ಗುರುವಾರ , ಜೂಲೈ 2, 2020
27 °C

‘ಮಹಾತ್ಮರು ಅದೆಷ್ಟೋ!’

ಹಾರಿತಾನಂದ Updated:

ಅಕ್ಷರ ಗಾತ್ರ : | |

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವವರು ತ್ಯಾಗರಾಜ. ಸಂಗೀತವನ್ನು ಕಲೆಯ ಸ್ತರದಿಂದ ಯೋಗಸ್ತರಕ್ಕೆ ಏರಿಸಿದ ನಾದಯೋಗಿ ಅವರು. ಶ್ರೀರಾಮನ ಭಕ್ತಿಗೆ ಪರ್ಯಾಯ ಎಂದರೆ ಅವರ ಕೀರ್ತನೆಗಳು. ಸಾಹಿತ್ಯದ ಗುಣಲಕ್ಷಣಗಳಿಂದ ಮಾತ್ರವಲ್ಲದೆ, ಭಕ್ತಿಮೀಮಾಂಸೆಯಲ್ಲೂ ಅಧ್ಯಾತ್ಮ ಸಾಧನೆಯಲ್ಲೂ ಒದಗುವಂಥವು ಅವು.

ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾರೂರು ಪ್ರಸಿದ್ಧ ಶೈವಕ್ಷೇತ್ರ; ಅಲ್ಲಿಯ ಕ್ಷೇತ್ರದೇವತೆ ಶ್ರೀ ತ್ಯಾಗರಾಜ ಸ್ವಾಮಿಗಳು. ಇದೇ ತ್ಯಾಗರಾಜರ ಹುಟ್ಟೂರು. ಅವರು ಹುಟ್ಟಿದ್ದು 1762ರ ಮೇ 4ನೇ ದಿನಾಂಕದಂದು (ಸರ್ವಜಿತ್‌ ಸಂವತ್ಸರದ ಚೈತ್ರ ಶುಕ್ಲ ಸಪ್ತಮಿ). ತಂದೆ ರಾಮಬ್ರಹ್ಮ; ತಾಯಿ ಸೀತಮ್ಮ. ತ್ಯಾಗರಾಜರು ತೀರಿಕೊಂಡದ್ದು 1847ರ ಜನವರಿ 6ರಂದು (ಪರಾಭವ ಸಂವತ್ಸರ ಪುಷ್ಯ ಬಹುಳ ಪಂಚಮಿ).

ತ್ಯಾಗರಾಜರ ಮನೆಮಾತು ತೆಲುಗು; ಅವರ ಬಹುಪಾಲು ಕೃತಿಗಳು ತೆಲುಗು ಭಾಷೆಯಲ್ಲಿಯೇ ರಚಿತವಾಗಿವೆ. ಸಂಸ್ಕೃತದಲ್ಲೂ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಸಾಧಕನ ಆರ್ದ್ರತೆಯನ್ನೂ ಕವಿಯ ಕಲ್ಪನಾವಿಹಾರವನ್ನೂ ಭಕ್ತನ ಆರ್ತತೆಯನ್ನೂ ಜ್ಞಾನಿಯ ತತ್ತ್ವಮೀಮಾಂಸೆಯನ್ನೂ ಕಾಣಬಹುದು. ನಾದೋಪಾಸನೆಯ ಮೂಲಕವೇ ಮೋಕ್ಷವನ್ನು ಸಂಪಾದಿಸಬಹುದು – ಎನ್ನುವುದಕ್ಕೆ ಅವರು ನಿದರ್ಶನವಾಗಿದ್ದಾರೆ.

‘ಪಂಚರತ್ನಕೃತಿ’ಗಳು ಎಂದು ಪ್ರಸಿದ್ಧವಾಗಿರುವ ಐದು ಕೀರ್ತನೆಗಳಲ್ಲಿ ಒಂದು ಶ್ರೀರಾಗದ ‘ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು’. ಇದರ ಅರ್ಥ ‘ಮಹಾತ್ಮರು ಅದೆಷ್ಟೋ ಮಂದಿ, ಅವರಿಗೆಲ್ಲ ವಂದನೆಗಳು’. ತ್ಯಾಗರಾಜರ ವಿನಯದ ಈ ಮಾತುಗಳು ನಮ್ಮ ಕಾಲಕ್ಕೆ ಬೇಕಾದ ತಿಳಿವಳಿಕೆಯಂತಿವೆ. ಭಕ್ತಿಯ ಮಾರ್ಗದಲ್ಲಿರುವ ಮಹಾತ್ಮರು ಹಲವರು; ಸಾಧನೆಯಲ್ಲಿ ಯಶಸ್ಸು ಕಂಡವರು ಹಲವರು – ಅವರೆಲ್ಲರಿಗೂ ನನ್ನ ವಂದನೆಗಳು ಎನ್ನುವುದು ಈ ಕೀರ್ತನೆಯ ಒಟ್ಟು ನಿಲುವು. ‘ನಾನೊಬ್ಬನೇ’, ‘ನಾನು ಮಾತ್ರ’ – ಎಂದು ಯೋಚಿಸುವ ಇಂದಿನ ಯುಗಧರ್ಮಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ರಸಶಿಕ್ಷಣದಂತೆ ಒದಗಬಲ್ಲದು.

‘ಚಂದ್ರಬಿಂಬದಂತೆ ಮುಖವುಳ್ಳವನ (ಭಗವಂತನ, ಎಂದರೆ ಶ್ರೀರಾಮನ) ಸೌಂದರ್ಯವನ್ನೂ ಸೊಗಸನ್ನೂ ಹೃದಯಕಮಲದಲ್ಲಿ ಕಂಡುಕೊಂಡು ಬ್ರಹ್ಮಾನಂದವನ್ನು ಅನುಭವಿಸುವ ಮಹಾತ್ಮರು ಅದೆಷ್ಟೋ ಮಂದಿ, ಅವರಿಗೆಲ್ಲ ವಂದನೆಗಳು’ – ಎಂಬ ಅನುಪಲ್ಲವಿಯೊಡನೆ ಕೀರ್ತನೆ ಆರಂಭವಾಗುತ್ತದೆ. ಹೀಗೆ ಕೀರ್ತನೆಯ ಉದ್ದಕ್ಕೂ ಮಹಾತ್ಮರ ಸಾಧನೆಗಳನ್ನೂ ಸಿದ್ಧಿಗಳನ್ನೂ ವರ್ಣಿಸಲಾಗಿದೆ.

‘ಮನಸ್ಸೆಂಬ ಮಂಗದ ಅಲೆದಾಟವನ್ನು ನಿಲ್ಲಿಸಿ, ಭಗವಂತನ ಪೂರ್ಣರೂಪವನ್ನು ದರ್ಶಿಸಿರುವ ಮಹಾಮಹಿಮರು ಅದೆಷ್ಟೋ ಮಂದಿ, ಅವರಿಗೆಲ್ಲ ವಂದನೆಗಳು’ – ಎನ್ನುವುದು ಚರಣದ ಒಂದು ಸೊಲ್ಲು.

‘ಭಾಗವತ ರಾಮಾಯಣ ಭಗವದ್ಗೀತೆ ವೇದಶಾಸ್ತ್ರಗಳ ರಹಸ್ಯಗಳನ್ನೂ, ಶೈವ ಮೊದಲಾದ ಆರು ಮತಗಳ ರಹಸ್ಯಾರ್ಥವನ್ನೂ, ಮೂವತ್ತು ಮೂರು ಕೋಟಿ ದೇವತೆಗಳ ಅಂತಃಸತ್ತ್ವಗಳ ಮಥಿತಾರ್ಥವನ್ನೂ ಅರಿತುಕೊಂಡು, ಭಾವರಾಗಲಯಾದಿಗಳಿಂದ ದೊರೆಯುವ ಸುಖದಿಂದ ಬಹುಕಾಲ ಜೀವಿಸಿ, ನಿರಂತರ ಸುಖವನ್ನು ಪಡೆದು, ತ್ಯಾಗರಾಜನಿಗೆ ಪ್ರಿಯರಾದವರು ಹಲವರು ಮಹಾನುಭಾವರು, ಅವರಿಗೆಲ್ಲ ವಂದನೆಗಳು’. ಇದು ಇನ್ನೊಂದು ಚರಣದ ಮಾತು.

ಸಾಹಿತ್ಯ, ಸಂಸ್ಕಾರ, ಸಂಗೀತದ ಸಂಗಮವನ್ನು ಈ ಕೀರ್ತನೆಯಲ್ಲಿ ಕಾಣಬಹುದು.

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.