ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆಯ ಹಾದಿಯಲ್ಲಿ ಆಸ್ಟ್ರೇಲಿಯಾ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಸಿಡ್ನಿ: ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ (56; 104ಎ, 6ಬೌಂ) ಮತ್ತು ಉಸ್ಮಾನ್‌ ಖ್ವಾಜಾ (ಬ್ಯಾಟಿಂಗ್‌ 91; 204ಎ, 7ಬೌಂ, 1ಸಿ) ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದಲ್ಲಿ ಮುನ್ನಡೆಯತ್ತ ಸಾಗಿದೆ.

ಸಿಡ್ನಿ ಮೈದಾನದಲ್ಲಿ 5 ವಿಕೆಟ್‌ಗೆ 233ರನ್‌ಗಳಿಂದ ಶುಕ್ರವಾರ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಆಂಗ್ಲರ ನಾಡಿನ ತಂಡ 112.3 ಓವರ್‌ಗಳಲ್ಲಿ 346ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಥಮ ಇನಿಂಗ್ಸ್‌ ಆರಂಭಿಸಿರುವ ಕಾಂಗರೂಗಳ ನಾಡಿನ ತಂಡ ದಿನದಾಟದ ಅಂತ್ಯಕ್ಕೆ 67 ಓವರ್‌ಗಳಲ್ಲಿ 2 ವಿಕೆಟ್‌ಗೆ 193ರನ್‌ ಕಲೆಹಾಕಿದೆ.

ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕ್ಯಾಮರಾನ್‌ ಬೆನ್‌ಕ್ರಾಫ್ಟ್‌, ವಿಕೆಟ್‌ ಬೇಗನೆ ಕಳೆದುಕೊಂಡಿತು. ಸ್ಟುವರ್ಟ್‌ ಬ್ರಾಡ್‌ ಹಾಕಿದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಬೆನ್‌ಕ್ರಾಫ್ಟ್‌ ಬೌಲ್ಡ್‌ ಆದರು.

ಬಳಿಕ ವಾರ್ನರ್‌ ಮತ್ತು ಖ್ವಾಜಾ ಮಿಂಚಿದರು. ಇಂಗ್ಲೆಂಡ್‌ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇವರು ಎರಡನೇ ವಿಕೆಟ್‌ಗೆ 85ರನ್‌ ಕಲೆಹಾಕಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

32ನೇ ಓವರ್‌ನಲ್ಲಿ ವಾರ್ನರ್‌, ಜೇಮ್ಸ್‌ ಆ್ಯಂಡರ್‌ಸನ್‌ಗೆ ವಿಕೆಟ್‌ ನೀಡಿದರು. ನಂತರ ಖ್ವಾಜಾ ಮತ್ತು ಸ್ಮಿತ್‌ (ಬ್ಯಾಟಿಂಗ್‌ 44, 88ಎ, 3ಬೌಂ) ಮೋಡಿ ಮಾಡಿದರು. ಇವರು ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 107ರನ್‌ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಇದಕ್ಕೂ ಮುನ್ನ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ದಿನದ ಮೊದಲ ಅವಧಿಯಲ್ಲಿ ಆಘಾತ ಎದುರಾಯಿತು. ಡೇವಿಡ್‌ ಮಲಾನ್‌ (62; 180ಎ, 6ಬೌಂ) ವಿಕೆಟ್‌ ಉರುಳಿಸಿದ ಮಿಷೆಲ್‌ ಸ್ಟಾರ್ಕ್‌, ಆತಿಥೇಯರ ಸಂತಸಕ್ಕೆ ಕಾರಣರಾದರು.

ಬಳಿಕ ಮೋಯಿನ್‌ ಅಲಿ (30; 58ಎ, 2ಬೌಂ), ಟಾಮ್‌ ಕರನ್‌ (39; 65ಎ, 6ಬೌಂ) ಮತ್ತು ಸ್ಟುವರ್ಟ್‌ ಬ್ರಾಡ್‌ (31; 32ಎ, 1ಬೌಂ, 2ಸಿ) ಬಿರುಸಿನ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 112.3 ಓವರ್‌ಗಳಲ್ಲಿ 346 (ಡೇವಿಡ್‌ ಮಲಾನ್‌ 62, ಮೋಯಿನ್‌ ಅಲಿ 30, ಟಾಮ್‌ ಕರನ್‌ 39, ಸ್ಟುವರ್ಟ್‌ ಬ್ರಾಡ್‌ 31; ಮಿಷೆಲ್‌ ಸ್ಟಾರ್ಕ್‌ 80ಕ್ಕೆ2, ಜೋಶ್‌ ಹ್ಯಾಜಲ್‌ವುಡ್‌ 65ಕ್ಕೆ2, ಪ್ಯಾಟ್‌ ಕಮಿನ್ಸ್‌ 80ಕ್ಕೆ4, ನೇಥನ್‌ ಲಯನ್‌ 86ಕ್ಕೆ1).

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 67 ಓವರ್‌ಗಳಲ್ಲಿ 2 ವಿಕೆಟ್‌ಗೆ 193 (ಡೇವಿಡ್‌ ವಾರ್ನರ್‌ 56, ಉಸ್ಮಾನ್‌ ಖ್ವಾಜಾ ಬ್ಯಾಟಿಂಗ್‌ 91, ಸ್ಟೀವನ್‌ ಸ್ಮಿತ್‌ ಬ್ಯಾಟಿಂಗ್‌ 44; ಜೇಮ್ಸ್‌ ಆ್ಯಂಡರ್‌ಸನ್‌ 25ಕ್ಕೆ1, ಸ್ಟುವರ್ಟ್‌ ಬ್ರಾಡ್‌ 28ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT