ಪೊರಕೆ ಏಟು– ಸ್ಥಳ ನಿಗದಿಗೆ ಆಗ್ರಹ

7

ಪೊರಕೆ ಏಟು– ಸ್ಥಳ ನಿಗದಿಗೆ ಆಗ್ರಹ

Published:
Updated:

ಚನ್ನಪಟ್ಟಣ: ‘ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪೊರಕೆಯಲ್ಲಿ ಹೊಡೆಸುತ್ತೇನೆ ಎಂದು ಕೀಳುಮಟ್ಟದ ಹೇಳಿಕೆ ನೀಡಿರುವ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ತಾಕತ್ತು ಇದ್ದರೆ ಹೊಡೆಸಲು ಸ್ಥಳ ಹಾಗೂ ದಿನಾಂಕ ನಿಗದಿ ಮಾಡಲಿ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ ಹಾಗೂ ಶಿವಮಾದು ಸವಾಲು ಹಾಕಿದರು.

ಪಟ್ಟಣದ ತಾಲ್ಲೂಕು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕೀಳುಮಟ್ಟದ ಹೇಳಿಕೆ ನಿಡುವುದು ಯೋಗೇಶ್ವರ್ ಗೆ ತಕ್ಕುದಲ್ಲ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚನ್ನಪಟ್ಟಣವನ್ನು ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ ಎಂದು ಸಚಿವರು ಹೇಳಿರುವುದು ಅವರ ವೈಯಕ್ತಿಕ ಹೇಳಿಕೆ. ಯೋಗೇಶ್ವರ್ ಇದನ್ನು ಬಳಸಿಕೊಂಡು ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಕೆಳಮಟ್ಟದ ರಾಜಕೀಯ ತರವಲ್ಲ ಎಂದು ಕಿಡಿಕಾರಿದರು.

ಸರ್ಕಾರದ ಸಾಧನಾ ಸಮಾವೇಶದಲ್ಲಿ ಸೇರಿದ್ದ ಜನಸಮೂಹ ನೋಡಿ ಯೋಗೇಶ್ವರ್ ಹತಾಶರಾಗಿದ್ದಾರೆ. ಅವರಿಗೆ ತಲೆಕೆಟ್ಟು ಹೋಗಿದೆ. ಇಂತಹ ಸಣ್ಣ ಮಾತನಾಡುವ ಮೂಲಕ ತನ್ನ ಯೋಗ್ಯತೆ ಏನು ಎಂಬುದನ್ನು ತೋರಿಸುತ್ತಿದ್ದಾರೆ. ಶಿವಕುಮಾರ್ ಬಗ್ಗೆ ಮಾತನಾಡುವ ಯೋಗೇಶ್ವರ್ ವೈಯಕ್ತಿಕ ವಿಚಾರದಲ್ಲಿ ತಾವು ಮೊದಲು ಎಷ್ಟು ಸಾಚಾ ಎಂಬುದನ್ನು ನಿರೂಪಿಸಲಿ ಎಂದು ಕಿಡಿಕಾರಿದರು.

ಯೋಗೇಶ್ವರ್ ಸಣ್ಣತನ ಪಕ್ಷದಲ್ಲಿನ ಬಹುತೇಕರಿಗೆ ತಿಳಿದಿದೆ. ಅಂಬೇಡ್ಕರ್ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಶಾಸಕನಾಗಿ ಹಾಜರಾಗಲಿಲ್ಲ. ಈಗ ದಲಿತರ ಪರ ಮಾತನಾಡುತ್ತಾರೆ. ಅವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಮ್ಮ, ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಜಿ.ಪಂ. ಸದಸ್ಯ ಪ್ರಸನ್ನ, ನಗರಸಭಾ ಸದಸ್ಯ ಮುದ್ದುಕೃಷ್ಣ, ಮುಖಂಡರಾದ ಶರತ್ ಚಂದ್ರ, ಚಂದ್ರಸಾಗರ್, ಕಾನೂನು ಘಟಕದ ಜಿಲ್ಲಾಧ್ಯಕ್ಷ ಟಿ.ವಿ.ಗಿರೀಶ್, ಎಪಿಎಂಸಿ ನಿರ್ದೇಶಕ ವಾಸಿಲ್ ಆಲಿಖಾನ್, ಕಾಂಗ್ರೆಸ್ ಪದಾಧಿಕಾರಿಗಳಾದ ಹನುಮಂತಯ್ಯ, ಸಿದ್ದರಾಮಯ್ಯ, ಕಾವೇರಮ್ಮ, ರೇಣುಕ ಇದ್ದರು.

ಮಹಿಳೆ ಏಟು ಮರೆತ ಶಾಸಕ

ಯೋಗೇಶ್ವರ್ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಮಹಿಳೆಯೊಬ್ಬರು ಕೊರಳಪಟ್ಟಿ ಹಿಡಿದು ಹೊಡೆದಿದ್ದನ್ನು ಅವರು ಮರೆತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಈ ಮಾತುಗಳು ಆಡುತ್ತಿರಲಿಲ್ಲ ಎಂದು ಎ.ಸಿ.ವೀರೇಗೌಡ ಹಾಗೂ ಶಿವಮಾದು ತಿಳಿಸಿದರು.

ಈ ಹೇಳಿಕೆ ವಿರುದ್ಧ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಗುತ್ತದೆ. ಕ್ಷಮೆ ಯಾಚಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry