ಶನಿವಾರ, ಜೂಲೈ 4, 2020
21 °C

ಒಂದೇ ದಿನಕ್ಕೆ ನಿವೃತ್ತಿಯಾದ ಪ್ರಾಂಶುಪಾಲ!

ವಿರೂಪಾಕ್ಷ ಹೊಕ್ರಾಣಿ Updated:

ಅಕ್ಷರ ಗಾತ್ರ : | |

ಒಂದೇ ದಿನಕ್ಕೆ ನಿವೃತ್ತಿಯಾದ ಪ್ರಾಂಶುಪಾಲ!

ಬೆಂಗಳೂರು: ಪ್ರಾಂಶುಪಾಲ ಹುದ್ದೆಗೆ ಬಡ್ತಿ ಪಡೆದಿರುವ ಪಿಯು ಉಪನ್ಯಾಸಕರು ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ನಿರೀಕ್ಷೆಯಲ್ಲಿರುವಾಗಲೇ ಅವರಲ್ಲೊಬ್ಬರು ಒಂದು ದಿನದ ಮಟ್ಟಿಗೆ ಅಧಿಕಾರ ವಹಿಸಿಕೊಂಡು ಅದೇ ದಿನ ನಿವೃತ್ತಿಯಾಗಿ ‘ಏಕ್‌ದಿನ್‌ ಕಾ ಸುಲ್ತಾನ್‌’ ಎನಿಸಿಕೊಂಡಿದ್ದಾರೆ.

ಮೈಸೂರು ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿದ್ದ ಎನ್. ಜಯರಾಮು, ಡಿ.30ರಂದು ಒಂದು ದಿನದ ಮಟ್ಟಿಗೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿದ್ದರು.

ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಚಾರ್ಯರ ಕೊರತೆ ಇರುವುದರಿಂದ ಹಿರಿಯ ಉಪನ್ಯಾಸಕರಿಗೆ ಬಡ್ತಿ ನೀಡುವ ಮೂಲಕ ಆ ಸ್ಥಾನಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ರೀತಿ ಒಟ್ಟು 169 ಉಪನ್ಯಾಸಕರಿಗೆ ಬಡ್ತಿ ನೀಡಲಾಗಿದ್ದು, ಇವರಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಬೇಕಿದೆ.

ತರಾತುರಿ ಆದೇಶ: ಜಯರಾಮು ಅವರನ್ನು ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತಿ ಮಾಡುವ ಏಕೈಕ ಉದ್ದೇಶದಿಂದ ಸರ್ಕಾರ ತರಾತುರಿಯಲ್ಲಿ ಆದೇಶ ಮಾಡಿದೆ. ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯರೊಬ್ಬರು ಇದರ ಹಿಂದಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

‘ಡಿಸೆಂಬರ್ ಅಂತ್ಯಕ್ಕೆ ವಯೋನಿವೃತ್ತಿ ಹೊಂದಲಿರುವ ಜಯರಾಮು ಅವರನ್ನು ಖಾಲಿ ಇರುವ ಗೆರಸನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ಪ್ರಭಾರದಡಿ ನೇಮಿಸಬೇಕು. ಉಳಿದ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕು’ ಎಂದು ಶಿಕ್ಷಣ ಇಲಾಖೆ (ಪದವಿ ಪೂರ್ವ ಶಿಕ್ಷಣ) ಡಿ.29ರಂದು ಆದೇಶ ಮಾಡಿದೆ.

‘ಜಯರಾಮು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಲು ಡಿ.29ರಂದೇ ಉಪನ್ಯಾಸಕ ಹುದ್ದೆಯಿಂದ ಬಿಡುಗಡೆಗೊಳ್ಳುವ ತುರ್ತು ಸಹ ಇತ್ತು. ಆ ದಿನ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ರಜೆ ಮೇಲೆ ತೆರಳಿದ್ದರು. ಆದರೂ ರಾತ್ರಿವರೆಗೆ ಅವರ ಕಚೇರಿಯಲ್ಲಿಯೆ ಕುಳಿತು ಜಂಟಿ ನಿರ್ದೇಶಕರಿಂದ ಕರ್ತವ್ಯದಿಂದ ಬಿಡುಗಡೆಯಾಗಿರುವ ಬಗ್ಗೆ ಸಹಿ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಯರಾಮು, ‘ಡಿ.30ಕ್ಕೆ ನನ್ನ ಸೇವಾವಧಿ ಮುಗಿಯಿತು. ಅದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳೇ ಕರೆದು ಬಡ್ತಿ ಮತ್ತು ಸ್ಥಳ ನಿಯುಕ್ತಿ ಆದೇಶ ನೀಡಿದರು. ಅದರಂತೆ ಪ್ರಾಂಶುಪಾಲ ಹುದ್ದೆಗೆ ಅಧಿಕಾರ ವಹಿಸಿಕೊಂಡೆ. ಬೇರೆ ಬೇರೆ ಇಲಾಖೆಗಳಲ್ಲಿಯೂ ಬಡ್ತಿ ಪಡೆದ ಸ್ಥಾನಗಳಲ್ಲಿಯೇ ನಿವೃತ್ತಿಯಾಗಲು ಅವಕಾಶ ಇದೆ’ ಎಂದು ತಿಳಿಸಿದರು.

ಸರ್ಕಾರಿ ಆದೇಶ ಪಾಲನೆ

‘ಪ್ರಾಂಶುಪಾಲ ಹುದ್ದೆಗೆ ಬಡ್ತಿ ಮೂಲಕ ಆಯ್ಕೆಯಾದವರ ಪೈಕಿ ಒಬ್ಬರಿಗೆ ಸ್ಥಳ ನಿಯುಕ್ತಿ ಮಾಡಿ ಸರ್ಕಾರವೇ ಆದೇಶ ಮಾಡಿದೆ. ಅದನ್ನು ಪಾಲಿಸಿದ್ದೇವೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ, ‘ಪ್ರಜಾವಾಣಿ’ಗೆ ತಿಳಿಸಿದರು.

ಇತರೆ 168 ಮಂದಿಗೆ ಇದೇ 10ರಿಂದ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ನಡೆಯಲಿದೆ. ಕೌನ್ಸೆಲಿಂಗ್‌ಗೆ ಹಾಜರಾಗದಿದ್ದರೆ ಬಡ್ತಿ ರದ್ದುಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸದ್ಯಕ್ಕೆ ಲಾಭವಿಲ್ಲ

ಜಯರಾಮು ಪ್ರಭಾರಿ ಪ್ರಾಂಶುಪಾಲ ಆಗಿ ನಿವೃತ್ತಿಯಾದ್ದರಿಂದ ಸದ್ಯಕ್ಕೆ ಅವರಿಗೆ ಯಾವುದೇ ಲಾಭ ಇಲ್ಲ. ಆದರೆ,  ಈ ಅವಧಿಯಲ್ಲಿ ಬಡ್ತಿ ಪಡೆದ ಎಲ್ಲ ಪ್ರಭಾರಿ ಪ್ರಾಂಶುಪಾಲರನ್ನು ಸರ್ಕಾರ ಮುಂದಿನ ದಿಗಳಲ್ಲಿ ಕಾಯಂಗೊಳಿಸಿದರೆ ನಿವೃತ್ತಿ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.