ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಯಲ್ಲೂ ಕಟ್ಟಿಕೊಂಡ ಪ್ರಭಾವಳಿ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಹಾಂಕಾಂಗ್‌ನಲ್ಲಿ ಹುಟ್ಟಿದ ಹುಡುಗಿಗೆ ಮೂವರು ಅಕ್ಕಂದಿರು, ಮೂವರು ತಂಗಿಯರು. ಒಬ್ಬ ಅಣ್ಣ. ಅಪ್ಪ-ಅಮ್ಮ ಬೇರೆಯಾದರು. ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಅಮ್ಮ ಅಷ್ಟೂ ಮಕ್ಕಳನ್ನು ತಾವೇ ಬೆಳೆಸಿದರು. ಹಾಂಕಾಂಗ್‌ನಲ್ಲಿ ಶುರುವಾದ ಪ್ರಯಾಣ ಚೀನಾ, ಜಪಾನ್, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಹಾದು, ಪೂರ್ವ ಯುರೋಪ್‌ವರೆಗೆ ಮುಂದುವರಿಯಿತು. ಅಲ್ಲಿಂದ ಪೋಲೆಂಡ್, ಹವಾಯ್ ದಾಟಿ ನೆಲೆ ನಿಂತದ್ದು ಇಂಗ್ಲೆಂಡ್‌ನ ಲಂಡನ್‌ನಲ್ಲಿ.

ಬ್ರಿಟಿಷ್ ಅಮ್ಮನ ಮಮಕಾರದಲ್ಲಿ ಬೆಳೆದ ಹುಡುಗಿಯ ತಂದೆ ಕಾಶ್ಮೀರದವರು. ಕತ್ರಿನಾ ಎಂಬ ಹೆಸರಿನ ಪಕ್ಕ ಮೊದಲು ಅಮ್ಮನ ಹೆಸರನ್ನೇ ಇಟ್ಟುಕೊಂಡಿದ್ದ ಹುಡುಗಿ, ಬಾಲಿವುಡ್‌ಗೆ ಕಾಲಿಟ್ಟ ಮೇಲೆ ಅಪ್ಪನ ಹೆಸರಿನ ಹಂಗಿಗೆ ಒಳಪಟ್ಟರು.

ಹದಿನಾಲ್ಕನೇ ವಯಸ್ಸಿನಲ್ಲೇ ಲಂಡನ್‌ನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕತ್ರಿನಾ, ಬಾಲಿವುಡ್‌ಗೆ ಬಂದದ್ದು 20ರ ಹರೆಯದಲ್ಲಿ. ಚಿತ್ರ ತಯಾರಕ ಕೈಜಾದ್ ಉಸ್ತಾದ್, 'ಬೂಮ್' ಎಂಬ ವಯಸ್ಕರರ ಚಿತ್ರದಲ್ಲಿ ನಟಿಸಲು ಅವರನ್ನು ಒಪ್ಪಿಸಿದ್ದರು. ಆ ಚಿತ್ರದಲ್ಲಿ ಹಸಿಬಿಸಿಯಾಗಿ ಕಾಣಿಸಿ
ಕೊಂಡ ಕತ್ರಿನಾ ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬಂದ ವಿಮರ್ಶೆಗಳನ್ನು ಆಲಿಸಿ ಕಂಗಾಲಾದರು.

'ನನಗೆ ಬಾಲಿವುಡ್ ಜಾಯಮಾನವೇ ಗೊತ್ತಿಲ್ಲದ ಕಾಲವದು. ಆಯ್ಕೆಯ ಕುರಿತು ಸ್ಪಷ್ಟತೆ ಇರಲಿಲ್ಲ. ಅವಕಾಶವಷ್ಟೆ ಅಗತ್ಯವಿತ್ತು. ಆದರೆ, ಮೊದಲ ಸಿನಿಮಾ ಬಂದಮೇಲೆ ನಾನು ಎಲ್ಲಿದ್ದೇನೆ ಎನ್ನುವ ಪ್ರಶ್ನೆ ಶುರುವಾಯಿತು. ಮಹೇಶ್‌ಭಟ್‌ ನನಗೆ ಅವಕಾಶ ಕೊಡಲು ಮುಂದೆ ಬಂದಿದ್ದರು. ಮೊದಲ ಸಿನಿಮಾ ನೋಡಿದ್ದೇ ಅವರ ನಿರ್ಧಾರ ಬದಲಾಯಿತು. ಅಂದಿನಿಂದ ನನ್ನನ್ನು ನಾನೇ ರೂಪಿಸಿಕೊಳ್ಳತೊಡಗಿದೆ' ಹೀಗೆ ಕತ್ರಿನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಬಾಲಿವುಡ್ ನಿರಾಕರಣೆಯಿಂದ ಕಂಗಾಲಾಗದ ಅವರು 'ಮಲ್ಲೀಸ್ವರಿ' ತೆಲುಗು ಸಿನಿಮಾದಲ್ಲಿ ವೆಂಕಟೇಶ್‌ಗೆ ಜೋಡಿಯಾದರು. ಅದಕ್ಕೆ ಅವರು ಪಡೆದ ಸಂಭಾವನೆ 2004ರಲ್ಲಿ 75 ಲಕ್ಷ ರೂಪಾಯಿ. ದಕ್ಷಿಣ ಭಾರತದ ಯಾವ ನಟಿಗೂ ಅಷ್ಟು ಸಂಭಾವನೆ ಇರಲಿಲ್ಲ.

ಕತ್ರಿನಾ ಕಡಿಮೆ ಸಂಭಾವನೆಗೆ ನಟಿಸಲು ಎಂದೂ ಒಪ್ಪಲಿಲ್ಲ. ಅಭಿನಯ ಸಾಮರ್ಥ್ಯ ಅಷ್ಟೇನೂ ಇಲ್ಲ ಎನ್ನುವುದನ್ನು ಒಪ್ಪಿಕೊಂಡೇ ಅವರು ನೃತ್ಯದಲ್ಲಿ ಪಳಗಿದರು. 'ತೀಸ್ ಮಾರ್ ಖಾನ್' ಹಿಂದಿ ಚಿತ್ರದ ಹಿಟ್ ಎಂದರೆ 'ಶೀಲಾ ಕಿ ಜವಾನಿ' ಹಾಡಷ್ಟೇ. ವೆರೋನಿಕಾ ಡಿಸೋಜಾ ಬಳಿ ಆ ಹಾಡಿಗೆಂದೇ ಬೆಲ್ಲಿ ಡಾನ್ಸ್ ತರಬೇತಿ ಪಡೆದಿದ್ದ ಕತ್ರಿನಾ, ನೃತ್ಯ ನಿರ್ದೇಶಕಿ ಫರ್ಹಾಖಾನ್ ಮನಸ್ಸನ್ನೂ ಗೆದ್ದರು.

ಅಕ್ಷಯ್ ಕುಮಾರ್ ಜೋಡಿಯಾದ ಮೇಲೆ ಕತ್ರಿನಾಗೆ ಅದೃಷ್ಟ ಖುಲಾಯಿಸಿದ್ದು. ಒಂದಾದ ಮೇಲೆ ಒಂದರಂತೆ ಆರು ಚಿತ್ರಗಳಲ್ಲಿ ಅವರೊಟ್ಟಿಗೆ ಅಭಿನಯಿಸಿದ್ದೇ ಕತ್ರಿನಾ ಜನಪ್ರಿಯತೆಯ ಗ್ರಾಫ್ ಏರಿತು.ಬಾಲಿವುಡ್‌ನಲ್ಲಿ ಮನಸ್ಸಿಗೆ ನೋವಾದಾಗಲೆಲ್ಲ ಅವರು ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಮುಖ ಮಾಡಿದ ಉದಾಹರಣೆಗಳಿವೆ. ಮಮ್ಮುಟ್ಟಿ ನಾಯಕರಾಗಿದ್ದ ಮಲಯಾಳಂ ಸಿನಿಮಾ 'ಬಲರಾಂ ವರ್ಸಸ್ ತಾರಾದಾಸ್'ನಲ್ಲಿ ನಟಿಸಿದ್ದೇ ಇದಕ್ಕೆ ಸಾಕ್ಷಿ.

'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ಮತ್ತೆ ಜನಪ್ರಿಯತೆಯ ರುಚಿ ನೋಡಿದ ಕತ್ರಿನಾ, ಅಲ್ಲಿಂದಾಚೆಗೆ ವಿಪರೀತ ಬ್ಯುಸಿಯಾಗಲಿಲ್ಲ. ಈಗ ಅವರು ಚ್ಯೂಸಿ. ಹದಿನಾಲ್ಕು ವರ್ಷಗಳ ದೊಡ್ಡ ಅನುಭವ ಬೆನ್ನಿಗಿದೆ. ಅಭಿನಯದ ಮಿತಿಯ ಅರಿವೂ ಇದೆ. ಈ ವಯಸ್ಸಿನಲ್ಲಿಯೂ ಕಾಮನಬಿಲ್ಲಿನಂತೆ ಬಾಗುವ ಅವರ ದೇಹ ಲಾಲಿತ್ಯಕ್ಕೆ ತಲೆದೂಗುವವರ ಸಂಖ್ಯೆ ದೊಡ್ಡದು. 'ಟೈಗರ್ ಜಿಂದಾ ಹೈ' ಹಿಂದಿ ಚಿತ್ರ ಇನ್ನೂರೈವತ್ತು ಕೋಟಿ ರೂಪಾಯಿ ಬಾಚಿಹಾಕಿರುವ ಪುಳಕದಲ್ಲಿ ಕತ್ರಿನಾ ಇದ್ದಾರೆ. ಇಷ್ಟಕ್ಕೂ, ಅವರಿಗೀಗ 34 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT