ಸೋಮವಾರ, ಜೂಲೈ 6, 2020
21 °C

ಮನೆ ಬಾಗಿಲಿಗೆ ಮಲೆನಾಡು ಸವಿ

ಭೀಮಪ್ಪ Updated:

ಅಕ್ಷರ ಗಾತ್ರ : | |

ಮನೆ ಬಾಗಿಲಿಗೆ ಮಲೆನಾಡು ಸವಿ

ಮಲೆನಾಡಿನ ಮಳೆ, ಗುಡ್ಡ, ಹಸಿರು, ಆಹಾರಗಳು ವಿಶಿಷ್ಟ. ಮಲೆನಾಡಿನ ದೇಸಿ ಖಾದ್ಯಗಳು ರುಚಿಕರ ಅಷ್ಟೇ ಅಲ್ಲ, ಪೌಷ್ಟಿಕವೂ ಹೌದು. ಮಲೆನಾಡಿನ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಬೆಂಗಳೂರು ನಗರದಲ್ಲಿಯೂ ಲಭ್ಯ. ಇಂಥ ಅನೇಕ ಮಳಿಗೆಗಳೂ ನಗರದಲ್ಲಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಮಲ್ನಾಡ್‌ ಫ್ರೆಶ್’.

ಸಹಕಾರನಗರ ಸಮೀಪದ ಸಿಕ್ಯೂಎಎಲ್ ಲೇಔಟ್‌ನಲ್ಲಿ ‘ಮಲ್ನಾಡ್‌ ಫ್ರೆಶ್’ ಹೆಸರಿನ ಮಳಿಗೆಯನ್ನು ಚಿಕ್ಕಮಗಳೂರಿನ ಜಾನ್ ಮಥಾಯ್ಸ್‌ ತೆರೆದಿದ್ದಾರೆ. ಇಲ್ಲಿ ಮಲೆನಾಡು ಪ್ರದೇಶದ ಬಗೆಬಗೆ ಆಹಾರ ಪದಾರ್ಥಗಳಿವೆ. ಇವರು ಎಂಟು ತಿಂಗಳಿನಿಂದ malnaadfresh.com ವೆಬ್‌ಸೈಟ್‌ ಮೂಲಕವು ಜನರಿಗೆ ಮಲೆನಾಡು ತಿನಿಸುಗಳನ್ನು ತಲುಪಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಳಿಗೆಯನ್ನು ಪ್ರವೇಶಿಸುತ್ತಿದ್ದಂತೆ ರಾಷ್ಟ್ರಕವಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಭಾವಚಿತ್ರಗಳು ಕಣ್ಣಿಗೆ ಬೀಳುತ್ತವೆ. ಮಳಿಗೆಯೊಳಗೆ ವಿವಿಧ ವಸ್ತುಗಳನ್ನು ಇರಿಸಲು ಮರದಿಂದಲೇ ಮಾಡಿದ ಪೆಟ್ಟಿಗೆಗಳಿವೆ. ಇವರೇ ನೈಸರ್ಗಿಕವಾಗಿ ತಯಾರಿಸಿದ ನನ್ನಾರಿ, ನುಗ್ಗೆ ಸೊಪ್ಪು, ನೆಲ್ಲಿಕಾಯಿ, ಕೋಕಮ್‌ ಹೀಗೆ ಹಲವು ವಿಧದ ಶರಬತ್ತುಗಳಿವೆ.

‘ಈ ಶರಬತ್ತು ಸೇವನೆಯಿಂದ ಸಕ್ಕರೆಕಾಯಿಲೆ, ಮಲಬದ್ಧತೆ, ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ’ ಎನ್ನುವುದು ಮಥಾಯ್ಸ್ ಅವರ ಮಾತು.

ಮನೆಯ ಅಲಂಕಾರಕ್ಕೆ ಬೇಕಾಗುವ ಭತ್ತದ ತೋರಣ, ಭಟ್ಕಳದ ಲಾವಂಚ ಹುಲ್ಲಿನಿಂದ ಹಾಗೂ ಮರದಿಂದ ತಯಾರಿಸಿದ ಕಲಾಕೃತಿಗಳು, ಹಾಡಿಯ ಜನರು ಸಿದ್ಧಪಡಿಸಿದ ಬಣ್ಣಬಣ್ಣದ ಕಿವಿಯೋಲೆ, ಬಳೆ, ಮೂಗುತಿ, ಸರ, ಉಂಗುರ ಹಾಗೂ ದೇಶಿ ಉಡುಪುಗಳು ನೋಡುಗರ ಮನ ಸೆಳೆಯುತ್ತವೆ.

‘ಮಲೆನಾಡು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ ಮೂಲಕ ಸಿರಿಧಾನ್ಯಗಳು, ಬೇಳೆಕಾಳುಗಳು, ಕೆಂಪಕ್ಕಿ, ರಾಜಮುಡಿ ಅಕ್ಕಿ, ಕಾಫಿ, ಟೀಪುಡಿ, ಜೇನುತುಪ್ಪ, ಶುಂಠಿ, ಜೀರಿಗೆ, ಸೂಜಿ ಮೆಣಸು ಸೇರಿದಂತೆ ಹಲವು ಉತ್ಪನ್ನಗಳನ್ನು ನೇರವಾಗಿ ಖರೀದಿಸುತ್ತೇವೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ನಮ್ಮಲ್ಲಿ ಸಿಗುವ ಕೆಲ ಉತ್ಪನ್ನಗಳು ಅಂಟು ರೋಗಗಳಿಗೆ ಉತ್ತಮ ಔಷಧವೂ ಹೌದು. ಬೇಡಿಕೆಯೂ ಉತ್ತಮವಾಗಿದೆ’ ಎನ್ನುತ್ತಾರೆ ಮಥಾಯ್ಸ್.

‘ನಮ್ಮ ಮಳಿಗೆಯಲ್ಲಿ ಇರುವ ಯಾವುದೇ ಉತ್ಪನ್ನಕ್ಕೆ ರಾಸಾಯನಿಕ, ರುಚಿ ಹೆಚ್ಚಿಸುವ ಪುಡಿ, ಬಣ್ಣಗಳನ್ನು ಬೆರೆಸುವುದಿಲ್ಲ. ಬಾಳೆದಿಂಡು, ಸುಂಡೆಕಾಯಿ, ಅಮಟೆಕಾಯಿಗಳಿಂದ ಮಾಡಿದ ಉಪ್ಪಿನಕಾಯಿ, ಬಾಳೆ ಹೂ, ಕೆಸುವಿನ ಸೊಪ್ಪು, ಕರಿಬೇವಿನಿಂದ ಮಾಡಿದ ತೊಕ್ಕು (ಚಟ್ನಿ) ನಾವೇ ತಯಾರಿಸುತ್ತೇವೆ. ಈ ವರ್ಷದ ಸಂಕ್ರಾಂತಿಯಿಂದ ಚಿಕ್ಕಮಗಳೂರಿನಿಂದ ತಾಜಾ ತರಕಾರಿಗಳನ್ನು ನಗರಕ್ಕೆ ತಂದು ಮಾರುವ ಉದ್ದೇಶವಿದೆ. ಈ ಪ್ರಯೋಗ ಯಶಸ್ಸು ಕಂಡರೆ ಮುಂದುವರೆಸುತ್ತೇವೆ’ ಎನ್ನುತ್ತಾರೆ ಅವರು.

ಸಂಪರ್ಕಕ್ಕೆ– 98440 34333. Email- john.mathais@gmail.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.