ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪ್ರೊ ಕಬ್ಬಡಿ ಟೂರ್ನಿ

Last Updated 4 ಜನವರಿ 2018, 7:49 IST
ಅಕ್ಷರ ಗಾತ್ರ

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜ. 4 ರಿಂದ 7ರವರೆಗೆ 4 ದಿನಗಳ ಕಾಲ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಪ್ರೊ ಕಬಡ್ಡಿ) ನಡೆಯಲಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಪೋರ್ಟ್ಸ್‌ ಕ್ಲಬ್‌, ಕರ್ನಾಟಕ ರಾಜ್ಯ ಮತ್ತು ಮಂಡ್ಯ ಕಬಡ್ಡಿ ಅಮೆಚೂರ್‌ ಅಸೋಸಿಯೇಷನ್‌ ಮತ್ತು ಯುವಜನ ಸೇವಾ ಇಲಾಖೆ ಸಹಯೋಗದಲ್ಲಿ ಪ್ರೊ ಕಬಡ್ಡಿ ಟೂರ್ನಿಗಳು ನಡೆಯಲಿವೆ. ಇದರಲ್ಲಿ ಜಿಲ್ಲೆಯ 8 ತಂಡಗಳು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್’ಗಾಗಿ ಸೆಣಸಾಟ ನಡೆಸಲಿವೆ. 8 ತಂಡಗಳಲ್ಲಿ ರಾಜ್ಯದ ವಿವಿಧ ಭಾಗಗಳ 120ಕ್ಕೂ ಹೆಚ್ಚು ಪ್ರಮುಖ ಕಬಡ್ಡಿ ಆಟಗಾರರು ಆಡಲಿದ್ದಾರೆ.

ಶಾಸಕ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್‌ ಮುಖಂಡ ಕೆಬ್ಬಳ್ಳಿ ಆನಂದ್‌ ‘ಫ್ರೆಂಚ್‌ ರಾಕ್ಸ್‌’ ತಂಡ, ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ‘ಸಕ್ಕರೆ ಸೀಮೆ’ ತಂಡ, ಸಮಾಜ ಸೇವಕ ಬಿ.ರೇವಣ್ಣ ‘ಮುತ್ತಿನ ಕೆರೆ’ ತಂಡ, ಗುತ್ತಿಗೆದಾರ ರವಿಭೋಜೇಗೌಡ ‘ಬೇಬಿಬೆಟ್ಟ’ ತಂಡ, ಉದ್ಯಮಿ ದರ್ಶನ್‌ ಪುಟ್ಟಣ್ಣಯ್ಯ ‘ಕನ್ನಂಬಾಡಿ ಬಾಬಾ ಜೀ’ ತಂಡ, ಉದ್ಯಮಿ ಪರಮೇಶ್‌ ಮತ್ತು ಎಚ್.ಕೃಷ್ಣೇಗೌಡ (ಕಿಟ್ಟಿ) ‘ಮೇಲುಕೋಟೆ’ ತಂಡ, ಗುತ್ತಿಗೆದಾರರಾದ ಚಂದ್ರಶೇಖರ್ ಮತ್ತು ಎಚ್.ಎನ್.ವಿಜಯಕುಮಾರ್ ‘ಕುಂತಿಬೆಟ್ಟ’ ತಂಡಗಳ ಪ್ರೋತ್ಸಾಹಕರಾಗಿದ್ದಾರೆ.

ಹೊನಲು ಬೆಳಕಿನ ಟೂರ್ನಿಗಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಒಂದು ವಾರದಿಂದಲೂ ಭಾರಿ ಸಿದ್ಧತೆ ನಡೆದಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ಟೂರ್ನಿಯನ್ನು ವೀಕ್ಷಿಸುವ ನಿರೀಕ್ಷೆಯಿದೆ. ಆಸನಗಳನ್ನು ಸಹ ನಿರ್ಮಿಸಲಾಗಿದೆ.

ಮಾಜಿ ಕ್ರೀಡಾಪಟುವೂ ಆದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕಬಡ್ಡಿ ಪಂದ್ಯಾವಳಿಯ ಸಾರಥ್ಯ ವಹಿಸಿದ್ದಾರೆ.

ಜ. 4ರಂದು ಸಂಜೆ 4ಕ್ಕೆ ಆರಂಭಗೊಳ್ಳುವ ಕಬಡ್ಡಿ ಟೂರ್ನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಉದ್ಫಾಟಿಸುವರು. ಮೈಸೂರು ವಿವಿಯ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೃಷ್ಣ ಕ್ರೀಡಾಜ್ಯೋತಿ ಸ್ವೀಕರಿಸುವರು. ಸಂಸದ ಸಿ.ಎಸ್.ಪುಟ್ಟರಾಜು ಕ್ರೀಡಾ ಸಂದೇಶ ನೀಡಲಿದ್ದಾರೆ.

ಶಾಸಕರಾದ ಎನ್.ಚಲುರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಉದ್ಯಮಿ ಬಿ.ರೇವಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌, ಮೈಸೂರು ವಿವಿಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಿಕ್ಷಣ ಸಂಸ್ಥೆಯ ಡಾ.ಸಿ.ವೆಂಕಟೇಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಯ್ಯ, ಮಂಡ್ಯ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಪಿ.ಎಂ.ಸೋಮಶೇಖರ್ ಕಾರ್ಯದರ್ಶಿ ಶಿವಲಿಂಗಪ್ಪ ಭಾಗವಹಿಸುವರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT