಧಿಕಾರ ಜನಸಾಮಾನ್ಯರಿಗೆ ನೀಡುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿ, ‘ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ನೀಡುತ್ತೇನೆ’ ಎಂದರು.

‘ಮುಂದಿನ ಚುನಾವಣೆ ಬಳಿಕ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಜತೆ ಸೇರಿ ಅಧಿಕಾರ ರಚಿಸುವುದಿಲ್ಲ. 113 ಸ್ಥಾನಗಳನ್ನು ಗೆದ್ದು ಸ್ವತಂತ್ರ ಸರ್ಕಾರ ರಚಿಸಬೇಕು ಎಂಬುದು ನನ್ನ ಬಯಕೆ. ಜೆಡಿಎಸ್‌ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಸಮೀಕ್ಷೆಗಳು, ಜ್ಯೋತಿಷಿಗಳು ಮತ್ತು ಮಾಧ್ಯಮಗಳು ಏನೇ ಹೇಳಿಕೊಳ್ಳಲಿ ಚುನಾವಣೆಯಲ್ಲಿ ಬಹುಮತಪಡೆದು ಅಧಿಕಾರ ಹಿಡಿದೇ ತೀರುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ನಾಲ್ಕು ವರ್ಷ ಏನೂ ಮಾಡದ ರಾಜ್ಯ ಸರ್ಕಾರ ಜಾಹೀರಾತಿಗೆ ₹1,000 ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ ₹ 4,000 ಖರ್ಚು ಮಾಡಿದೆ. ಕೆಪಿಟಿಸಿಎಲ್‌ ನಷ್ಟದಲ್ಲಿದೆ. ಆದರೆ, ಇಂಧನ ಸಚಿವರು ವಾಹಿನಿಗಳಲ್ಲಿ  ಪ್ರತಿದಿನ ತಲಾ ಎರಡು ನಿಮಿಷದಂತೆ 50 ಬಾರಿ ಜಾಹೀರಾತು ನೀಡುತ್ತಿದ್ದಾರೆ ಎಂದು ದೂರಿದರು.

‘ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಹಕಾರ ಸಂಘಗಳು ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುತ್ತೇನೆ. ಮುಂದೆ ರೈತರು ಸಾಲ ಮಾಡದ ಪರಿಸ್ಥಿತಿ ನಿರ್ಮಾಣ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಬಿಡಿಎ ಕಳೆದ ಹತ್ತು ವರ್ಷಗಳಲ್ಲಿ ಪರಿಪೂರ್ಣ ರೀತಿಯಲ್ಲಿ ಒಂದೇ ಒಂದು ಬಡಾವಣೆ ನಿರ್ಮಿಸಿಲ್ಲ.  ₹ 5,000 ಕೋಟಿಗೂ ಅಧಿಕ ಸಾಲ ಮಾಡಿದೆ. ಬಡಾವಣೆಗಾಗಿ ಗುರುತಿಸುವ ಜಮೀನನ್ನು ಡಿನೋಟಿಫಿಕೇಷನ್‌ ಮಾಡುವ ಮತ್ತು ಕೈಬಿಡುವ ಆಟದಲ್ಲಿ ಸರ್ಕಾರ ತೊಡಗಿದೆ. ಬಡ ಜನರಿಗೆ ನಿವೇಶನ ಸಿಗುತ್ತಿಲ್ಲ. ನಮ್ಮ ಸರ್ಕಾರ ಬಂದರೆ, ಬಡ ಮತ್ತು ಮಧ್ಯಮ ವರ್ಗಕ್ಕೆ ಕಡಿಮೆ ದರದಲ್ಲಿ ಬಿಡಿಎ ಫ್ಲಾಟ್‌ಗಳನ್ನು ನಿಗದಿ ಮಾಡಲಾಗುವುದು ಎಂದರು.

ಹಿರಿಯ ನಾಗರೀಕರು ಮನೆ ಮತ್ತು ವೃದ್ಧಾಶ್ರಮಗಳಲ್ಲಿ ಎದುರಾಗುತ್ತಿರುವ  ಸಮಸ್ಯೆಗಳನ್ನು ಸಂವಾದದಲ್ಲಿ ಹೇಳಿಕೊಂಡರು. ಇವರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಚುನಾವಣಾ ಪ್ರಣಾಳಿಕೆಯಲ್ಲಿ ಅಗತ್ಯ ಕಾರ್ಯಕ್ರಮ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ಸೋಂಬೇರಿ ಕಾರ್ಯಕರ್ತರು

ನಮ್ಮ ಕಾರ್ಯಕರ್ತರು ಸೋಬೇರಿಗಳು. ಸುಮ್ಮನೆ ಕುಮಾರಣ್ಣ ಜೈ ಎಂದು ಜೈಕಾರ ಹಾಕುತ್ತಾರೆ. ಅದನ್ನು ಬಿಟ್ಟು ಜನರ ಮನೆ ಬಾಗಿಲಿಗೆ ಹೋಗಿ ಪಕ್ಷದ ಕೆಲಸಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ನಮ್ಮ ಪಕ್ಷದ ಶಾಸಕರ ಸಂಖ್ಯೆ 40 ರಿಂದ 50 ರ ಆಸುಪಾಸಿನಲ್ಲೇ ಇದೆ. ಇದು ನಮ್ಮ ದುರಾದೃಷ್ಟ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.