ಸೋಮವಾರ, ಆಗಸ್ಟ್ 3, 2020
25 °C

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಕೇಜ್ರಿವಾಲ್‌ ವಿರುದ್ಧ ವಿಶ್ವಾಸ್‌ ಬಂಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಕೇಜ್ರಿವಾಲ್‌ ವಿರುದ್ಧ ವಿಶ್ವಾಸ್‌ ಬಂಡಾಯ

ನವದೆಹಲಿ: ದೆಹಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಆಮ್‌ ಆದ್ಮಿ ಪಕ್ಷವು (ಎಎಪಿ) ಅಭ್ಯರ್ಥಿಗಳನ್ನು ಘೋಷಿಸುತ್ತಲೇ ಪಕ್ಷ ದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಎಪಿ ಮುಖಂಡ ಕುಮಾರ್‌ ವಿಶ್ವಾಸ್‌,  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸತ್ಯ ಹೇಳಿದ್ದಕ್ಕೆ ತಮ್ಮನ್ನು ಶಿಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ 16ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಹಿರಿಯ ಮುಖಂಡ ಸಂಜಯ್‌ ಸಿಂಗ್‌, ಉದ್ಯಮಿ ಸುಶೀಲ್‌ ಗುಪ್ತಾ ಮತ್ತು ಲೆಕ್ಕ ಪರಿಶೋಧಕ ಎನ್‌.ಡಿ.ಗುಪ್ತಾ ಅವರಿಗೆ ಎಎಪಿ ಟಿಕೆಟ್‌ ನೀಡಿದೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಭಾರಿ ಬಹುಮತವನ್ನು ಪಡೆದಿರುವ ಎಎಪಿಗೆ ಮೂರೂ ಸ್ಥಾನಗಳನ್ನು ಗೆಲ್ಲುವಷ್ಟು ಬಲ ಇದೆ.

ನಿರ್ಧಾರವನ್ನು ಪ್ರಕಟಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ‘ಸುಶೀಲ್‌ ಗುಪ್ತಾ ಅವರು ದೆಹಲಿ ಮತ್ತು ಹರಿಯಾಣಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 15 ಸಾವಿರ ಮಕ್ಕಳಿಗೆ ಅವರು ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಎನ್‌.ಡಿ. ಗುಪ್ತಾ ಅವರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ’ ಎಂದು ಹೇಳಿದ್ದಾರೆ.

ಅಸಮಾಧಾನ: ಹೊರಗಿನ ಇಬ್ಬರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿರುವುದರಿಂದ ಕುಮಾರ್‌ ವಿಶ್ವಾಸ್‌ ಹಾಗೂ ಪಕ್ಷದ ಇನ್ನೂ ಕೆಲವರಿಗೆ ಟಿಕೆಟ್‌ ತಪ್ಪುವಂತಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳಲ್ಲಿ, ಎಎಪಿ ಸ್ಥಾಪನೆಯಾದಾಗಿನಿಂದ ಪಕ್ಷದಲ್ಲಿ ಇರುವ ಅಶುತೋಷ್‌, ದಿಲೀಪ್‌ ಪಾಂಡೆ, ಬ್ಯಾಂಕ್‌ ಉದ್ಯಮಿ ಮೀರಾ ಸಾನ್ಯಾಲ್‌ ಹೆಸರುಗಳೂ ಕೇಳಿ ಬಂದಿದ್ದವು. 

ಅರವಿಂದ ಕೇಜ್ರಿವಾಲ್‌ ನಿವಾಸದಲ್ಲಿ ನಡೆದ ಶಾಸಕರ ಸಭೆ ಶಿಫಾರಸಿನ ಮೇಲೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ನಿರ್ಧಾರ ಕೈಗೊಳ್ಳುತ್ತಿದ್ದಂತೆ  ಅಸಮಾಧಾನ ಹೊರಹಾಕಿದ ಕುಮಾರ್‌ ವಿಶ್ವಾಸ್‌, ‘ಕೇಜ್ರಿವಾಲ್‌ ವಿರುದ್ಧ ಮಾತನಾಡಿದವರು ಎಎಪಿಯಲ್ಲಿ ಉಳಿಯುವುದಕ್ಕೆ ಕಷ್ಟ ಇದೆ’ ಎಂದು ಹೇಳಿದ್ದಾರೆ.

‘ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅರವಿಂದ ಕೇಜ್ರಿವಾಲ್‌ ಅವರ ನಿರ್ಧಾರಗಳು ಅಥವಾ ನಿರ್ದಿಷ್ಟ ದಾಳಿ, ಟಿಕೆಟ್‌ ಹಂಚಿಕೆಯಲ್ಲಿ ಅಸ

ಮಾನತೆ, ಪಂಜಾಬ್‌ನ ತೀವ್ರವಾದಿಗಳ ಬಗ್ಗೆ ಮೃದು ಧೋರಣೆ, ಜೆಎನ್‌ಯು ಪ್ರಕರಣಗಳು ಸೇರಿ ಹಲವು ವಿಷಯಗಳ ಬಗ್ಗೆ ಸತ್ಯವಾದ ವಿಚಾರಗಳನ್ನು ಹೇಳಿದ್ದೇನೆ. ಅದಕ್ಕಾಗಿ ನನಗೆ ಶಿಕ್ಷೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಒಂದೂವರೆ ವರ್ಷಗಳ ಹಿಂದೆ ಪಕ್ಷದ ಕಾರ್ಯಕಾರಿಣಿಯಲ್ಲಿ ಕೇಜ್ರಿವಾಲ್‌ ಅವರು ತಮ್ಮತ್ತ ನಗು ಬೀರಿ, ‘ನಾವು ನಿಮ್ಮನ್ನು ಮುಗಿಸುತ್ತೇವೆ. ಆದರೆ, ಹುತಾತ್ಮ ಪಟ್ಟ ಪಡೆಯಲು ಬಿಡುವುದಿಲ್ಲ’ ಎಂಬುದಾಗಿ ಹೇಳಿದ್ದರು ಎಂದು ವಿಶ್ವಾಸ್‌ ಆರೋಪಿಸಿದ್ದಾರೆ.

‘ನಾನು ಹುತಾತ್ಮನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್‌ ನಡೆಸುತ್ತಿರುವ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿದ್ದಕ್ಕಾಗಿ ವಿಶ್ವಾಸ್‌ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಮತ್ತೊಬ್ಬ ಬಂಡಾಯ ಶಾಸಕ ಕಪಿಲ್‌ ಮಿಶ್ರಾ ಹೇಳಿದ್ದಾರೆ.‌

ಟೀಕೆ: ಉದ್ಯಮಿಗೆ ರಾಜ್ಯಸಭೆ ಟಿಕೆಟ್‌ ನೀಡಿರುವುದಕ್ಕೆ ಕೇಜ್ರಿವಾಲ್‌ ಅವರನ್ನು ಎಎಪಿಯ ಸಂಸ್ಥಾಪಕ ಸದಸ್ಯರಾಗಿದ್ದ ಯೋಗೇಂದ್ರ ಯಾದವ್‌

ಮತ್ತು ಮಯಾಂಕ್‌ ಗಾಂಧಿ ಟೀಕಿಸಿದ್ದಾರೆ. ಈಗ ಇಬ್ಬರೂ ಪಕ್ಷ ತೊರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.