ಶನಿವಾರ, ಜೂಲೈ 4, 2020
21 °C

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ

ಮೋಳೆ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.

ಶುಕ್ರವಾರ ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ ಶುಕ್ರವಾರ ಕುಮಾರಪರ್ವ 2018 ಕರ್ನಾಟಕ ಪ್ರದೇಶ ಜನತಾ ದಳದ ಬ್ರಹತ್ ಸಮಾವೇಶ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಬಿಟ್ಟು ಜೆಡಿಎಸ್ ಪಕ್ಷ ಸೇರಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶ್ರೀಶೈಲ ತುಗಶೆಟ್ಟಿ ಸೇರಿದಂತೆ ಅನೇಕರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡು, ನನ್ನ ಆರೋಗ್ಯದಲ್ಲಿ ತೊಂದರೆ ಇದೆ. ದೇವರು ನಿಮ್ಮಂತಾ ರೈತರ ಕಣ್ಣೋರಿಸುವಗೋಸ್ಕರ ಆ ದೇವರು ನನ್ನ ಉಳಿಸಿದ್ದಾನೆ. ಇದೊಂದು ಬಾರಿ ನನಗೆ ಅವಕಾಶ ಕೊಡಿ ಎಂದು ಸಾರ್ವಜನಿಕರೆದುರು ಕೈ ಮುಗಿದರು.

ರಾಜ್ಯ ಸರ್ಕಾರ ಸಾರ್ವಜನಿಕರ ದುಡ್ಡಿನಲ್ಲಿ ಪಕ್ಷದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 3500 ರೈತರು ಆತ್ಮಹತ್ಯೆ ಭಾಗ್ಯ ಪಡೆಯುವಂತಾಗಿದೆ.

ಅನ್ನಭಾಗ್ಯ, ಕೃಷಿಭಾಗ್ಯ, ಸಾಲಮನ್ನಾ ಭಾಗ್ಯ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಈ ಯೋಜನೆಗಳ ಹೊರತಾಗಿಯೂ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರೆದಿರುವುದು ಏಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಜೂನ್‌ 28ಕ್ಕೆ ₹ 8900 ಸಾವಿರ ಕೋಟಿ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ರೈತರಿಗೂ ಇದರ ಪ್ರಯೋಜನ ಸಿಕ್ಕಿಲ್ಲ. ಸಾಲಮನ್ನಾ ಘೋಷಣೆ ಮಾಡಿದ ನಂತರ 450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರರ್ಥ ಸಾಲಮನ್ನಾ ಇನ್ನೂ ರೈತರಿಗೆ ತಲುಪಿಯೇ ಇಲ್ಲ. ಇದೊಂದು ಬೋಗಸ್ ಕಾರ್ಯಕ್ರಮ. ಈಗಿರುವ ಸರ್ಕಾರ ₹ 8900 ಸಾವಿರ ಕೋಟಿಯನ್ನು ಭರಿಸುವುದಿಲ್ಲ. ಅದೇನಿದ್ದರೂ ಮುಂದೆ ಬರುವ ಸರ್ಕಾರವೇ ಭರಿಸಬೇಕು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಿದ 20 ದಿನಗಳಲ್ಲಿ ಮತ್ತೇ ರೈತರ ಖಾತೆಗೆ ಜಮಾ ಮಾಡಿದ್ದೆ. ಆದರೆ ಈ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಕೋಟಿ ಕೋಟಿ ವೆಚ್ಚ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಧನಾ ಸಮಾವೇಶದ ಹೆಸರಿನಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಸಮಾವೇಶಗಳಿಗೆ ಬರುವ ಜನರಿಗೆ ₨ 300-400 ನೀಡಿ ಕಳೆದ ಐದು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳನ್ನು ಚುನಾವಣೆಯ ಸಂದರ್ಭದಲ್ಲಿ ಮತ್ತೆ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ದೂರಿದರು.

ನೀರಾವರಿ ಹೆಸರಿನಲ್ಲಿ ಮುಖ್ಯಮಂತ್ರಿ ಆದಿಯಾಗಿ ಹಲವಾರು ಮಂತ್ರಿಗಳು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಹಿಂದೂ ಜನರ ರಕ್ಷಣೆ ಮಾಡುತ್ಥೇವೆ ಎನ್ನುತ್ತಾರೆ, ಕಾಂಗ್ರೆಸ್‌ನವರು ಮುಸ್ಲಿಂ ಹಾಗೂ ದಲಿತರ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ, ಸ್ವಾಮಿ ನಾವು ಅಖಂಡ ಕರ್ನಾಟಕದ 6 ಕೋಟಿ ಜನರು ನೆಮ್ಮದಿಯಿಂದಿರುವಂತೆ ನಾವು ರಕ್ಷಣೆ ಕೊಡುತ್ತೇವೆಂದರು. ನಾವು ಜಾತಿ-ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಅವರ ಹೆಣದ ಮೇಲೆ ರಾಜಕಾರಣ ಮಾಡುವುದಿಲ್ಲ ಎಂದರು.

ಈ ವೇಳೆ ಮಾಜಿ ಸಚಿವ ಎಚ್. ವಿಶ್ವನಾಥ, ಸುನೀತಾ ಹೊನಕಾಂಡೆ, ಪ್ರಕಾಶ ಹಳ್ಳೋಳ್ಳಿ, ಗಿರೀಶ ಬುಟಾಳೆ, ಶ್ರೀಶೈಲ ಹಳದಮಳ, ರಾಜೇಂದ್ರ ಐಹೋಳೆ, ಶಂಕರ ಮಾಡಲಗಿ, ಗಂಗಾಧರ ಕುಲಕರ್ಣಿ, ರಮೇಶ ಬಿರಡಿಕರ, ಬಿ.ಆರ್. ಪಾಟೀಲ ಇದ್ದರು

ಅಚ್ಚೆ ದಿನ ಯಾರಿಗೆ ಬಂದಿವೆ:

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅಚ್ಚೆ ದಿನ ಬರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿಯವರು ಹೇಳಿದ್ದರು. ಆದರೆ ನಾಲ್ಕು ವರ್ಷಗಳು ಗತಿಸಿದರೂ ಯಾರಿಗೆ ಅಚ್ಚೇ ದಿನ ಬಂದಿವೆ. ಅದು ಕೇವಲ ಅದಾನಿ, ಅಂಬಾನಿಯಂಥವರಿಗೆ ಅಚ್ಚೆ ದಿನ ಬಂದಿವೆ ಹೊರತು ಸಾಮಾನ್ಯ ಜನರಿಗೆ ಅಚ್ಚೆ ದಿನ ಬಂದಿಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.