ಶನಿವಾರ, ಜೂಲೈ 4, 2020
21 °C

ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣ: ಕರ್ನಾಟಕಕ್ಕೆ ‘ಸುಪ್ರೀಂ’ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದಲಿತ ಮಹಿಳೆಯ ಘನತೆಗೆ ಕುಂದುಂಟು ಮಾಡುವ ಉದ್ದೇಶದಿಂದ ಅವರ ಮೇಲೆ ಹಲ್ಲೆ  ನಡೆಸಿ ಶಿಕ್ಷೆಗೆ ಒಳಗಾದ ಯಾದಗಿರಿಯ ಮಲ್ಲಣ್ಣ ಮತ್ತು ಆತನ ಇಬ್ಬರು ಮಕ್ಕಳಾದ ಬಿಕ್ಷಾವತ್‌ ಮತ್ತು ಅಣ್ವೀರಪ್ಪ ಹಾಗೂ ಸಂಬಂಧಿ ಬಸವರಾಜ್‌ ಅವರ ಅರ್ಜಿಯ ಆಧಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

2008ರ ಜನವರಿ 27ರಂದು ಮಲ್ಲಣ್ಣನ ಮಗ ಬಿಕ್ಷಾವತ್‌ ದಲಿತ ಮಹಿಳೆಯ ಮನೆಗೆ ನುಗ್ಗಿ ಅವರ ಕೈ ಹಿಡಿದೆಳೆದಿದ್ದ. ಮಹಿಳೆ ಕಿರುಚಾಡಿದಾಗ ಮನೆಯ ಇತರರು ಬಂದು ಬಿಕ್ಷಾವತ್‌ನನ್ನು ಹಿಡಿದು ಕಟ್ಟಿ ಹಾಕಿದ್ದರು. ಆದರೆ, ಮಲ್ಲಣ್ಣ ಮತ್ತು ಇತರರು ಬಂದು ಬಿಕ್ಷಾವತ್‌ನನ್ನು ಬಿಡಿಸಿಕೊಂಡಿದ್ದರು. ಮಹಿಳೆಯನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದರು ಎಂದು ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಯಾದಗಿರಿ ನ್ಯಾಯಾಲಯ ಅಪರಾಧಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 2011ರ ಜೂನ್‌ 8ರಂದು ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್‌ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಮಲ್ಲಣ್ಣ ಮತ್ತು ಆತನ ಮಕ್ಕಳು ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿದಾರರು ಶರಣಾಗುವುದಕ್ಕೆ ನೀಡಿರುವ ವಿನಾಯಿತಿಯನ್ನು ಸುಪ್ರೀಂ ಕೋರ್ಟ್‌ ಮುಂದುವರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.