ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಶಾಲೆಗೆ ಕೊಠಡಿ ಕೊರತೆ

ಬಂಡಿಹಾಳ: ಒಂದೇ ಕೊಠಡಿಯಲ್ಲಿ 5ತರಗತಿಗಳು, ವಿದ್ಯಾರ್ಥಿಗಳ ಪರದಾಟ
Last Updated 4 ಜನವರಿ 2018, 11:29 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಬಂಡಿಹಾಳ ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆಯಿಂದ ಐದೂ ತರಗತಿಗಳನ್ನು ಒಂದೇ ಕೊಣೆಯಲ್ಲಿ ನಡೆಸುವ ಅನಿರ್ವಾಯತೆ ತಲೆದೋರಿದೆ.

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಹೊಸದಾಗಿ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆಯನ್ನು ಮಂಜೂರು ಮಾಡಿತು. ಹಾಗೆಯೇ ಕಳೆದ ವರ್ಷ ಕೇವಲ ಮೂರು ಕೊಠಡಿಯುಳ್ಳ ಕಟ್ಟಡವನ್ನು ಕೂಡಾ ನಿರ್ಮಿಸಿದೆ. ಆದರೆ ಮಕ್ಕಳಿಗೆ ಅನುಗುಣವಾಗಿ ಕೊಠಡಿಗಳಿಲ್ಲದ ಕಾರಣ ಪಾಠಗಳು ಸರಿಯಾಗಿ ನಡೆಯದೇ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.

‘ವಿವಿಧ ತರಗತಿಯ ಮಕ್ಕಳಿಗೆ ಪ್ರತ್ಯೇಕ ಪಾಠ ಮಾಡಲು ಸಾಧ್ಯವಾಗದೇ ಶಾಲೆಯ ಹೊರಾಂಗಣದಲ್ಲಿ ಎಲ್ಲ  ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದರಿಂದ ಐದನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಒಂದು ಕೊಠಡಿಯನ್ನು ಕಚೇರಿಯನ್ನಾಗಿ ಮಾಡಿಕೊಂಡಿದ್ದು, ಉಳಿದ ಎರಡು ಕೋಣೆಗಳಲ್ಲಿ ಒಂದು ನಲಿ-ಕಲಿ ಕೋಣೆಗೆ ಸೀಮಿತವಾಗಿದೆ. ಉಳಿದ ಒಂದು ಕೋಣೆಯಲ್ಲಿ 5 ತರಗತಿಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಶಿಕ್ಷಕರಿಗಿದೆ’ ಎನ್ನುತ್ತಾರೆ ಪಾಲಕರು.

‘ಈ ಕೊರತೆಯಿಂದ ಪರಿಣಾಮಕಾರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಒಂದೇ ಸೂರಿನಡಿಯಲ್ಲಿ ದಾಖಲಾದ 70ಕ್ಕೂ ಅಧಿಕ ಸಂಖ್ಯೆಯ ಮಕ್ಕಳನ್ನು ಕೂಡಿಸಿಕೊಂಡು ಪಾಠ ಮಾಡುವ ಪರಿಸ್ಥಿತಿ ಇದೆ. ಇದರಿಂದಾಗಿಯೇ ಅನೇಕ ಮಕ್ಕಳು ನಗರ ಪ್ರದೇಶಗಳಲ್ಲಿನ ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ’ ಎಂದು ಸ್ಥಳೀಯ ಯುವ ಮುಖಂಡ ಶರಣು ಕಳಸಪ್ಪನವರ ಬೇಸರ ವ್ಯಕ್ತಪಡಿಸಿದ್ದಾರೆ.

‘ಕುಡಿಯುವ ನೀರಾಗಲಿ, ಶೌಚಾಲಯವಾಗಲಿ ಈ ಶಾಲೆಯಲ್ಲಿಲ್ಲ, ಇನ್ನೂವರೆಗೂ ಶಾಲಾಭಿವೃದ್ಧಿ ಸಮಿತಿ ರಚನೆಯಾಗಿಲ್ಲ. ಇದ್ದರಿಂದಾಗಿ ಶಾಲೆಯ ಬೇಡಿಕೆಗಳ ಬಗ್ಗೆ ಯಾರು ಚಿಂತಿಸದಂತಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕೂಡಾ ಸರಿಯಾಗಿ ಶಾಲೆಗೆ ಬರದೇ ಅನಧಿಕೃತ ಗೈರಾಗುತ್ತಿದ್ದಾರೆ. ಶಿಕ್ಷಣಾಧಿಕಾರಿ ಒಮ್ಮೆಯಾದರೂ ಈ ಶಾಲೆಗೆ ಭೇಟಿ ನೀಡಿಲ್ಲ. ಇದರಿಂದಾಗಿ ಈ ಶಾಲೆ ಇದ್ದರೂ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಇದೇ ರೀತಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಶಾಸಕರ ಕಚೇರಿ ಎದುರು ಧರಣಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಶೈಕ್ಷಣಿಕವಾಗಿ ಮಾದರಿ ತಾಲ್ಲೂಕು ಎಂದು ಹೇಳಿಕೊಳ್ಳುತ್ತಿರುವ ಉನ್ನತ ಶಿಕ್ಷಣ ಸಚಿವರಿಗೆ ಹಳ್ಳಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವ ಬಗ್ಗೆ ಗೊತ್ತಿಲ್ಲ. ಕೊರತೆ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

‘ಗ್ರಾಮೀಣ ಪ್ರದೇಶದ ಶೈಕ್ಷಣಿಕ ಸುಧಾರಣೆಗೆ ಯಾವುದೇ ಅನುಕೂಲ ಮಾಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಜನಪ್ರತಿನಿಧಿಗಳು ಇದ್ದು, ಇಲ್ಲದಂತಿದ್ದಾರೆ. ಪಾಲಕರು ತಮ್ಮ ಮಕ್ಕಳ ಪರಿಸ್ಥಿತಿ ಕಂಡು ಮರುಗುವಂತಾಗಿದೆ. ಅಧಿಕಾರಿಗಳು ಇತ್ತ ಕಡೆ ವಿಶೇಷ ಗಮನಕೊಟ್ಟು ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಗೊಳಿಸಬೇಕು’ ಎಂದು ಶ್ರೀಶೈಲಗೌಡ, ಕೊಟ್ರೇಶ, ಶ್ರೀಗಿರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT