ಮಂಗಳವಾರ, ಆಗಸ್ಟ್ 11, 2020
26 °C
ಮಕ್ಕಳಿಗೆ ಗೋಹತ್ಯೆ ನಿಷೇಧದ ಅರ್ಜಿ ವಿತರಣೆ ಆರೋಪ

ಶಿಕ್ಷಕರ ಅಮಾನತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಗೋಹತ್ಯೆ ನಿಷೇಧ ಮಾಡುವಂತೆ ಮಕ್ಕಳಿಗೆ ಅರ್ಜಿಗಳನ್ನು ವಿತರಿಸಿ ಒತ್ತಾಯ ಪೂರ್ವಕವಾಗಿ ಪೋಷಕರಿಂದ ಸಹಿ ಪಡೆಯಲು ಮುಂದಾಗಿರುವ ಶಿಕ್ಷಕರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ದಸಂಸ ಜಿಲ್ಲಾ ಘಟಕದ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ‘ತಾಲ್ಲೂಕಿನ ಆದರ್ಶ ವಿದ್ಯಾಲಯ ಹಾಗೂ ಯಳಂದೂರು ಪಟ್ಟಣದ ಲಯನ್ಸ್ ಶಾಲೆಗಳಲ್ಲಿ ಈಚೆಗೆ ಗೋಹತ್ಯೆ ನಿಷೇಧ ಸಂಬಂಧ ವಿದ್ಯಾರ್ಥಿಗಳಿಗೆ ಅರ್ಜಿ ವಿತರಿಸಲಾಗಿತ್ತು. ಪೋಷಕರಿಂದ ಬಲವಂತವಾಗಿ ಅರ್ಜಿಗೆ ಸಹಿ ಪಡೆಯಲು ತಿಳಿಸಲಾಗಿತ್ತು. ಇದು ಸಂವಿಧಾನದ ಆಹಾರ ಹಕ್ಕಿನ ಉಲ್ಲಂಘನೆಯ ಭಾಗವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಾರದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ದೂರಿದರು.

‘ಗೋಹತ್ಯೆ ವಿಷಯದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಸಂಘ ಪರಿವಾರದ ಯೋಜನೆಗಳನ್ನು ಜಾರಿಗೆ ತರುವ ಮನಸ್ಥಿತಿಯವರು ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಭಾಗಿಯಾಗಿರುವ ಶಂಕೆ ಇದೆ. ಆದರ್ಶ ಶಾಲೆಯಲ್ಲಿ ಬಿಇಒ ಖುದ್ದಾಗಿ ಹಾಜರಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಪಟ್ಟಣದ ಲಯನ್ಸ್ ಶಾಲೆಯಲ್ಲಿ ಬಿಆರ್‌ಪಿ ಮತ್ತು ಸಿಆರ್‌ಪಿ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ. ತಪ್ಪಿತಸ್ಥ ಶಿಕ್ಷಕರನ್ನು ಅಮಾನತಿನಲ್ಲಿ ಇಡಬೇಕು’ ಎಂದು ಆಗ್ರಹಿಸಿದರು.

ಉಪ ನಿರ್ದೇಶಕ ಕೆ. ಮಹಾದೇವಪ್ಪ ಸ್ಥಳಕ್ಕೆ ಭೇಟಿ ನೀಡಿ, ‘ಬಿಇಒ ಅವರಿಂದ ವರದಿ ಪಡೆದು 2 ದಿನಗಳ ಒಳಗೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ಬಿಇಒ ಮಲ್ಲಿಕಾರ್ಜುನ, ಉಪನಿರ್ದೆ ಶಕರ ಕಚೇರಿಯ ವಿಷಯ ಪರಿವೀಕ್ಷಕ ಮಹದೇವ, ತಾಪಂ ಸದಸ್ಯ ವೈ.ಕೆ. ಮೋಳೆ ನಾಗರಾಜು, ಸಮತಾ ಸೈನಿಕ ದಳದ ಸಂಘಸೇನಾ, ಕೆ.ಎಂ. ನಾಗರಾಜು, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ಚಕ್ರವರ್ತಿ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಮುಖಂಡ ಪಿ.ಮಾದೇಶ್, ಚಂದ್ರಶೇಖರ್, ಕೃಷ್ಣಮೂರ್ತಿ, ಸಿದ್ದರಾಜು, ಮದ್ದೂರು ಅನಂತ್, ಸ್ವಾಮಿ ಕೊಮಾರನಪುರ, ದುಗ್ಗಹಟ್ಟಿ ಮಾದೇಶ್, ಸೋಮಣ್ಣ, ರಾಮಪುರ ರಂಗಸ್ವಾಮಿ, ಕಾಳಿಪ್ರಸಾದ್, ಲಿಂಗರಾಜು, ಮಂಜು ನಾಥ್, ಮಲ್ಲರಾಜು, ಶಂಕರಮೂರ್ತಿ ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.