ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಹೇಳಿಕೆಗೆ ವಿಶ್ವಾಸಾರ್ಹತೆ ಇಲ್ಲ: ಭಾರತ ತಿರುಗೇಟು

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ/ಇಸ್ಲಾಮಾಬಾದ್‌: ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ‘ತಪ್ಪೊಪ್ಪಿಗೆ’ಯ ಇನ್ನೊಂದು ವಿಡಿಯೊವನ್ನು ಪಾಕಿಸ್ತಾನ ಗುರುವಾರ ಬಿಡುಗಡೆ ಮಾಡಿದೆ. ಬಲವಂತದಿಂದ ಜಾಧವ್‌ ಅವರಿಂದ ಹೇಳಿಕೆ ನೀಡಿಸಿ ಅಪಪ‍್ರಚಾರ ಮಾಡುವ ಪ್ರಯತ್ನಕ್ಕೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ಭಾರತ ತಿರುಗೇಟು ನೀಡಿದೆ.

ತಾವು ಈಗಲೂ ಭಾರತೀಯ ನೌಕಾಪಡೆಯ ಅಧಿಕಾರಿ ಎಂದು ಜಾಧವ್‌ ವಿಡಿಯೊದಲ್ಲಿ ಹೇಳಿದ್ದಾರೆ. ಜತೆಗೆ, ಕಳೆದ ಡಿ. 25ರಂದು ಕುಟುಂಬದ ಸದಸ್ಯರು ಬಂದಾಗ ಅವರ ಜತೆಗಿದ್ದ ಭಾರತದ ಅಧಿಕಾರಿಯು ತಮ್ಮ ತಾಯಿಯನ್ನು ಗದರಿದ್ದಾರೆ ಎಂದೂ ವಿಡಿಯೊದಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಈ ವಿಡಿಯೊ ಅಸಲಿಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

‘ಭಾರತದ ಜನರು, ಸರ್ಕಾರ ಮತ್ತು ನೌಕಾಪಡೆಗೆ ನಾನು ಒಂದು ಬಹಳ ಮುಖ್ಯವಾದ ವಿಚಾರವನ್ನು ಹೇಳಬೇಕಿದೆ. ನೌಕಾಪಡೆಯಲ್ಲಿ ನನ್ನ ನಿಯೋಜನೆ ಮುಕ್ತಾಯಗೊಂಡಿಲ್ಲ. ನಾನು ಈಗಲೂ ಭಾರತದ ನೌಕಾಪಡೆಯ ಅಧಿಕಾರಿ. ಗುಪ್ತಚರ ಸಂಸ್ಥೆಯಲ್ಲಿ ನನ್ನ ಕೆಲಸದ ಬಗ್ಗೆ ನೀವು ಯಾಕೆ ಸುಳ್ಳು ಹೇಳುತ್ತಿದ್ದೀರಿ’ ಎಂದು ಜಾಧವ್‌ ಹೇಳಿರುವಂತೆ ಚಿತ್ರಿಸಲಾಗಿರುವ ವಿಡಿಯೊದಲ್ಲಿ ಹೇಳಲಾಗಿದೆ. 

ಜಾಧವ್‌ ಮತ್ತು ಅವರ ಕುಟುಂಬದ ಭೇಟಿಗೆ ಸಂಬಂಧಿಸಿ ಎರಡೂ ದೇಶಗಳ ನಡುವೆ ಆಗಿದ್ದ ಸಹಮತವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಎರಡು ದಿನಗಳ ಹಿಂದೆ ಭಾರತ ಆರೋಪಿಸಿತ್ತು. ಹಾಗೆಯೇ ಜಾಧವ್‌ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು.

ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಡಿ. 25ರಂದು ನಡೆದ ಭೇಟಿಯ ಸಂದರ್ಭದಲ್ಲಿ ಜಾಧವ್‌ ಅವರು ಬಲವಂತಕ್ಕೆ ಒಳಗಾದಂತೆ ಮತ್ತು ಭಾರಿ ಒತ್ತಡದಲ್ಲಿ ಇರುವಂತೆ ಕಾಣಿಸುತ್ತಿದ್ದರು ಎಂದು ಭಾರತ ಹೇಳಿತ್ತು. ಅದಾಗಿ ಎರಡು ದಿನಗಳ ಬಳಿಕ ಪಾಕಿಸ್ತಾನ ಈ ವಿಡಿಯೊ ಬಿಡುಗಡೆ ಮಾಡಿದೆ.

ಭೇಟಿಯ ಸಂದರ್ಭದಲ್ಲಿ ಜಾಧವ್‌ ಮತ್ತು ಅವರ ಕುಟುಂಬದ ಸದಸ್ಯರನ್ನು ಗಾಜಿನ ಗೋಡೆಯ ಎರಡು ಬದಿಗಳಲ್ಲಿ ಕುಳ್ಳಿರಿಸಲಾಗಿತ್ತು. ಅವರು ಎದುರು ಬದುರು ಕುಳಿತು ಫೋನ್‌ ಮೂಲಕ ಸಂವಹನ ನಡೆಸಿದ್ದರು. ಸುಮಾರು 40 ನಿಮಿಷದ ಈ ಭೇಟಿಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ.

‘ನನ್ನ ತಾಯಿಯ ಕಣ್ಣುಗಳಲ್ಲಿ ಭೀತಿ ಇತ್ತು. ತಾಯಿ ಹೊರಗೆ ಹೋದಾಗ ಅವರನ್ನು ಭಾರತದ ಅಧಿಕಾರಿ ಗದರಿದ್ದಾರೆ. ಅವರು ಗದರಿದ್ದನ್ನು, ಕಿರುಚಾಡಿದ್ದನ್ನು ನಾನು ನೋಡಿದ್ದೇನೆ. ಆದರೂ ಈ ಭೇಟಿ ಒಂದು ಸಕಾರಾತ್ಮಕ ಕ್ರಮ. ಇದರಿಂದಾಗಿ ತಾಯಿ ಮತ್ತು ನಾನು ಸಂತೋಷವಾಗಿರುವುದು ಸಾಧ್ಯ’ ಎಂದು ಈಗ ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಜಾಧವ್‌ ಹೇಳಿದ್ದಾರೆ.

ಭೇಟಿಯ ಕೋಣೆಯಿಂದ ಜಾಧವ್‌ ತಾಯಿಯು ಹೊರಹೋದ ಬಳಿಕ ಅವರನ್ನು ನೋಡುವುದು ಜಾಧವ್‌ಗೆ ಹೇಗೆ ಸಾಧ್ಯವಾಯಿತು ಎಂಬುದು ಸ್ಪಷ್ಟವಾಗಿಲ್ಲ.

ಜಾಧವ್‌ರನ್ನು ಕಳೆದ ಮಾರ್ಚ್‌ನಲ್ಲಿ ಬಲೂಚಿಸ್ತಾನದಲ್ಲಿ ಸೆರೆಹಿಡಿಯಲಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಅವರನ್ನು ಇರಾನ್‌ನಿಂದ ಅಪಹರಣ ಮಾಡಲಾಗಿದೆ ಎಂದು ಭಾರತ ವಾದಿಸುತ್ತಿದೆ.

‘ಹಳೆ ಚಾಳಿ ಮುಂದುವರಿಕೆ’
‘ಇದು ಆಶ್ಚರ್ಯವೇನೂ ಅಲ್ಲ. ಬಲವಂತದಿಂದ ಹೇಳಿಕೆ ನೀಡಿಸಿ ಅದನ್ನು ಚಿತ್ರೀಕರಿಸಿ ವಿಡಿಯೊ ಬಿಡುಗಡೆ ಮಾಡುವ ಚಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ. ಆದರೆ, ಇಂತಹ ಅಪಪ್ರಚಾರದ ಕಸರತ್ತುಗಳಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಪಾಕಿಸ್ತಾನ ಬಿಡುಗಡೆ ಮಾಡಿದ ವಿಡಿಯೊ ಬಗ್ಗೆ ಹೇಳಿದ್ದಾರೆ.

ತಮ್ಮನ್ನು ಪಾಕಿಸ್ತಾನ ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದೂ ಜಾಧವ್‌ ವಿಡಿಯೊದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀಶ್‌, ‘ಬಂಧನದಲ್ಲಿರುವ ವ್ಯಕ್ತಿಯು ತಾನು ಚೆನ್ನಾಗಿದ್ದೇನೆ ಎಂದು ಹೇಳಿಕೊಳ್ಳುವ ಮತ್ತು ಬಂಧನದಲ್ಲಿ ಇರಿಸಿದವರು ಮಾಡುತ್ತಿರುವ ಆರೋಪವನ್ನು ಪುನರುಚ್ಚರಿಸುವ ಅಸಂಗತ ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವೇ ಇಲ್ಲ’ ಎಂದಿದ್ದಾರೆ.

ಕಾನ್ಸಲ್‌ ಸಂಬಂಧಗಳಿಗೆ ಗೌರವ ನೀಡುವುದು, ಭಯೋತ್ಪಾದನೆಗೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಸರಿಸುವುದು ಮತ್ತು ಭಾರತದ ಪ್ರಜೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸುವ ಮೂಲಕ ಪಾಕಿಸ್ತಾನವು ತನ್ನ ಅಂತರರಾಷ್ಟ್ರೀಯ ಹೊಣೆಗಾರಿಕೆಗೆ ಬದ್ಧವಾಗಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT