ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯಾಗದ ಸಂತ್ರಸ್ತರ ಪರಿಹಾರ ನಿಧಿ: ವಿಷಾದ

Last Updated 5 ಜನವರಿ 2018, 8:58 IST
ಅಕ್ಷರ ಗಾತ್ರ

ಬಳ್ಳಾರಿ: ‘ಯಾವ ಹೆಣ್ಣೂ ಅತ್ಯಾಚಾರವಾಗಿದೆ ಎಂದು ದೂರಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಿಲ್ಲ. ಪ್ರಕರಣ ದಾಖಲಾದ ಕೂಡಲೇ ಪರಿಹಾರ ನೀಡುವುದು ನಿಮ್ಮ ಜವಾಬ್ದಾರಿ. ಮನುಷ್ಯತ್ವ ರೂಢಿಸಿಕೊಳ್ಳಿ.ನಿಮ್ಮಂಥ ಅಧಿಕಾರಿಗಳು ಇರುವುದರಿಂದಲೇ ಪರಿಹಾರ ನಿಧಿ ಸರಿಯಾಗಿ ಬಳಕೆಯಾಗಿಲ್ಲ’

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹ್ಮದ್‌ ಸರ್ವರ್‌ ಅವರನ್ನು ಮಹಿಳೆ ಮತ್ತು ಮತ್ತು ಮಕ್ಕಳ ಮೇಲಿನ ಶೋಷಣೆ,ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ತರಾಟೆಗೆ ತೆಗೆದುಕೊಂಡ ಬಗೆ ಇದು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಅವರು ಈ ಅಧಿಕಾರಿಗಳನ್ನಷ್ಟೇ ಅಲ್ಲದೆ ನಗರದ ಸಾಂತ್ವನ ಕೇಂದ್ರದ ವ್ಯವಸ್ಥಾಪಕ ಬಿ.ಡಿ.ಗೌಡ ಹಾಗೂ ಮೂವರು ಸರ್ಕಾರಿ ವಕೀಲರನ್ನೂ ತರಾಟೆಗೆ ತೆಗೆದುಕೊಂಡರು.

‘₹2000 ಕೋಟಿ ಮೀಸಲಿರುವ ಕೇಂದ್ರ ಸಂತ್ರಸ್ತ ಪರಿಹಾರ ನಿಧಿಯ ಬಗ್ಗೆ ತಿಳಿದುಕೊಳ್ಳದೇ ಸರ್ಕಾರಿ ಸಂಬಳವನ್ನು ಪಡೆದು ಈ ರೀತಿ ಕೆಲಸ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ’ ಎಂದು ಕೇಳಿದ ಅವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಕಡೆಗೆ ತಿರುಗಿ ’ಜಿಲ್ಲೆಯಲ್ಲಿನ ಈ ಸನ್ನಿವೇಶ ನನ್ನಲ್ಲಿ ತೀವ್ರ ವಿಷಾದ ಮೂಡಿಸಿದೆ’ ಎಂದರು.

ಅದಕ್ಕೆ ಕ್ಷಮೆಯಾಚಿಸಿದ ರಾಜೇಂದ್ರ, ‘ಒಂದು ವಾರದೊಳಗೆ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಗುವುದು. ಸಂತ್ರಸ್ತರಿಗೆ ಪರಿಹಾರ ವಿತರಿಸಿ ವರದಿ ಸಲ್ಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

’ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸ್ಥೈರ್ಯ ನಿಧಿ ಯೋಜನೆಯ ಅನುದಾನವನ್ನು ಇಲಾಖೆ ಉಪನಿರ್ದೇಶಕರು ಕೊಡುತ್ತಾರೆ. ನಾವು ಗಮನ ಹರಿಸುವುದಿಲ್ಲ’ ಎಂದು ಹೇಳಿದ ಮಹ್ಮದ್‌ ಸರ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಉಗ್ರಪ್ಪ ‘ಇಲಾಖೆಯೊಂದಿಗೆ ಸಮನ್ವಯ ಸಾಧಿಸದೇ ಸಂತ್ರಸ್ತರ ಪರವಾಗಿ ಕೆಲಸ ಮಾಡದ ನಿಮ್ಮನ್ನು ಅಮಾನತ್ತು ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅತ್ಯಾಚಾರ ಸಂತ್ರಸ್ತರ ವಿಶೇಷ ಚಿಕಿತ್ಸಾ ಘಟಕದ ಮಾಹಿತಿ ನೀಡಲು ಆಗದೆ, ಮಾಹಿತಿ ನೀಡುವಂತೆ ಘಟಕದ ಆಪ್ತಸಮಾಲೋಚಕಿಗೆ ಸೂಚಿಸಿದ ಉಪನಿರ್ದೇಶಕ ಬಿಲ್ವಾ ಅವರೆಡೆಗೆ ಅಸಮಾಧಾನದ ನೋಟ ಹರಿಸಿದ ಅವರು, ‘ಏನು ಮೂರ್ಖತನ ನಿಮ್ಮದು? ಆ ಹೆಣ್ಣು ಮಗುವಿನ ಮೇಲೆ ಜವಾಬ್ದಾರಿ ಹಾಕಿ ಸುಮ್ಮನಾಗ್ತೀರಿ?’ ಎಂದರು.

‘ಪೋಕ್ಸೋ ಕಾಯ್ದೆ ಅಡಿ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿಸಲು ಆಗದಿದ್ದರೆ ನಿಮ್ಮನ್ನು ಸಮಿತಿಯಿಂದ ತೆಗೆಯುವಂತೆ ಶಿಫಾರಸು ಮಾಡಬೇಕಾಗುತ್ತದೆ. ನೀವು ನ್ಯಾಯಾಧೀಶರ ಅಧೀನ ಅಧಿಕಾರಿಯಲ್ಲ ಎಂಬುದು ನೆನಪಿರಲಿ’ ಎಂದು ಕಾಯ್ದೆ ಅನುಷ್ಠಾನ ಸಮಿತಿಯ ಮಹಿಳಾ ವಕೀಲರಿಗೆ ಎಚ್ಚರಿಕೆ ನೀಡಿದರು.

ಇದೇ ವಿಷಯದ ಕುರಿತು, ನ್ಯಾಯಾಧೀಶರ ಗಮನ ಸೆಳೆಯಲು ಹಿಂಜರಿಕೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಅವರ ಅಭಿಪ್ರಾಯವನ್ನು ಉಗ್ರಪ್ಪ ಒಪ್ಪಲಿಲ್ಲ. ‘ನೀವೊಬ್ಬ ಕಾನೂನು ಬದ್ಧ ಅಧಿಕಾರಿಯಾಗಿ ನಿಮ್ಮ ಕೆಲಸ ಮಾಡಿ’ ಎಂದರು.

ಪೋಕ್ಸೋ ಕಾಯ್ದೆಯಲ್ಲಿ ಆಗಿರುವ ತಿದ್ದುಪಡಿಯ ಪ್ರಕಾರ, ಅತ್ಯಾಚಾರ ಆರೋಪಿಗೆ ಶಿಕ್ಷೆ ಎಷ್ಟು ದಿನದೊಳಗೆ ಪ್ರಕಟವಾಗಬೇಕು’ ಎಂಬ ಅವರ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಇನ್ನಿಬ್ಬರು ಮಹಿಳಾ ಸರ್ಕಾರಿ ವಕೀಲರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉಗ್ರಪ್ಪ, ‘ವಕೀಲರು ಹೇಗಿರುತ್ತಾರೋ ಹಾಗೆ ಆಡಳಿತವಿರುತ್ತದೆ. ನಿಮಗೇ ಕಾನೂನು ಕಾಯ್ದೆ ಅರಿವಿಲ್ಲದಿದ್ದರೆ ಸಂತ್ರಸ್ತರಿಗೆ ನೆರವು ಹೇಗೆ ದೊರಕುತ್ತದೆ’ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಸಮಿತಿಯ ಮತ್ತೊಬ್ಬ ಸದಸ್ಯ ಶರಣಪ್ಪ ಮಟ್ಟೂರು ತೀವ್ರ ಹತಾಶೆಯಿಂದ ‘ನೀವು ವಕೀಲರಾಗಿರಲು ಯೋಗ್ಯರಲ್ಲ’ ಎಂದೂ ಹೇಳಿದರು. ಸಮಿತಿ ಸದಸ್ಯರಾದ ಎನ್‌.ಪ್ರಭಾ ಮತ್ತು ಲೀಲಾ ಸಂಪಿಗೆ, ಪಾಲಿಕೆ ಆಯುಕ್ತೆ ಜೆ.ಆರ್‌.ಜೆ .ದಿವ್ಯಪ್ರಭು ಇದ್ದರು.

₹35,000 ಗೌರವಧನ ಬೇಕೆ?
ಬಳ್ಳಾರಿ: ‘ಪೋಕ್ಸೋ ಪ್ರಕರಣಗಳ ಸಂಬಂಧ ನೀವು ವಿಚಾರಣೆಗೆ ಹಾಜರಾಗಲಿ, ಹಾಜರಾಗದೇ ಇರಲಿ ನಿಮಗೆ ಸರ್ಕಾರ ₹35,000 ಗೌರವಧನ ಕೊಟ್ಟೇ ಕೊಡುತ್ತದೆ. ಹಾಗಿದ್ದರೂ ನೀವು ಪ್ರಕರಣಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲು ಏಕೆ ಪ್ರಯತ್ನಿಸುವುದಿಲ್ಲ’ ಎಂದು ಉಗ್ರಪ್ಪ ಅವರು ಸರ್ಕಾರಿ ವಕೀಲ ಶರಣಬಸವನಗೌಡ ಅವರನ್ನು ಪ್ರಶ್ನಿಸಿದರು.

‘ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು ಒಂದು ವರ್ಷದೊಳಗೆ ಪೂರ್ಣಗೊಂಡಿಲ್ಲ ಎಂದು ಯಾರಾದರೂ ದಾವೆ ಹೂಡಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ಗೊತ್ತೆ‘ ಎಂದು ಕೇಳಿದಾಗ ವಕೀಲರು ತಲೆ ತಗ್ಗಿಸಿದರು.

ಮೊದಲ ಪತ್ನಿಗೆ ‘ಸಾಂತ್ವನ’
ಬಳ್ಳಾರಿ: ‘ವ್ಯಕ್ತಿಯೊಬ್ಬರ ಎರಡನೇ ಪತ್ನಿಯಿಂದ ಮೊದಲನೇ ಪತ್ನಿಗೆ ಆಗುತ್ತಿದ್ದ ಕಿರುಕುಳವನ್ನು ತಪ್ಪಿಸಿದೆವು’ ಎಂದು ಹೇಳಿದ ಬಳ್ಳಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಉಗ್ರಪ್ಪ, ‘ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗುವುದು ಕಾನೂನು ಪ್ರಕಾರ ಅಪರಾಧ. ಮದುವೆಯಾದವರ ವಿರುದ್ಧ ಕ್ರಮ ಕೈಗೊಳ್ಳದ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT