ತಾಜ್‌ ಮಹಲ್‌: ಪ್ರವಾಸಿಗರ ಸಂಖ್ಯೆಗೆ ಕಡಿವಾಣ

7

ತಾಜ್‌ ಮಹಲ್‌: ಪ್ರವಾಸಿಗರ ಸಂಖ್ಯೆಗೆ ಕಡಿವಾಣ

Published:
Updated:
ತಾಜ್‌ ಮಹಲ್‌: ಪ್ರವಾಸಿಗರ ಸಂಖ್ಯೆಗೆ ಕಡಿವಾಣ

ಆಗ್ರಾ: ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ವಿಶ್ವ ಪಾರಂಪರಿಕ ತಾಣ ತಾಜ್‌ ಮಹಲ್‌ ಅಪಾಯಕ್ಕೆ ಸಿಲುಕಿದ್ದು, ಅದರ ರಕ್ಷಣೆಗಾಗಿ ಪ್ರವಾಸಿಗರ ಪ್ರವೇಶದ ಮೇಲೆ ನಿರ್ಬಂಧ ಹೇರುವ ಚಿಂತನೆ ನಡೆದಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿಪರೀತ ಜನಜಂಗುಳಿ ಮಧ್ಯೆ ಸಿಲುಕಿ ಐವರು ಪ್ರವಾಸಿಗರು ಗಾಯಗೊಂಡ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಾಜ್‌ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಪುರಾತತ್ವ ತಜ್ಞರು ಸಲಹೆ ಮಾಡಿದ್ದಾರೆ. 

ಮುಂಬರುವ ದಿನಗಳಲ್ಲಿ ಪ್ರತಿದಿನ 40 ಸಾವಿರ ದೇಶೀಯ ಪ್ರವಾಸಿಗರಿಗೆ ಮಾತ್ರ ತಾಜ್‌ ಮಹಲ್‌ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಆದರೆ, ವಿದೇಶಿ ಪ್ರವಾಸಿಗರಿಗೆ ಈ ನಿಯಮ ಅನ್ವಯಿಸದು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಸದ್ಯ ಪ್ರತಿ ದಿನ ಸರಾಸರಿ 10ರಿಂದ 15 ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 70 ಸಾವಿರ ತಲುಪುತ್ತದೆ.

ಅಡಿಪಾಯಕ್ಕೆ ಅಪಾಯ: ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ 17ನೇ ಶತಮಾನದ ಐತಿಹಾಸಿಕ ಕಟ್ಟಡದ ಅಡಿಪಾಯದ ಮೇಲೆ ಭಾರಿ ಒತ್ತಡ ಬೀಳುತ್ತಿದೆ. ಜತೆಗೆ ಅಪಾರ ಸಂಖ್ಯೆಯ ಜನರ ಓಡಾಟದಿಂದ ಈ ಅಮೃತಶಿಲೆಯ ಸವೆತ ಹೆಚ್ಚಾಗಿ ಕಟ್ಟಡದ ಬಾಳಿಕೆ ಕಡಿಮೆಯಾಗುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಾಯುಮಾಲಿನ್ಯದಿಂದಾಗಿ ಹಾಲುಬಣ್ಣದ ಅಮೃತಶಿಲೆ ಈಗಾಗಲೇ ಹಳದಿ ಬಣ್ಣಕ್ಕೆ ತಿರುಗಿದ್ದು, ಅದನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ.

ಪ್ರೀತಿಯ ಸಂಕೇತವಾಗಿರುವ ತಾಜ್‌ ಮಹಲ್‌ ಇಂದಿಗೂ ದೇಶ, ವಿದೇಶಗಳ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಹೀಗಾಗಿ ಇದು ಅಪಾಯದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು.

* ಜನಜಂಗುಳಿ ನಿಯಂತ್ರಿಸುವುದು ಸವಾಲಿನ ಕೆಲಸ. ಪಾರಂಪರಿಕ ಕಟ್ಟಡದ ರಕ್ಷಣೆ ಮತ್ತು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ನಿರ್ಬಂಧ ಹೇರುವುದು ಒಳ್ಳೆಯ ನಿರ್ಧಾರ

–ಹಿರಿಯ ಅಧಿಕಾರಿ, ಭಾರತೀಯ ಪುರಾತತ್ವ ಇಲಾಖೆ

ವಿದೇಶಿಯರಿಗೆ ನಿಯಮ ಅನ್ವಯಿಸದು!

* ₹1,000 ಪ್ರವೇಶ ಶುಲ್ಕ ನೀಡುವ ವಿದೇಶಿ ಪ್ರವಾಸಿಗರಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ

* ₹40 ಪ್ರವೇಶ ಶುಲ್ಕ ನೀಡುವ ಭಾರತೀಯರು ₹1,000 ಟಿಕೆಟ್‌ ಖರೀದಿಸಿದರೆ ಅವರಿಗೂ ನಿರ್ಬಂಧ ಇಲ್ಲದೆ ಪ್ರವೇಶ

* 2016ರಲ್ಲಿ 65 ಲಕ್ಷ ಪ್ರವಾಸಿಗರು ತಾಜ್‌ ಮಹಲ್‌ಗೆ ಭೇಟಿ ನೀಡಿದ್ದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry