ಕಾಮಗಾರಿಗಳು ತಿಂಗಳಾಂತ್ಯಕ್ಕೆ ಪೂರ್ಣ

7
ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದದಲ್ಲಿ ಮೇಯರ್‌ ಆರ್‌.ಸಂಪತ್‌ರಾಜ್‌ ಹೇಳಿಕೆ

ಕಾಮಗಾರಿಗಳು ತಿಂಗಳಾಂತ್ಯಕ್ಕೆ ಪೂರ್ಣ

Published:
Updated:
ಕಾಮಗಾರಿಗಳು ತಿಂಗಳಾಂತ್ಯಕ್ಕೆ ಪೂರ್ಣ

ಬೆಂಗಳೂರು: ಬಿಬಿಎಂಪಿ ಕೈಗೆತ್ತಿಕೊಂಡಿರುವ ಬೃಹತ್‌ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಜನವರಿ ಅಂತ್ಯದೊಳಗೆ ಪೂರ್ಣವಾಗಲಿವೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

ನಗರದಲ್ಲಿ ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರೈಲ್ವೆ ಇಲಾಖೆ ಸಹಯೋಗದಲ್ಲಿ ಬಿಬಿಎಂಪಿ ನಿರ್ಮಿಸುತ್ತಿರುವ ಓಕಳಿಪುರ ಅಷ್ಟಪಥ ಕಾರಿಡಾರ್‍ನ ಮೂರು ಪಥಗಳನ್ನು ಈ ತಿಂಗಳ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ನಗರ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಕಡೆಗೆ ಬರುವ ಪಥ ಮತ್ತು ಮಲ್ಲೇಶ್ವರದಿಂದ ರಾಜಾಜಿನಗರಕ್ಕೆ ಸಂಪರ್ಕಿಸುವ ಅಂಡರ್‍ಪಾಸ್‍ ಮೊದಲ ಹಂತದ ಕಾಮಗಾರಿಗಳು ತಿಂಗಳಂತ್ಯಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗಲಿವೆ. ಎರಡನೇ ಹಂತದ ಕಾಮಗಾರಿಗಳು ಮಾರ್ಚ್ ಒಳಗೆ ಪೂರ್ಣವಾಗಲಿವೆ ಎಂದರು.

ಅಷ್ಟಪಥ ಕಾರಿಡಾರ್‍ ನಿರ್ಮಾಣದ ₹350 ಕೋಟಿ ಯೋಜನೆಯಲ್ಲಿ ಭೂಸ್ವಾಧೀನಕ್ಕಾಗಿ ರೈಲ್ವೆ ಇಲಾಖೆಗೆ ₹250 ಕೋಟಿ ಠೇವಣಿ ಇಟ್ಟಿದ್ದೇವೆ. ರೈಲ್ವೆ ಇಲಾಖೆ ಅಂಡರ್‍ಪಾಸ್‍ ನಿರ್ಮಿಸುತ್ತಿದೆ. 8 ರೈಲ್ವೆ ಕೆಳ ಸೇತುವೆಗಳನ್ನು ವಾಹನ ಸಂಚಾರಕ್ಕೆ ಹಾಗೂ ಎರಡು ಕೆಳಸೇತುವೆಗಳನ್ನು ಪಾದಚಾರಿಗಳಿಗಾಗಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಪಾರಂಪಾರಿಕತೆ ಪ್ರತಿಬಿಂಬಿಸುವಂತೆ ಅಭಿವೃದ್ಧಿಪಡಿಸುತ್ತಿರುವ ಚರ್ಚ್ ಸ್ಟ್ರೀಟ್‌ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಪೂರ್ಣವಾಗಲಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಪ್ರವಾಸಿಗರನ್ನು ಸೆಳೆಯುವ ಮನ

ರಂಜನೆಯ ತಾಣವಾಗಲಿದೆ ಎಂದರು.

ಕಸ ಸಾಗಣೆ ಮತ್ತು ವಿಲೇವಾರಿಯನ್ನು ಸಮಪರ್ಕವಾಗಿ ನಿರ್ವಹಿಸಲು ನಗರದ 50 ಕಡೆಗಳಲ್ಲಿ ಟ್ರಾನ್ಸ್‌ಫರ್‌ ಕಂಟೈನರ್‌ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಮಾರ್ಚ್‌ನಿಂದ ಕಸ ಸಾಗಣೆ ನಡೆಯಲಿದೆ ಎಂದರು.

‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ಗೆ ಇದುವರೆಗೆ 6,000 ದೂರುಗಳು ಬಂದಿವೆ. ಇದರಲ್ಲಿ 3500 ದೂರು ಇತ್ಯರ್ಥವಾಗಿವೆ. ಸಮಸ್ಯೆಗಳನ್ನು ಬೇಗ ಗುರುತಿಸಲು ಮತ್ತು ಪರಿಹರಿಸಲು ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದರು.

ಎಫ್‍ಕೆಸಿಸಿಐ ಅಧ್ಯಕ್ಷ ಕೆ.ರವಿ, ಕೈಗಾರಿಕೆಗಳಿಗೆ ವಾಣಿಜ್ಯ ತೆರಿಗೆ ವಿಧಿಸದೆ ಪ್ರತ್ಯೇಕ ತೆರಿಗೆ ವ್ಯವಸ್ಥೆ ಜಾರಿಗೆ ತರಬೇಕು. ವಾಣಿಜ್ಯ, ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಹಾಗೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಪಿಣ್ಯಾ ಮತ್ತು ವೈಟ್‌ಫೀಲ್ಡ್‌ ಕೈಗಾರಿಕಾ ಪ್ರದೇಶಗಳಲ್ಲಿ ತಲಾ ₹75 ಕೋಟಿಯಂತೆ ಒಟ್ಟು ₹150 ಕೋಟಿ ವೆಚ್ಚ

ದಲ್ಲಿ ಪಾಲಿಕೆಯಿಂದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಪ್ಲಾಸ್ಟಿಕ್ ತಯಾರಕರ ಅಸೋಸಿಯೇಷನ್‍ ಅಧ್ಯಕ್ಷ ವಿಜಯ್ ಕುಮಾರ್, ಕ್ಯಾರಿ ಬ್ಯಾಗ್ ಹಾಗೂ ಫ್ಲೆಕ್ಸ್‌ ಮಾತ್ರ ಸರ್ಕಾರ ನಿಷೇಧಿಸಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಎಲ್ಲ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿಮಾಡಿ ಉತ್ಪಾದಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳ ಕಿರುಕುಳವನ್ನು ತಪ್ಪಿಸಬೇಕು ಎಂದರು.

ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಶಿವ ಷಣ್ಮುಗಂ, ರಾಜಸ್ಥಾನದ ಚೌಕಿದಾರ್‌ನಲ್ಲಿ ಅಲ್ಲಿನ ಕಲೆ, ಸಂಸ್ಕೃತಿ, ಆಹಾರ ಶೈಲಿ ಪರಿಚಯಿಸುವ ತಾಣವಿದೆ. ಅದೇ ಮಾದರಿಯಲ್ಲಿ ನಗರದಲ್ಲಿಯೂ 30 ಜಿಲ್ಲೆಗಳ ಕಲೆ, ಸಂಸ್ಕೃತಿ ಹಾಗೂ ಆಹಾರ ಶೈಲಿ ಪರಿಚಯಿಸುವ ತಾಣ ಆರಂಭಿಸುವಂತೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry