ಶನಿವಾರ, ಜೂಲೈ 4, 2020
21 °C

ಸಚಿವ, ಹೆಬ್ಬಾಳಕರ ವಿರುದ್ಧ ಶಾಸಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ, ಹೆಬ್ಬಾಳಕರ ವಿರುದ್ಧ ಶಾಸಕರ ಆಕ್ರೋಶ

ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿದ ನನ್ನನ್ನೇ ಆಹ್ವಾನಿಸದೆ ಕಾಮಗಾರಿಗಳಿಗೆ ತರಾತುರಿಯಲ್ಲಿ ಪೂಜೆ ನೆರವೇರಿಸಲಾಗಿದೆ. ಹಕ್ಕುಚ್ಯುತಿಯಾಗಿದೆ ಹಾಗೂ ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಇಲ್ಲಿನ ನಗರಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಧರಣಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ, ಪಾಲಿಕೆ ಆಯುಕ್ತ ಶಶಿಧರ ಕುರೇರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪಾಲಿಕೆಗಳಿಗೆ ₹ 100 ಕೋಟಿ ವಿಶೇಷ ಅನುದಾನ ನೀಡುವುದು ಆರಂಭವಾಯಿತು. ನಂತರವೂ ಮುಂದುವರಿದಿದೆ. ಈ ಅನುದಾನದಲ್ಲಿ ಕೈಗೊಳ್ಳುವ ಕ್ರಿಯಾಯೋಜನೆಗೆ ಉಸ್ತುವಾರಿ ಸಚಿವರು, ಉತ್ತರ, ದಕ್ಷಿಣ, ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರನ್ನು ಒಳಗೊಂಡ ಸಮಿತಿ ಅನುಮೋದನೆ ನೀಡುತ್ತದೆ. ಕ್ಷೇತ್ರಕ್ಕೆ ₹ 9 ಕೋಟಿ ಅನುದಾನ ಮಂಜೂರು ಮಾಡಿಸಿದ್ದು ನಾನು. ಆದರೆ, ಲಕ್ಷ್ಮಿ ಹೆಬ್ಬಾಳಕರ ಎಂದು ಹೇಳಿಕೊಂಡು ಸುಳ್ಳು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಅವರೇನು ಶಾಸಕರೇ?’ ಎಂದು ಕೇಳಿದರು.

ಒಳ್ಳೆಯ ಸಂಬಂಧದ ದುರುಪಯೋಗ: ‘ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಆದರೆ, ಈಗಿನ ಸಚಿವರು ನಮ್ಮನ್ನೆಲ್ಲ ಕಡೆಗಣಿಸಿದ್ದಾರೆ. ಸಚಿವರ ಜತೆಗಿರುವ ಒಳ್ಳೆಯ ಸಂಬಂಧವನ್ನು ಲಕ್ಷ್ಮಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಸಚಿವರು ಕಾಂಗ್ರೆಸ್‌ ನಾಯಕರೋ, ಒಬ್ಬ ವ್ಯಕ್ತಿಯ ನಾಯಕರೋ ಸ್ಪಷ್ಟಪಡಿಸಲಿ. ಸಂಜಯ ಪಾಟೀಲ ಎಲ್ಲವನ್ನೂ ಬಿಟ್ಟು ನಿಂತಿದ್ದಾನೆ. ನ್ಯಾಯ, ಧರ್ಮಕ್ಕಾಗಿ ಹೋರಾಡುತ್ತಾನೆ. ಅನುದಾನ ಮಂಜೂರು ಮಾಡಿಸುವ ಅಧಿಕಾರ ಶಾಸಕರಿಗಿದೆಯೋ, ಲಕ್ಷ್ಮಿಗಿದೆಯೋ? ಅವರಿಗಿದೆ ಎನ್ನುವುದಾದರೆ ಸನ್ಮಾನ ಮಾಡುತ್ತೇನೆ. ಇಲ್ಲವಾದರೆ ನನ್ನ ಕ್ಷಮೆ ಕೇಳಬೇಕು. ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ಸವಾಲು ಹಾಕಿದರು.

‘ಅವರ ಕಡೆ ಹಣ ಇರಬಹುದು. ನನ್ನೊಂದಿಗೆ ಜನ ಇದ್ದಾರೆ. ಹಣವೊಂದಿದ್ದರೆ ಅಧಿಕಾರ ಪಡೆಯಬಹುದು ಎನ್ನುವ ಭ್ರಮೆಯನ್ನು ಬಿಡಬೇಕು’ ಎಂದು ಹೆಬ್ಬಾಳಕರ ವಿರುದ್ಧ ಆಕ್ರೋಶ ವ್ಯಕ್ತ‍ಪಡಿಸಿದರು.

‘ಸಚಿವರು ಶಿಷ್ಟಾಚಾರ ಪಾಲಿಸುತ್ತಿಲ್ಲ. ಒಬ್ಬ ವ್ಯಕ್ತಿಯ ಬೆನ್ನಿಗೆ ಬಿದ್ದು ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ. ಶಾಸಕನಾದ ನನಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಗ್ರಾಮೀಣ ಕ್ಷೇತ್ರದಲ್ಲೇ ಓಡಾಡಿದ್ದಾರೆ, ಸೀರೆ ಹಂಚಿದ್ದಾರೆ. ಏಕೆ, ಕಾಂಗ್ರೆಸ್‌ನವರ ಬೇರೆ ಕ್ಷೇತ್ರಗಳಿಲ್ಲವೇ’ ಎಂದು ಪ್ರಶ್ನಿಸಿದರು.

ಮೊಬೈಲಲ್ಲೇ ತರಾಟೆ: ‘ಪಾಲಿಕೆ ಆಯುಕ್ತರು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬೇರೆ ಶಾಸಕರ ಮನೆಗೆ ಹೋಗುತ್ತಾರೆ. ಆದರೆ, ನನಗೆ ಕರೆ ಮಾಡಿ ಕಾರ್ಯಕ್ರಮದ ಮಾಹಿತಿ ನೀಡುವುದಕ್ಕೆ ಆಗುವುದಿಲ್ಲವೇ? ಅವರ ಯಾವ ಪತ್ರವೂ ನನಗೆ ಬಂದಿಲ್ಲ’ ಎಂದು ದೂರಿದರು.

ಆಯುಕ್ತರು ಬಂದು ಸ್ಪಷ್ಟನೆ ನೀಡಬೇಕು ಎಂದು ಪಟ್ಟುಹಿಡಿದರು. ನಂತರ ಮೊಬೈಲ್‌ಗೆ ಕರೆ ಮಾಡಿದ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಅವರ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸುವುದಾಗಿ ತಿಳಿಸಿದರು. ಉಸ್ತುವಾರಿ ಸಚಿವರ ಜತೆ ಇರುವುದರಿಂದ, ಧರಣಿ ಸ್ಥಳಕ್ಕೆ ಬರಲು ಆಗುತ್ತಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಶಾಸಕರು ಉಪ ಆಯುಕ್ತರಿಗೆ ಮನವಿ ಸಲ್ಲಿಸಿ, ಧರಣಿ ಕೈಬಿಟ್ಟಿರು.

‘ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದ ಕುರಿತು ಶಾಸಕರಿಗೆ ಪತ್ರ ಕಳುಹಿಸಲಾಗಿತ್ತು. ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ’ ಎಂದು ಆಯುಕ್ತ ಶಶಿಧರ ಕುರೇರ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.