ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣ: ರಾಮಸ್ವಾಮಿಗೌಡ ಆರೋಪ

Last Updated 6 ಜನವರಿ 2018, 6:04 IST
ಅಕ್ಷರ ಗಾತ್ರ

ಕುಣಿಗಲ್: ಸಂಸದ ಡಿ.ಕೆ.ಸುರೇಶ್, ಶಕ್ತಿ ಇದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡದೆ ಕುಟುಂಬ ರಾಜಕಾರಣ ಮಾಡಿ, ಶಕ್ತಿಯ ದುರುಪಯೋಗ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಬಿ.ರಾಮಸ್ವಾಮಿಗೌಡ ಆರೋಪಿಸಿದರು.

ತಮ್ಮ ಬೆಂಬಲಿಗರ ಸಭೆಯಲ್ಲಿ ಶುಕ್ರವಾರ ಮಾತನಾಡಿ, ತಾಲ್ಲೂಕಿನಲ್ಲಿ ಶಾಸಕರ ಶಕ್ತಿ ಕುಂದಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಸಂಸದರಿಗೆ ಶಕ್ತಿ ಇದ್ದರೂ ಅಭಿವೃದ್ಧಿ ನೆಪದಲ್ಲಿ ಆರ್ಥಿಕವಾಗಿ ಲಾಭವಾಗುವ ಕಾಮಗಾರಿಗಳು ಮಾತ್ರ ನಡೆದಿವೆ. ಶ್ರೀರಂಗ ಏತನೀರಾವರಿ ಯೋಜನೆ ನೀರು ಕುಣಿಗಲ್ ತಾಲ್ಲೂಕಿಗೆ ಸಿಮೀತವಾಗಿದೆ. ಆದರೆ ಸಂಸದರು ತಮ್ಮ ಪ್ರಭಾವ ಬೀರಿ ಮಾಗಡಿ, ರಾಮನಗರ ತೆಗೆದುಕೊಂಡು ಹೋಗುವ ಸಂಚು ಮಾಡಿದ್ದಾರೆ. 

ಇದ್ದಕ್ಕಾಗಿ ಕೊಟ್ಯಂತರ ಮೌಲ್ಯದ ಪೈಪ್‌ಗಳು ಮಾತ್ರ ಯಲಿಯೂರು ಕೆರೆ ಅಂಗಳದಲ್ಲಿ ಬಿದ್ದಿವೆ. ಕಾಮಗಾರಿ ನಡೆದಿಲ್ಲ ಪೈಪ್ ವ್ಯವಹಾರದಿಂದ ಲಾಭವಾಗಿದೆ. ತಾಲ್ಲೂಕಿನ ಹುತ್ರಿದುರ್ಗ ಮತ್ತು ಹುಲಿಯೂರುದುರ್ಗ ಹೋಬಳಿಗಳಿಗೆ ನೀರು ಹರಿಸುವ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಪಟ್ಟಣದಲ್ಲಿ ₹ 27ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರ ಪಟ್ಟಣದಲ್ಲಿ ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಅಳವಡಿಸಿದ್ದಾರೆ. ಆದರೆ
ಮೂರು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಸಂಸ್ಕರಣ ಘಟಕಗಳ ನಿರ್ಮಾಣವಾಗಿಲ್ಲ. ಗುತ್ತಿಗೆದಾರ ಪೈಪ್ ಅಳವಡಿಸಿ ಬಿಲ್ ಪಡೆದು ಕಮಿಷನ್ ಕೊಟ್ಟು ಹೋದರೆ ಕಾಮಗಾರಿ ಪೂರ್ಣ ಮಾಡುವರು ಯಾರು ಎಂದು ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ 5ರಂದು (ಶುಕ್ರವಾರ) ಕಾಂಗ್ರಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರಮ ಕೆಪಿಸಿಸಿ ಯಿಂದ ನಿಗದಿಯಾಗಿ ಸೂಚನೆ ಸಹ ಬಂದಿತ್ತು. ಕೊನೆ ಘಳಿಗೆಯಲ್ಲಿ ಸಂಸದ ಡಿ.ಕೆ.ಸುರೇಶ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಕಾರಣ ಕಾರ್ಯಕ್ರಮ ನಡೆದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ. ಕಳೆದ ತಿಂಗಳು ಸಂಸದರು ತಮ್ಮ ಬಣದಿಂದ ಕಾಂಗ್ರೆಸ್ ಸಮಾವೇಶ ಮಾಡಿದ್ದರು.

ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಕೊರತೆಯಾದಾಗ ಕನಕಪುರ, ರಾಮನಗರ ಮಾಗಡಿಯಿಂದ ಹಣ ಕೊಟ್ಟು ಜನರನ್ನು ತಂದು ಅಪಹಾಸ್ಯಕ್ಕಿಡಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟರೂ ಸರಿಯೇ ಇಲ್ಲವಾದರೂ ಕಾಂಗ್ರೆಸ್ ಹೆಸರಿನಲ್ಲಿ ಸ್ಪರ್ಧಿಸಿ, ಕಳೆದ ತಮ್ಮಶಾಸಕತ್ವದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತ್ತು ತಮ್ಮ ಕನಸಿನ ಕೂಸಾದ ಯೋಜನೆಗಳ ಅನುಷ್ಠಾನಕ್ಕೆ ಯತ್ನಿಸುವೆ ಎಂದರು.

ಕಾರ್ಯಕ್ರಮದಲ್ಲಿ ಮುಂದಿನ 5 ವರ್ಷ ಅಭಿವೃದ್ಧಿ ಪರ ಚಿಂತನೆಗಳ ಪಟ್ಟಿಯ ಪ್ರಣಾಳಿಕೆಯನ್ನು ತಮ್ಮ ಮನೆ ದೇವರಾದ ನರಸಿಂಹಸ್ವಾಮಿ ಭಾವಚಿತ್ರದೊಂದಿಗೆ ಬಿಡುಗಡೆ ಮಾಡಿದರು. ಸಭೆಯಲ್ಲಿ ಮುಖಂಡರಾದ ಶಿವಣ್ಣಗೌಡ, ಹೇರೂರು ಶಂಕರ್, ಲಕ್ಷ್ಮಣಗೌಡ, ಮುನ್ನಾ, ಮಾಗಡಿಪಾಳ್ಯ ಲಕ್ಷ್ಮಣ, ವಿನೋದ್‌ಗೌಡ ಇದ್ದರು.

ಡಿಕೆಎಸ್ ಚಾರಿಟಬಲ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಕುಣಿಗಲ್ ಉತ್ಸವದ ಬಗ್ಗೆ ಮಾತನಾಡಿ, ಪಟ್ಟಣದಲ್ಲಿ ಕೆಲ ಸಂಸ್ಥೆಗಳು ವಸೂಲಿ ಮಾಡಿ ಕಾರ್ಯಕ್ರಮ ಮಾಡುತ್ತಿವೆ. ಹಾಗೆಯೇ ಇದು ಒಂದು ದೊಡ್ಡಮಟ್ಟದ ವಸೂಲಿ ಕಾರ್ಯಕ್ರಮ ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವಣ್ಣಗೌಡ ಮಾತನಾಡಿ, ಡಿಕೆಎಸ್ ಸಹೋದರರು ಬೆಸ್ಕಾಂ ಅಧಿಕಾರಿಗಳಿಂದ ₹ 5ಲಕ್ಷ ವಸೂಲಿ ಮಾಡಿ ಉತ್ಸವ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT